ಪುಟಿನ್ ತೊಡೆದುಹಾಕಲು ಅಮೆರಿಕ ಸಂಚು: ರಶ್ಯ ಆರೋಪ

ಮಾಸ್ಕೋ, ಡಿ.29: ವ್ಲಾದಿಮಿರ್ ಪುಟಿನ್ರನ್ನು ತೊಡೆದುಹಾಕುವ ಮೂಲಕ ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಸಂಚು ರೂಪಿಸಿದೆ ಎಂದು ರಶ್ಯದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ ಆರೋಪಿಸಿದ್ದಾರೆ.
ರಶ್ಯವನ್ನು ನಿಗ್ರಹಿಸುವ ಪಾಶ್ಚಿಮಾತ್ಯರ ಕಾರ್ಯನೀತಿಯು ಅತ್ಯಂತ ಅಪಾಯಕಾರಿಯಾಗಿದ್ದು ಪರಮಾಣು ಶಕ್ತಿಗಳ ನಡುವೆ ನೇರ ಮಿಲಿಟರಿ ಸಂಘರ್ಷದ ಅಪಾಯವನ್ನು ಹೊಂದಿದೆ. ವ್ಲಾದಿಮಿರ್ ಪುಟಿನ್ರನ್ನು ನಿವಾರಿಸುವ ಮೂಲಕ ರಶ್ಯಕ್ಕೆ ಮಾರಣಾಂತಿಕ ಹೊಡೆತ ನೀಡಲು ಮತ್ತು ಉಕ್ರೇನ್ ಯುದ್ಧ ಅಂತ್ಯಗೊಳಿಸಲು ಅಮೆರಿಕ ಪಿತೂರಿ ನಡೆಸಿದೆ ಎಂದವರು ಆರೋಪಿಸಿದ್ದಾರೆ.
ರಶ್ಯ ವಿರುದ್ಧ ಪ್ರತಿಬಂಧಕ ಪರಮಾಣು ದಾಳಿ ನಡೆಸುವಂತೆ ನೇಟೊ ದೇಶಗಳನ್ನು ಒತ್ತಾಯಿಸಿರುವುದಾಗಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಒಪ್ಪಿಕೊಂಡಿದ್ದಾರೆ. ಉಕ್ರೇನ್ ಸಂಘರ್ಷದ ನೆಪದಲ್ಲಿ ನಮ್ಮ ದೇಶವನ್ನು ದುರ್ಬಲಗೊಳಿಸುವುದು ಅಥವಾ ನಾಶಗೊಳಿಸುವುದು ಅಮೆರಿಕ ಮತ್ತದರ ನೇಟೊ ಮಿತ್ರರ ಕಾರ್ಯತಂತ್ರ ಎಂಬುದು ರಹಸ್ಯವಾಗಿ ಉಳಿದಿಲ್ಲ ಎಂದ ಲಾವ್ರೋವ್, ಪರಮಾಣು ಯುದ್ಧದ ದುಸ್ಸಾಹಸಕ್ಕೆ ಮುಂದಾಗದAತೆ ಪಾಶ್ಚಿಮಾತ್ಯ ದೇಶಗಳಿಗೆ ಎಚ್ಚರಿಕೆ ನೀಡಿದ್ದಾರೆ.





