ಅಫ್ಘಾನ್ ನಲ್ಲಿನ ಪ್ರಮುಖ ನೆರವು ಯೋಜನೆಗಳು ಸ್ಥಗಿತ: ವಿಶ್ವಸಂಸ್ಥೆ

ನ್ಯೂಯಾರ್ಕ್, ಡಿ.29: ಮಹಿಳೆಯರು ಎನ್ಜಿಒ(ಸರ್ಕಾರೇತರ ಸಂಘಟನೆ)ಗಳಲ್ಲಿ ಕೆಲಸ ಮಾಡುವುದನ್ನು ತಾಲಿಬಾನ್ ಆಡಳಿತ ನಿಷೇಧಿಸಿದ ಬಳಿಕ ಅಫ್ಘಾನ್ನಲ್ಲಿನ ಕೆಲವು ನಿರ್ಣಾಯಕ ನೆರವು ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವಿಶ್ವಸಂಸ್ಥೆ ಬುಧವಾರ ಹೇಳಿದ್ದು ಇತರ ಕೆಲವು ಉಪಕ್ರಮಗಳನ್ನೂ ಸ್ಥಗಿತಗೊಳಿಸುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ.
ನೆರವು ವಿತರಣೆ ಕಾರ್ಯದಲ್ಲಿ ಮಹಿಳೆಯರ ಭಾಗವಹಿಸುವಿಕೆ ಚರ್ಚೆಯ ವಿಷಯವೇ ಅಲ್ಲ ಮತ್ತು ಅವರ ಭಾಗವಹಿಸುವಿಕೆ ಮುಂದುವರಿಯಬೇಕು. ಆದ್ದರಿಂದ ತಾಲಿಬಾನ್ ಆಡಳಿತ ತನ್ನ ನಿರ್ಧಾರವನ್ನು ಹಿಂಪಡೆಯಬೇಕು ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರ ಮತ್ತು ತುರ್ತುನೆರವು ಏಜೆನ್ಸಿಯ ಮುಖ್ಯಸ್ಥ ಮಾರ್ಟಿನ್ ಗ್ರಿಫಿತ್ಸ್ ಹಾಗೂ ಹಲವು ಅಂತರಾಷ್ಷ್ರೀಯ ನೆರವು ಸಂಸ್ಥೆಗಳ ಜಂಟಿ ಹೇಳಿಕೆ ಆಗ್ರಹಿಸಿದೆ.
ಮಾನವೀಯ ಕೆಲಸದಿಂದ ಮಹಿಳೆಯರನ್ನು ನಿಷೇಧಿಸುವುದು ಎಲ್ಲಾ ಅಫ್ಘನ್ನರಿಗೆ ತಕ್ಷಣದ ಮಾರಣಾಂತಿಕ ಪರಿಣಾಮಗಳನ್ನು ಹೊಂದಿದೆ. ಮಹಿಳಾ ಸಿಬಂದಿಗಳ ಕೊರತೆಯಿಂದ ಈಗಾಗಲೇ ಕೆಲವು `ತುರ್ತು ನಿರ್ಣಾಯಕ' ಕ್ರಮಗಳು ತಾತ್ಕಾಲಿಕ ಸ್ಥಗಿತಗೊಂಡಿದೆ. ಒಂದು ಮಾನವೀಯ ಸಮುದಾಯವಾಗಿ, ನಮಗೀಗ ಎದುರಾಗಿರುವ ಕಾರ್ಯಾಚರಣೆಯ ನಿರ್ಬಂಧಗಳನ್ನು ನಿರ್ಲಕ್ಷಿಸಲಾಗುವುದಿಲ್ಲ. ನಾವು ಜೀವ ಉಳಿಸುವ, ಸಮಯ ನಿರ್ಣಾಯಕ ಚಟುವಟಿಕೆಗಳನ್ನು ಮುಂದುವರಿಸಲು ಪ್ರಯತ್ನಿಸುತ್ತೇವೆ. ಆದರೆ ಮಹಿಳಾ ಸಹಾಯ ಕಾರ್ಯಕರ್ತರಿಲ್ಲದೆ ನಾವು ತತ್ವಬದ್ಧ ಮಾನವೀಯ ನೆರವನ್ನು ಒದಗಿಸಲು ಸಾಧ್ಯವಿಲ್ಲದ ಕಾರಣ ಹಲವು ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕಿದೆ.
ಯಾವುದೇ ದೇಶವು ತನ್ನ ಅರ್ಧದಷ್ಟು ಜನಸಂಖ್ಯೆಯನ್ನು ಸಮಾಜಕ್ಕೆ ಕೊಡುಗೆ ನೀಡುವುದರಿಂದ ಹೊರಗಿಡಲು ಸಾಧ್ಯವಿಲ್ಲ ಎಂದು ಹೇಳಿಕೆ ತಿಳಿಸಿದೆ. ಯುನಿಸೆಫ್, ವಿಶ್ವ ಆಹಾರ ಕಾರ್ಯಕ್ರಮ, ವಿಶ್ವ ಆರೋಗ್ಯಸಂಸ್ಥೆ, ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮ, ನಿರಾಶ್ರಿತರು ಮತ್ತು ಮಾನವ ಹಕ್ಕುಗಳಿಗಾಗಿನ ವಿಶ್ವಸಂಸ್ಥೆ ಹೈಕಮಿಷನ್ ಮುಂತಾದ ಸಂಸ್ಥೆಗಳ ಮುಖ್ಯಸ್ಥರು ಹೇಳಿಕೆಗೆ ಸಹಿ ಹಾಕಿದ್ದಾರೆ.
ಅಫ್ಘಾನ್ನ ಮೇಲೆ ತಾಲಿಬಾನ್ ನಿಯಂತ್ರಣ ಸಾಧಿಸಿದ ಬಳಿಕ, ಬಾಲಕಿಯರು ಹೈಸ್ಕೂಲ್ಗೆ ಹೋಗುವುದನ್ನು ಕಳೆದ ಮಾರ್ಚ್ನಲ್ಲಿ ನಿಷೇಧಿಸಲಾಗಿತ್ತು. ಕಳೆದ ವಾರ ಮಹಿಳೆಯರು ವಿವಿ ಪ್ರವೇಶಿಸುವುದನ್ನು ನಿಷೇಧಿಸಲಾಗಿತ್ತು. ಜತೆಗೆ, ವಿದೇಶದ ಸಂಸ್ಥೆಗಳು ಹಾಗೂ ಎನ್ಜಿಒಗಳಲ್ಲಿ ಮಹಿಳಾ ಸಹಾಯ ಕಾರ್ಯಕರ್ತರನ್ನು ನಿಷೇಧಿಸಲಾಗಿದೆ.
ಮಹಿಳಾ ಕಾರ್ಯಕರ್ತರಿಲ್ಲದೆ ನೆರವು ತಲುಪಿಸುವ ಕಾರ್ಯಕ್ರಮ ಸಾಧ್ಯವಿಲ್ಲದ ಕಾರಣ ಅಫ್ಘಾನ್ನಲ್ಲಿ ನೆರವು ವಿತರಿಸುವ ಕಾರ್ಯಕ್ರಮವನ್ನು ಅಮಾನತುಗೊಳಿಸುವುದಾಗಿ ವಿಶ್ವದ 4 ಪ್ರಮುಖ ನೆರವು ವಿತರಣಾ ಸಂಸ್ಥೆಗಳು ರವಿವಾರ ಘೋಷಿಸಿವೆ. `ಕ್ಷಾಮ ಪರಿಸ್ಥಿತಿ, ಆರ್ಥಿಕ ಕುಸಿತ, ಬೇರೂರಿರುವ ಬಡತನ ಮತ್ತು ಚಳಿಗಾಲದ ಸವಾಲು ದೇಶಕ್ಕೆ ಎದುರಾಗಿದ್ದು 28 ದಶಲಕ್ಷಕ್ಕೂ ಅಧಿಕ ಜನತೆ ಬದುಕುಳಿಯಲು ಸಹಾಯದ ಅಗತ್ಯವಿರುವ ಸಮಯದಲ್ಲಿ ಮಹಿಳಾ ಕಾರ್ಯಕರ್ತರ ಮೇಲೆ ನಿಷೇಧ ಜಾರಿಯಾಗಿದೆ.
ಸ್ವತಂತ್ರ, ತಾತ್ವಿಕ, ಜೀವರಕ್ಷಕ ಸಹಾಯವನ್ನು ಅಗತ್ಯವಿರುವ ಎಲ್ಲಾ ಮಹಿಳೆಯರು, ಪುರುಷರು ಮತ್ತು ಮಕ್ಕಳಿಗೆ ತಲುಪಿಸುವ ನಮ್ಮ ಬದ್ಧತೆ ದೃಢವಾಗಿದೆ ಎಂದು ವಿಶ್ವಸಂಸ್ಥೆ ಹಾಗೂ ಇತರ ಪ್ರಮುಖ ಸಂಘಟನೆಗಳಾದ `ವರ್ಲ್ಡ್ ವಿಷನ್ ಇಂಟರ್ನ್ಯಾಷನಲ್, ಕ್ಯಾರ್ ಇಂಟರ್ನ್ಯಾಷನಲ್, ಸೇವ್ ದಿ ಚಿಲ್ಡ್ರನ್, ಮರ್ಸಿ ಕಾರ್ಪ್ಸ್' ಹೇಳಿಕೆ ನೀಡಿದೆ.