ದ.ಕೊರಿಯಾ: ಅಗ್ನಿ ದುರಂತದಲ್ಲಿ 5 ಮಂದಿ ಮೃತ್ಯು; 37 ಮಂದಿಗೆ ಗಾಯ

ಸಿಯೋಲ್, ಡಿ.29: ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್ ಬಳಿಯ ಹೆದ್ದಾರಿಯಲ್ಲಿ ಗುರುವಾರ ಸಂಭವಿಸಿದ ಭೀಕರ ಅಗ್ನಿದುರಂತದಲ್ಲಿ ಕನಿಷ್ಟ 5 ಮಂದಿ ಮೃತಪಟ್ಟಿದ್ದು ಸುಮಾರು 37 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಅತ್ಯಧಿಕ ವಾಹನಸಂಚಾರ ಇರುವ ಜಿಯಾಂಗಿನ್ ಎಕ್ಸ್ಪ್ರೆಸ್ವೇಯಲ್ಲಿ ಸ್ಥಳೀಯ ಕಾಲಮಾನ ಮಧ್ಯಾಹ್ನ 1:49ಕ್ಕೆ ಬೆಂಕಿ ದುರಂತ ಸಂಭವಿಸಿದೆ.
ವಾಹನಗಳ ದಟ್ಟಣೆಯ ಕಾರಣ ಹೆದ್ದಾರಿಯಲ್ಲಿ ಆಮೆಗತಿಯ ಸಂಚಾರವಿತ್ತು. ಆದ್ದರಿಂದ ಬೆಂಕಿಯಿಂದ ತಪ್ಪಿಸಿಕೊಳ್ಳಲು ವಾಹನ ಸವಾರರಿಗೆ ಸಾಧ್ಯವಾಗಲಿಲ್ಲ. ಟ್ರಕ್ ಮತ್ತು ಬಸ್ಸುಗಳು ಡಿಕ್ಕಿಯಾದ ಬಳಿಕ ಬೆಂಕಿ ಹತ್ತಿಕೊಂಡಿದೆ. ಸ್ಫೋಟದ ಸದ್ದೂ ಕೇಳಿಸಿದೆ ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಆದರೆ ದುರಂತಕ್ಕೆ ನಿಖರ ಕಾರಣ ಸ್ಪಷ್ಟವಾಗಿಲ್ಲ. 44 ವಾಹನಗಳಿಗೆ ಹಾನಿಯಾಗಿದೆ. 5 ಮಂದಿ ಮೃತಪಟ್ಟಿದ್ದು 37 ಮಂದಿ ಗಾಯಗೊಂಡಿದ್ದಾರೆ. ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತುರ್ತುಸೇವಾ ವಿಭಾಗದ ಅಧಿಕಾರಿ ಹೇಳಿದ್ದಾರೆ.
Next Story