ರಿಷಭ್ ಪಂತ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಬಿಸಿಸಿಐ

ಹೊಸದಿಲ್ಲಿ: ದಿಲ್ಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಶುಕ್ರವಾರ ಭಾರತೀಯ ಕ್ರಿಕೆಟಿಗ ರಿಷಬ್ ಪಂತ್ ಅವರ ಚಲಾಯಿಸುತ್ತಿದ್ದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದ್ದು ಪಂತ್ ಜೀವಾಪಾಯದಿಂದ ಪಾರಾಗಿದ್ದಾರೆ.
ಪಂತ್ ರೂರ್ಕಿಯಲ್ಲಿರುವ ತನ್ನ ಮನೆಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಸದ್ಯ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಂತ್ ಅವರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ರಾಜ್ಯ ಸರಕಾರವೇ ಭರಿಸಲಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.
ಇದೀಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರು ಭೀಕರ ಕಾರು ಅಪಘಾತದ ನಂತರ ಪಂತ್ ಬಗ್ಗೆ ಅಪ್ ಡೇಟ್ ಒದಗಿಸಿದ್ದಾರೆ.
ಈ ಕುರಿತು ಟ್ವೀಟಿಸಿರುವ ಜಯ್ ಶಾ ಅವರು "ಪಂತ್ ಪ್ರಸ್ತುತ ಸ್ಥಿರವಾಗಿದ್ದಾರೆ ಮತ್ತು ಸ್ಕ್ಯಾನ್‌ಗೆ ಒಳಗಾಗುತ್ತಿದ್ದಾರೆ. ಪಂತ್ ಅವರ ಕುಟುಂಬ ಹಾಗೂ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೊಂದಿಗೆ ನಾನು ಮಾತನಾಡಿದ್ದೇನೆ. ನಾವು ಅವರ ಪ್ರಗತಿಯನ್ನು ನಿಕಟವಾಗಿ ಗಮನಿಸುತ್ತಿದ್ದೇವೆ ಹಾಗೂ ಅವರಿಗೆ . ಅಗತ್ಯ ಬೆಂಬಲ ಸಹಿತ ಎಲ್ಲವನ್ನು ಒದಗಿಸುತ್ತೇವೆ " ಎಂದು ಟ್ವೀಟ್ ಮಾಡಿದ್ದಾರೆ.







