ತರೀಕೆರೆ: ತಾಹೀರ ತಸ್ನೀಮ್ ಗೆ 'ಬೆಸ್ಟ್ ಪೇಪರ್ ಪ್ರಸೆಂಟೇಷನ್' ಪ್ರಶಸ್ತಿ

ತರೀಕೆರೆ, ಡಿ.29: ಪಟ್ಟಣದ ಪುರಸಭೆ ಪರಿಸರ ಅಭಿಯಂತರೆ ತಾಹೀರ ತಸ್ನೀಮ್ ಅವರು ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನದಲ್ಲಿ ತರೀಕೆರೆ ಪುರಸಭೆಯಲ್ಲಿ ಸ್ವಚ್ಛತೆ ನಿರ್ವಹಣೆಯಲ್ಲಿ ಅಳವಡಿಸಿಕೊಂಡಿರುವ ಉತ್ತಮ ಪದ್ಧತಿಗಳನ್ನು ಪ್ರಸ್ತುತ ಪಡಿಸುವ ಮೂಲಕ ಐಕಾನ್ ಎಸ್.ಡಬ್ಲೂ.ಎಂ.ಸಿ.ಎ.-2022ರ ಎಕ್ಸಲೆನ್ಸಿ ಅವಾರ್ಡ್ ಫಾರ್ ಬೆಸ್ಟ್ ಪೇಪರ್ ಪ್ರಸೆಂಟೇಷನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇತ್ತೀಚೆಗೆ ತಿರುಪತಿಯ ಶ್ರೀವೆಂಕಟೇಶ್ವರ ವಿಶ್ವ ವಿದ್ಯಾನಿಲಯದಲ್ಲಿ 12 ನೇ ಐಕಾನ್ ಎಸ್.ಡಬ್ಲೂ.ಎಂ.ಸಿ.ಎ. 2022ರ ಸಮ್ಮೇಳನದಲ್ಲಿ ಸಮರ್ಥನೀಯ ತ್ಯಾಜ್ಯ ನಿರ್ವಹಣೆ ಮತ್ತು 'ಸರ್ಕ್ಯುಲರ್ ಎಕಾನಮಿ' ಕುರಿತು ವಿಷಯಗೋಷ್ಠಿಗಳನ್ನು ಅಯೋಜಿಲಾಗಿತ್ತು. ಗೋಷ್ಠಗಳಲ್ಲಿ ವಿವಿಧ ದೇಶಗಳು ಹಾಗೂ ಅನೇಕ ರಾಜ್ಯಗಳಿಂದ 700ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಕರ್ನಾಟಕ ರಾಜ್ಯದ ಸೀಮ್ಯಾಕ್ ಸಂಸ್ಥೆ ವತಿಯಿಂದ ಆಯ್ಕೆ ಮಾಡಲಾಗಿದ್ದ 11 ಮಂದಿ ಪ್ರತಿನಿಧಿಗಳಲ್ಲಿ ತಾಹೇರ ತಸ್ನೀಂ ಒಬ್ಬರಾಗಿದ್ದರು.
ಇಲ್ಲಿನ ಪುರಸಭೆ ಅಳವಡಿಸಿಕೊಂಡಿರುವ ವಿವಿಧ ಕಾರ್ಯಕ್ರಮಗಳು ಮೆಚ್ಚುಗೆಗೆ ಪಾತ್ರವಾಗಿವೆ. ಪೌರಾಡಳಿತ ನಿರ್ದೆಶನಾಲಯ, ಜಿಲ್ಲಾಡಳಿತ, ಕ್ಷೇತ್ರದ ಶಾಸಕರು, ಪುರಸಭೆ ಆಡಳಿತ ಹಾಗೂ ಪುರಸಭೆ ಮುಖ್ಯಾಧಿಕಾರಿಗಳ ಪ್ರೋತ್ಸಾಹ ಹಾಗೂ ನಿರಂತರ ಉತ್ತೇಜನದಿಂದಾಗಿ ಪ್ರಶಸ್ತಿ ಲಭಿಸಿದ್ದು, ಇದು ಪಟ್ಟಣದ ಸ್ವಚ್ಛತೆಯಲ್ಲಿ ಭಾಗವಹಿಸಿದ ಎಲ್ಲಾ ನಾಗರಿಕರಿಗೆ ಸಂದ ಗೌರವ ಎಂದು ಪ್ರಶಸ್ತಿ ಪುರಸ್ಕೃತ ತಾಹೀರ ತಸ್ನೀಮ್ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯಕ್ಕೆ ಏಕ ಮಾತ್ರ ಪ್ರಶಸ್ತಿಯನ್ನು ಗಳಿಸಿರುವ ತಾಹೀರ ತಸ್ನೀಮ್ ಇನ್ನು ಹೆಚ್ಚು ಮಾದರಿ ಕಾರ್ಯಕ್ರಮಗಳನ್ನು ರೂಪಿಸಿ ಯಶಸ್ಸನ್ನು ಗಳಿಸಲಿ ಎಂದು ರಾಜ್ಯ ಪೌರಾಡಳಿತ ನಿರ್ದೆಶನಾಲಯದ ನಿರ್ದೆಶಕಿ ಎನ್.ಮಂಜುಶ್ರೀ ಪತ್ರ ಮುಖೇನ ಅಭಿನಂದಿಸಿದ್ದಾರೆ.







