ಬ್ರಿಟಿಷ್ ಮುಸ್ಲಿಮರ ವಿರುದ್ಧ ಹುಸಿಬಾಂಬ್ ಬೆದರಿಕೆಯ ಆರೋಪಿಗೆ ಪೆರೋಲ್ ನಿರಾಕರಣೆ

ಲಂಡನ್, ಡಿ.29: ಬ್ರಿಟನ್ನಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಹುಸಿ ಕಾರು ಬಾಂಬ್ ಬೆದರಿಕೆ ಒಡ್ಡಿದ ಆರೋಪದಲ್ಲಿ ಬಂಧನಲ್ಲಿರುವ ಕೈಲ್ ಹೋವ್ಗೆ ಪೆರೋಲ್ ನಿರಾಕರಿಸಲಾಗಿದೆ.
ಲೀಸೆಸ್ಟರ್ ನಗರದಲ್ಲಿನ ಮುಸ್ಲಿಮ್ ಸಮುದಾಯ ಕೇಂದ್ರಕ್ಕೆ ಹುಸಿ ಬಾಂಬ್ ಕರೆ ಮಾಡಿದ ಪ್ರಕರಣದಲ್ಲಿ ಹೋವ್ಗೆ 28 ತಿಂಗಳ ಜೈಲುಶಿಕ್ಷೆಯಾಗಿದೆ. `ತಾನು ಅಮೋನಿಯಂ ನೈಟ್ರೇಟ್ ಬಾಂಬ್ ತಯಾರಿಸಿದ್ದೇನೆ. ನಮ್ಮ ಸಮಾಜಕ್ಕೆ ಹೊಂದಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾವು ಬಿಳಿಯರು, ನಾವು ಇಂಗ್ಲಿಷರು' ಎಂದು ಆತ ಪೊಲೀಸರಿಗೆ ಫೋನ್ ಮಾಡಿ ಹೇಳಿದ್ದ.
ಈ ಪ್ರಕರಣದಲ್ಲಿ ಹೋವ್ಗೆ 28 ತಿಂಗಳ ಜೈಲುಶಿಕ್ಷೆಯಾಗಿತ್ತು. ಆದರೆ 50%ದಷ್ಟು ಅವಧಿಯ ಶಿಕ್ಷೆ ಮುಗಿಸಿದೊಡನೆ ಹೋವ್ ಅವಧಿಪೂರ್ವ ಬಿಡುಗಡೆಗೆ ಅರ್ಜಿ ಸಲ್ಲಿಸಿದ್ದು ಅದನ್ನು ಮಾನ್ಯ ಮಾಡುವ ನಿರೀಕ್ಷೆಯಿತ್ತು. ಆದರೆ ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಬ್ರಿಟನ್ನ ನ್ಯಾಯ ಕಾರ್ಯದರ್ಶಿ ಡೊಮಿನಿಕ್ ರಾಬ್, ಹೋವ್ ಈಗಲೂ ಸಾರ್ವಜನಿಕರಿಗೆ ಬೆದರಿಕೆಯಾಗಿಯೇ ಮುಂದುವರಿದಿದ್ದಾನೆ ಎಂದು ಪ್ರತಿಪಾದಿಸಿದ್ದರು. ಇದೀಗ ಹೋವ್ಗೆ ಪೆರೋಲ್ ನಿರಾಕರಿಸಲಾಗಿದೆ.





