ಮೆಗಾ ನಾಟಕವಾಗಿ ‘ಕಿತ್ತೂರು ಚೆನ್ನಮ್ಮ’

‘ಕಿತ್ತೂರು ಚೆನ್ನಮ್ಮ’ ನಾಟಕಕ್ಕೆ ಧಾರವಾಡದ ಕೆಸಿಡಿ ಅಂಗಳದಲ್ಲಿ 90 ಅಡಿ ಉದ್ದ ಹಾಗೂ ನಲವತ್ತು ಅಡಿ ಎತ್ತರದ ಕಿತ್ತೂರು ಕೋಟೆಯನ್ನು ನಿರ್ಮಿಸಿದ್ದು ಗಮನ ಸೆಳೆಯಿತು. ಜೊತೆಗೆ ನೂರು ಕಲಾವಿದರು, ಐವತ್ತು ನೃತ್ಯಕಲಾವಿದರನ್ನು ಒಳಗೊಂಡ ಈ ನಾಟಕ ನೆರೆದ ಎಲ್ಲ ಪ್ರೇಕ್ಷಕರಿಗೆ ತಲುಪಲಿ ಎನ್ನುವ ಕಾರಣಕ್ಕೆ ಧ್ವನಿಮುದ್ರಿತ ಸಂಭಾಷಣೆ ಹಾಗೂ ಹಾಡುಗಳಿಗೆ ಕಲಾವಿದರು ಅಭಿನಯಿಸಿದರು.
ಕಳೆದ ಶನಿವಾರ ಹಾಗೂ ರವಿವಾರ (ಡಿಸೆಂಬರ್ 24, 25) ಧಾರವಾಡದ ಕರ್ನಾಟಕ ಕಾಲೇಜಿನ ಆಟದ ಮೈದಾನ ಅಕ್ಷರಶಃ ಜಾತ್ರೆಯ ರಾತ್ರಿಯಾಗಿತ್ತು. ಸಾವಿರಾರು ಸಂಖ್ಯೆಯ ಪ್ರೇಕ್ಷಕರು ‘ಕಿತ್ತೂರು ಚೆನ್ನಮ್ಮ’ ನಾಟಕ ನೋಡಿ ಕಣ್ತುಂಬಿಕೊಂಡರು. ಎರಡು ದಿನಗಳವರೆಗೆ ನಡೆದ ನಾಟಕ ಪ್ರದರ್ಶನ ಹೌಸ್‌ಫುಲ್ ಆಗಿತ್ತು. ಹಾಕಿದ್ದ ಕುರ್ಚಿಗಳು ಸಾಲದೆ ಕಟ್ಟೆಯ ಮೇಲೆ ಕುಳಿತು, ನಿಂತು ನಾಟಕ ನೋಡಿದವರಿದ್ದಾರೆ. ಹೀಗೆ ಧಾರವಾಡ ರಂಗಾಯಣ ಪ್ರಸ್ತುತಪಡಿಸಿದ ‘ಕಿತ್ತೂರು ಚೆನ್ನಮ್ಮ’ ನಾಟಕ ಯಶಸ್ವಿಯಾಯಿತು. ಈಮೂಲಕ ಧಾರವಾಡ ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ ಅವರ ಒಂದು ವರ್ಷದ ಯೋಜನೆ ಸಾರ್ಥಕ ಪಡೆದುಕೊಂಡಿತು. ಅವರ ದೊಡ್ಡ ಪ್ರಯತ್ನಕ್ಕೆ ದೊಡ್ಡ ಗೆಲುವು ಸಿಕ್ಕಿದೆ. ಆದರೆ ಅವರು ರಂಗದ ಮೇಲೆ ಬಂದಾಗೆಲ್ಲ ‘‘ಭೋಲೋ ಭಾರತ್ ಮಾತಾ ಕಿ’’ ಎಂದು ಪ್ರತೀ ಸಲ ಹೇಳುವ ಅಗತ್ಯ ಇರಲಿಲ್ಲ. ಹಾಗೆ ಹೇಳಿದಾಗೆಲ್ಲ ರಾಜಕೀಯ ಪಕ್ಷಗಳ ಕಾರ್ಯಕ್ರಮದಂತೆ ಅನ್ನಿಸುತ್ತಿತ್ತು. ಈ ದೇಶದ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಹೋರಾಟಗಾರ್ತಿ, ವೀರ ವನಿತೆ, ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ ಎಂಬ ಬಿರುದಾಂಕಿತಗಳಿಂದ ಹೆಸರಾಗಿರುವ ‘ಕಿತ್ತೂರು ಚೆನ್ನಮ್ಮ’ ನಾಟಕಕ್ಕೆ ಧಾರವಾಡದ ಕೆಸಿಡಿ ಅಂಗಳದಲ್ಲಿ 90 ಅಡಿ ಉದ್ದ ಹಾಗೂ ನಲವತ್ತು ಅಡಿ ಎತ್ತರದ ಕಿತ್ತೂರು ಕೋಟೆಯನ್ನು ನಿರ್ಮಿಸಿದ್ದು ಗಮನ ಸೆಳೆಯಿತು. ಜೊತೆಗೆ ನೂರು ಕಲಾವಿದರು, ಐವತ್ತು ನೃತ್ಯಕಲಾವಿದರನ್ನು ಒಳಗೊಂಡ ಈ ನಾಟಕ ನೆರೆದ ಎಲ್ಲ ಪ್ರೇಕ್ಷಕರಿಗೆ ತಲುಪಲಿ ಎನ್ನುವ ಕಾರಣಕ್ಕೆ ಧ್ವನಿಮುದ್ರಿತ ಸಂಭಾಷಣೆ ಹಾಗೂ ಹಾಡುಗಳಿಗೆ ಕಲಾವಿದರು ಅಭಿನಯಿಸಿದರು. ಕೆಲ ಬಾರಿ ಸಂಭಾಷಣೆಗೆ ಅನುಗುಣವಾಗಿ ಕೈ ಉದ್ದುದ್ದ ಮಾಡುತ್ತ ಅಭಿನಯಿಸಿದ್ದು ಅನಗತ್ಯವಾಗಿತ್ತು. ಅದರಲ್ಲೂ ಮಲ್ಲಸರ್ಜ ಪಾತ್ರಧಾರಿ ಎಲ್ಲ ಮಾತುಗಳಿಗೂ ಉದ್ದುದ್ದ ಕೈ ಮಾಡುವುದು ಬೇಕಿರಲಿಲ್ಲ. ಗಮನಾರ್ಹ ಎಂದರೆ ಆನೆ, ಕುದುರೆ, ಒಂಟೆಗಳನ್ನು ಬಳಸಿಕೊಂಡು ಈ ನಾಟಕ ಪ್ರದರ್ಶನ ಕಂಡಿತು. ಗುಬ್ಬಿ ವೀರಣ್ಣ ಅವರು ಜೀವಂತ ಆನೆ, ಕುದುರೆಗಳನ್ನು ತಮ್ಮ ನಾಟಕಗಳಿಗೆ ಬಳಸಿಕೊಂಡಿದ್ದರು ಎಂಬುದನ್ನು ಕೇಳಿದ್ದ ಪ್ರೇಕ್ಷಕರಿಗೆ ಈಗ ಮತ್ತೆ ಜೀವಂತ ಆನೆ, ಒಂಟೆ, ಕುದುರೆಗಳನ್ನು ನಾಟಕಕ್ಕೆ ತಂದಿದ್ದು ಖುಷಿ ಕೊಟ್ಟಿತು. ಚೆನ್ನಮ್ಮಳನ್ನು ಲಗ್ನವಾಗುವ ಮಲ್ಲಸರ್ಜ ದೇಸಾಯಿ, ಬೆಳಗಾವಿ ಜಿಲ್ಲೆಯ ಕಾಕತಿಯಿಂದ ಕಿತ್ತೂರಿಗೆ ಕರೆದುಕೊಂಡು ಬರುವ ಮೊದಲ ದೃಶ್ಯವೇ ಗಮನ ಸೆಳೆಯಿತು. ಆನೆ, ಒಂಟೆ, ಕುದುರೆಗಳ ಮೆರವಣಿಗೆಯೊಂದಿಗೆ ಚೆನ್ನಮ್ಮಳನ್ನು ಮೇನೆಯಲ್ಲಿ ಕರೆತರಲಾಯಿತು. ಈ ಮೆರವಣಿಗೆಗೆ ಜಗ್ಗಲಿಗೆ ಮೇಳ, ಕರಡಿ ಮಜಲು, ಡೊಳ್ಳು ಕುಣಿತ, ನಂದಿಕೋಲು ಕುಣಿತ ಮೆರುಗು ನೀಡಿದವು. ದಸರಾ ಸಂದರ್ಭದಲ್ಲಿ ನಡೆದ ಬನ್ನಿ ಪೂಜೆಯ ದೃಶ್ಯಕ್ಕೆ ಮತ್ತೆ ಆನೆ, ಒಂಟೆ, ಕುದುರೆಗಳು ಬಂದವು. ಅದರಲ್ಲೂ ಕುದುರೆಯನ್ನು ಏರಿ ಚೆನ್ನಮ್ಮ ರಂಗದ ಮೇಲೆ ಬಂದಾಗ ಪ್ರೇಕ್ಷಕರಿಂದ ಜೋರಾಗಿ ಚಪ್ಪಾಳೆ ಬಂದವು. ಇಡೀ ನಾಟಕದ ಉದ್ದಕ್ಕೂ ದೊಡ್ಡಾಟ, ಸಣ್ಣಾಟ, ಪಾರಿಜಾತ, ಲಾವಣಿ ಗೀತೆ, ಗೀಗಿಪದ, ಜೋಗುಳ ಹಾಡು ಬಳಸಿಕೊಂಡಿದ್ದು ಗಮನಾರ್ಹ. ಚೆನ್ನಮ್ಮನ ಬಾಲ್ಯದ ದೃಶ್ಯಗಳಲ್ಲಿ ‘‘ಹತ್ತಿಕಟಿಗಿ ಬತ್ತಿಕಟಿಗಿ
ಬಾವನವರ ಬಸವನವರ’’
ಎಂದು ಹಾಡಿದ ನಂತರ
‘‘ಕೈ ಕೈ ಎಲ್ಲಿ ಹೋದ್ವು?
ಕದ್ದ ಹಿಂದ ಹೋದ್ವು
ಕದ ಏನು ಕೊಡ್ತು
ಕಟಿಗಿ ಕೊಡ್ತು
ಕಟಿಗಿ ಏನು ಮಾಡ್ದಿ?
ಒಲ್ಯಾಗ ಹಾಕಿದೆ
ಒಲಿ ಏನು ಕೊಡ್ತು?...’’
ಕೊನೆಗೆ;
‘‘ಕತ್ತಿ ಕೊಡ್ತು
ಕತ್ತಿ ಏನು ಮಾಡ್ದಿ?
ಯುದ್ಧ ಮಾಡಿದೆ’’
ಎಂದು ಹೇಳಿದ ಕೂಡಲೇ ಚೆನ್ನಮ್ಮ ಕತ್ತಿವರಸೆ ನಡೆಸುವ ದೃಶ್ಯ ಶುರುವಾಯಿತು. ಹೀಗೆ ಲಗ್ನದ ದೃಶ್ಯದ ನಂತರ ಚೆನ್ನಮ್ಮ ಬೆಳೆದು ಬಂದ ಬಗೆಯ ಫ್ಲ್ಯಾಶ್‌ಬ್ಯಾಕ್ ದೃಶ್ಯಗಳು ಅನಾವರಣಗೊಂಡವು. ಕೂಸಾಗಿದ್ದಾಗ ಹೆಸರು ಇಡುವುದರಿಂದ ಹಿಡಿದು ಬಾಲ್ಯದ ಆಟಗಳೊಂದಿಗೆ ಬೆಳೆಯುವ ಚೆನ್ನಮ್ಮ, ಮಲ್ಲಸರ್ಜನ ಅರಮನೆಯ ಪ್ರವೇಶದೊಂದಿಗೆ ಕಿತ್ತೂರಿಗೆ ನೆಲೆಗೊಂಡ ದೃಶ್ಯಗಳನ್ನು ಕಟ್ಟಿಕೊಡಲಾಗಿದೆ. ಅದರಲ್ಲೂ ಅರಮನೆ ಪ್ರವೇಶಿಸಿದ ಚೆನ್ನಮ್ಮ, ಮಲ್ಲಸರ್ಜನೊಂದಿಗೆ ಅರಮನೆ ಮೇಲೆ ‘ಇದು ಮೊದಲ ಮಿಲನದ ರಾತ್ರಿ’ ಹಾಡಿಗೆ ನರ್ತಿಸುವ ಮೊದಲು ನಡೆಯುವ ಸಂಭಾಷಣೆ ಆಕರ್ಷಕ. ಅವರೊಂದಿಗೆ ಇತರ ಕಲಾವಿದರ ನೃತ್ಯ ಸೇರಿ ಸುಂದರ ದೃಶ್ಯಕಾವ್ಯದಂತಿತ್ತು. ನಂತರ ಪೇಶ್ವೆಯ ಕುತಂತ್ರದಿಂದ ಪುಣೆಯಲ್ಲಿ ಮಲ್ಲಸರ್ಜ ಬಂಧನವಾಗಿ ನರಳುವಾಗ ದೇವೇಂದ್ರಕುಮಾರ ಹಕಾರಿ ಅವರ ‘‘ಗುಬ್ಬಿಯೊಂದು ಗೂಡ ಕಟ್ಯಾದೊ, ಆ ಗೂಡಿನೊಳಗ ಜೀವ ಇಟ್ಟು ಎಲ್ಲ ಹೋಗ್ಯಾದೊ?, ಹಕ್ಕಿಯ ರೆಕ್ಕೆ ಯಾಕ ಕಿತ್ತಾದೊ? ಆ ರೆಕ್ಕೆಯೊಳಗ ಬರೆದ ಬಣ್ಣ ಅಳಿಸಿ ಹೋಗ್ಯಾದೊ?’’ ಎಂದು ರಾಘವ ಕಮ್ಮಾರ ಹಾಡಿದ ಹಾಡು ಹಿನ್ನೆಲೆಯಲ್ಲಿ ಕೇಳುತ್ತದೆ. ಹೀಗೆ ಮೂರು ವರ್ಷಗಳ ಬಂಧನದ ನಂತರ ಮಲ್ಲಸರ್ಜ ಉಳಿಯುವುದಿಲ್ಲ ಎಂಬ ಕಾರಣಕ್ಕೆ ಬಿಡುಗಡೆಗೊಳಿಸುತ್ತಾರೆ ಪೇಶ್ವೆಯವರು. ನಂತರ ಮಲ್ಲಸರ್ಜ ಅರಬಾವಿ ಮಠದ ಆವರಣದಲ್ಲಿ ನಿಧನರಾದ ನಂತರ ನಡೆಯುವ ಶವಯಾತ್ರೆಯ ಸಂದರ್ಭದಲ್ಲಿ ದೇವೇಂದ್ರಕುಮಾರ ಹಕಾರಿ ಅವರ ‘‘ಮಾತು ನುಂಗಿ ಮೌನ ಬೆಳೆದಾದೊ, ಆ ಮೌನದೊಳಗ ಮೋಡ ಹನಿಸಿ ಮಾಯವಾಗ್ಯಾದೊ’’ ಎನ್ನುವ ಹಾಡು ಹಾಗೂ ದೃಶ್ಯ ಮನಮಿಡಿಯಿತು. ನಂತರ ಚೆನ್ನಮ್ಮ, ಥ್ಯಾಕರೆಯೊಂದಿಗೆ ಹೋರಾಡಿ ಕೊಂದಿದ್ದರಿಂದ ಬ್ರಿಟಿಷ್ ಕಂಪೆನಿಗೆ ದೊಡ್ಡ ಆಘಾತವಾಯಿತು. ದೊಡ್ಡ ಸೇನೆಯೊಂದಿಗೆ ಚೆನ್ನಮ್ಮಳನ್ನು ಬಂಧಿಸಿ ಬೈಲಹೊಂಗಲದ ಸೆರೆಮನೆಯಲ್ಲಿಡುತ್ತಾರೆ. ಕೊನೆಗೆ ಸಂಗೊಳ್ಳಿ ರಾಯಣ್ಣ, ಬಿಚ್ಚುಗತ್ತಿ ಚೆನ್ನಬಸವಣ್ಣ ಅವರು ಜಂಗಮರ ವೇಷ ಧರಿಸಿ ಸೆರೆಮನೆಯಲ್ಲಿ ಚೆನ್ನಮ್ಮಳನ್ನು ಭೇಟಿಯಾಗುತ್ತಾರೆ. ಚೆನ್ನಮ್ಮ ಕಿತ್ತೂರನ್ನು ಉಳಿಸಿ, ಕಾಪಾಡಿ ಎಂದು ಕರೆಕೊಡುತ್ತಾಳೆ. ಬಳಿಕ ಸೆರೆಮನೆಯಲ್ಲಿ ಲಿಂಗಪೂಜೆಯೊಂದಿಗೆ ನಿಧನಳಾಗುತ್ತಾಳೆ. ಹೀಗೆ ಚೆನ್ನಮ್ಮ ಹಚ್ಚಿದ ಸ್ವಾತಂತ್ರ್ಯ ಸಂಗ್ರಾಮದ ಕಿಡಿಯೊಂದು ಜ್ವಾಲೆಯಾಗಿ ಮುಂದುವರಿಯಿತು, ಪ್ರೇರಣೆ ನೀಡಿತು ಎನ್ನುವುದನ್ನು ಎಲ್ಲ ಕಲಾವಿದರು ಕೈಯಲ್ಲಿ ದೀಪ ಹಿಡಿದುಕೊಂಡು ರಂಗದ ಮೇಲೆ ಬರುವುದರೊಂದಿಗೆ ನಾಟಕ ಮುಗಿಯುತ್ತದೆ. ಈ ಮೂಲಕ ಚೆನ್ನಮ್ಮಳ ಶೌರ್ಯ, ತ್ಯಾಗ ಹಾಗೂ ಬಲಿದಾನವನ್ನು ಇಂದಿನ ಯುವಜನತೆಗೆ ತಿಳಿಸುವ ಪ್ರಯತ್ನದಲ್ಲಿ ಈ ನಾಟಕ ಸಫಲವಾಗಿದೆ. ಈಗಾಗಲೇ ಮಹಾರಾಷ್ಟ್ರದಲ್ಲಿ ಶಿವಾಜಿ ಮಹಾರಾಜ ಕುರಿತ ‘ಜಾನತಾ ರಾಜಾ’ ನಾಟಕ ಪ್ರಸಿದ್ಧವಾಗಿದೆ. ಇದರ ಸ್ಫೂರ್ತಿಯಿಂದ ಸಿದ್ಧಗೊಂಡ ಈ ನಾಟಕದ ವೇಷಭೂಷಣಗಳೂ ಗಮನಾರ್ಹ. ತೆರೆಯ ಹಿಂದೆ ಪಠ್ಯ ಸಂಶೋಧನೆ/ರಚನೆ, ಪರಿಷ್ಕರಣೆ ಸಮಿತಿಯಲ್ಲಿ ಡಾ.ವೀರಣ್ಣ ರಾಜೂರ, ಡಾ.ಬಾಳಣ್ಣ ಸೀಗೆಹಳ್ಳಿ, ಸ.ರಾ.ಸುಳಕೊಡೆ, ಡಾ.ರಾಮಕೃಷ್ಣ ಮರಾಠೆ, ಕೆ.ಎಚ್.ನಾಯಕ, ಡಾ.ಅಮರೇಶ ಯತಗಲ್, ಡಾ.ಎ.ಬಿ.ವಗ್ಗರ, ಮಹೇಶ ಚೆನ್ನಂಗಿ, ಡಾ.ಡಿ.ಎ.ಉಪಾಧ್ಯ, ವಿಠಲ ಕೊಪ್ಪದ, ಎಸ್.ಎಸ್.ಕಬ್ಬೂರ, ಎಂ.ಎಸ್.ಮಾಳವಾಡ, ಡಾ.ಶಶಿಧರ ನರೇಂದ್ರ ಹಾಗೂ ಗದಿಗಯ್ಯ ಹಿರೇಮಠ. ತೆರೆಯ ಹಿಂದೆ ಸಹನಿರ್ದೇಶಕರಾಗಿ ವಿಶ್ವರಾಜ, ಕಲ್ಲಪ್ಪಪೂಜಾರ, ಸೂರ್ಯಕಲಾ ಅಪ್ಪಣ್ಣ, ಗೀತೆ ರಚನೆ ಸಮಿತಿಯಲ್ಲಿ ಬಿ.ಆರ್.ಪೊಲೀಸ್ ಪಾಟೀಲ ಹಾಗೂ ರಾಮು ಮೂಲಗಿ ಇದ್ದಾರೆ. ಅರುಣ ಭಟ್ ಹಾಗೂ ರಾಘವ ಕಮ್ಮಾರ ಅವರ ಸಂಗೀತವಿದೆ. ವಿಶ್ವನಾಥ ಮಂಡಿ ಅವರ ರಂಗವಿನ್ಯಾಸ, ಮಹೇಶ ಆಚಾರಿ ಅವರ ಪರಿಕರ, ವಿನಯ ಚವ್ಹಾಣ ಅವರ ಬೆಳಕಿನ ವಿನ್ಯಾಸ ಹಾಗೂ ವಸ್ತ್ರವಿನ್ಯಾಸ ಮುಕ್ತಾ ವರ್ಣೇಕರ ಅವರದು.