ಉಕ್ರೇನ್ ಮೇಲೆ 120 ಕ್ಷಿಪಣಿ ಮಳೆಗರೆದ ರಶ್ಯ: ಪ್ರಮುಖ ನಗರಗಳು ಕಗ್ಗತ್ತಲಲ್ಲಿ

ಕೀವ್, ಡಿ.29: ಉಕ್ರೇನ್ ರಾಜಧಾನಿ ಕೀವ್ ಸೇರಿದಂತೆ ಹಲವು ನಗರಗಳ ಮೇಲೆ ರಶ್ಯ 120ಕ್ಕೂ ಅಧಿಕ ಕ್ಷಿಪಣಿಗಳನ್ನು ಪ್ರಯೋಗಿಸಿದ್ದು ಪ್ರಮುಖ ನಗರಗಳಲ್ಲಿ ವಿದ್ಯುತ್ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ ಎಂದು ವರದಿಯಾಗಿದೆ.
ದೇಶದಾದ್ಯಂತ ವಾಯುದಾಳಿ ಮುನ್ನೆಚ್ಚರಿಕೆಯ ಸೈರನ್ ಮೊಳಗಿಸಲಾಗಿದ್ದು ಜನತೆ ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಸೂಚಿಸಲಾಗಿದೆ. ಬುಧವಾರ ರಾತ್ರಿ ಆಯ್ದ ಪ್ರದೇಶಗಳ ಮೇಲೆ ರಶ್ಯ ಸ್ಫೋಟಕಗಳಿರುವ ಡ್ರೋನ್ ಗಳಿಂದ ದಾಳಿ ನಡೆಸಿದ ಬಳಿಕ ವಾಯು ಮತ್ತು ಸಮುದ್ರ ಆಧರಿತ ಕ್ರೂಸ್ ಕ್ಷಿಪಣಿಗಳ ಮಳೆಗರೆದಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಅವರ ಸಲಹೆಗಾರ ಮಿಖಾಯಿಲೊ ಪೊಡೊಲ್ಯಾಕ್ ಹೇಳಿದ್ದಾರೆ.
ಡ್ರೋನ್ ದಾಳಿಯಾದ ತಕ್ಷಣ ವಾಯುರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಿ ಹಲವು ಡ್ರೋನ್ ಹಾಗೂ ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ. ಆದರೆ ಕೆಲವು ಕ್ಷಿಪಣಿಗಳು ಉಕ್ರೇನ್ ವಾಯುವಲಯವನ್ನು ಬೇಧಿಸಿ ಒಳನುಗ್ಗಿ ಗುರಿಗೆ ಅಪ್ಪಳಿಸಿದ್ದರಿಂದ ವಿದ್ಯುತ್ ಮತ್ತು ನೀರಿನ ಪೂರೈಕೆ ವ್ಯವಸ್ಥೆಗೆ ಹಾನಿಯಾಗಿದೆ. ಈ ವಲಯದಲ್ಲಿ ತಾಪಮಾನ ಅತ್ಯಂತ ಕನಿಷ್ಟ ಮಟ್ಟದಲ್ಲಿರುವುದರಿಂದ ವಿದ್ಯುತ್ ಪೂರೈಕೆಯಿಲ್ಲದೆ ಜನ ತೀವ್ರ ಸಮಸ್ಯೆಗೆ ಒಳಗಾದರು.
ಕೀವ್ ನಗರದ ಜನವಸತಿ ಪ್ರದೇಶಕ್ಕೆ ಕ್ಷಿಪಣಿ ಅಪ್ಪಳಿಸಿದ್ದರಿಂದ 14 ವರ್ಷದ ಬಾಲಕಿ ಸಹಿತ ಕನಿಷ್ಟ 3 ಮಂದಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೇಯರ್ ವಿಟಾಲಿ ಕ್ಲಿಷೆಂಕೊ ಹೇಳಿದ್ದಾರೆ. ಪೂರ್ವ ಉಕ್ರೇನ್ನಲ್ಲಿರುವ, ಉಕ್ರೇನ್ ನ 2ನೇ ಅತೀ ದೊಡ್ಡ ನಗರ ಖಾರ್ಕಿವ್ ಹಾಗೂ ಪೋಲ್ಯಾಂಡ್ನೊಂದಿಗಿನ ಗಡಿಪ್ರದೇಶದ ಸನಿಹದಲ್ಲಿರುವ ಲೀವ್ ನಗರದಲ್ಲೂ ಹಲವು ಸ್ಫೋಟ ಕೇಳಿಬಂದಿದೆ ಎಂದವರು ಮಾಹಿತಿ ನೀಡಿದ್ದಾರೆ.
ಕೀವ್ ನ 90%ದಷ್ಟು ಪ್ರದೇಶಕ್ಕೆ ವಿದ್ಯುತ್ ಪೂರೈಕೆ ಅಸ್ತವ್ಯಸ್ತಗೊಂಡಿದ್ದು ಟ್ರಾಮ್ಸ್ ಮತ್ತು ಟ್ರಾಲಿ ಬಸ್ಸುಗಳು ಕಾರ್ಯನಿರ್ವಹಿಸುತ್ತಿಲ್ಲ . ಹಲವು ಪ್ರದೇಶಗಳಿಗೆ ನೀರು ಪೂರೈಕೆಯೂ ಸ್ಥಗಿತಗೊಂಡಿದೆ ಎಂದು ಲೀವ್ ನಗರದ ಮೇಯರ್ ಆ್ಯಂಡ್ರಿಯ್ ಸದೋವಿ ಹೇಳಿದ್ದಾರೆ.