ಗೃಹ ಸಚಿವರ ಹೇಳಿಕೆಯಿಂದ ಅಡಿಕೆ ಬೆಳೆಗಾರರಿಗೆ ಆಘಾತ: ರಮಾನಾಥ ರೈ

ಮಂಗಳೂರು, ಡಿ.30 : ಅಡಿಕೆ ಬೆಳೆಯ ವಿಚಾರಕ್ಕೆ ಸಂಬಂಧಿಸಿ ಗೃಹ ಸಚಿವ ಆರಗ ಜ್ಞಾನೇಂದ್ರ ಅಡಿಕೆ ಬೆಳೆಗಾರರಿಗೆ ಆಘಾತವನ್ನುಂಟು ಮಾಡುವ ಹೇಳಿಕೆ ನೀಡಿದ್ದಾರೆ. ಇದರಿಂದಾಗಿ ಅಡಿಕೆ ಬೆಳೆಗಾರರ ಬೆನ್ನಲುಬು ಮುರಿಯುವಂತಾಗಿದೆ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ ರೈ ಹೇಳಿದ್ದಾರೆ.
ದ.ಕ.ಜಿಲ್ಲಾ ಕಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಡಿಕೆ ಧಾರಣೆ ಕ್ವಿಂಟಾಲ್‌ಗೆ 55 ಸಾವಿರ ರೂ.ಗಳಿಂದ 35 ಸಾವಿರ ರೂ.ಗೆ ಇಳಿದಿದೆ. ಇದು ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಸಚಿವರ ಇಂತಹ ಹೇಳಿಕೆಗಳಿಂದಾಗಿ ಅಡಿಕೆ ಬೆಳೆಗಾರರರು ತೊಂದರೆಗೆ ಸಿಲುಕಿದ್ದಾರೆ. ಸಚಿವರ ಹೇಳಿಕೆಯ ಹಿಂದೆ ದೊಡ್ಡ ಕುಳಗಳ ಕೈವಾಡ ಇದೆ ಎಂದು ಅಭಿಪ್ರಾಯಪಟ್ಟರು.
ಈಗಾಗಲೇ ವಿದೇಶದಿಂದ ಮುಖ್ಯವಾಗಿ ಬರ್ಮಾ, ಭೂತಾನ್, ವಿಯೆಟ್ನಾದಿಂದ ಅಡಿಕೆ ಆಮದಾಗುತ್ತಿದೆ. ಬರ್ಮಾದಿಂದ ಕಳ್ಳ ಸಾಗಾಣಿಕೆ ಮೂಲಕ ಅಡಿಕೆ ದೇಶದೊಳಕ್ಕೆ ಬರುತ್ತಿದೆ. ಇದರಿಂದಾಗಿ ಅಡಿಕೆ ಧಾರಣೆ ಕುಸಿಯುತ್ತಿದೆ. ದರ ಕುಸಿತದಿಂದಾಗಿ ಅಡಿಕೆ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಅವರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಬಹಳ ಮುಖ್ಯವಾದ ಬೆಲೆ ಅಡಿಕೆ. ಇಲ್ಲಿನ ಮಟ್ಟಿಗೆ ಆರ್ಥಿಕವಾಗಿ ಲಾಭದಾಯಕವಾಗಿರುವ ಈ ಬೆಳೆಯನ್ನು ಇಲ್ಲಿನ ಜನರು ಅವಲಂಭಿಸಿದ್ದಾರೆ. ದೇಶದ ಅಡಿಕೆ ಉತ್ಪಾದನೆಯಲ್ಲಿ ಪೈಕಿ ಶೇ.50ರಷ್ಟು ದಕ್ಷಿಣ ಕನ್ನಡ ಸೇರಿದಂತೆ ಕರಾವಳಿಯಲ್ಲಿ ಬೆಳೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅಡಿಕೆ ಬೆಳೆಯ ಪ್ರದೇಶ ವಿಸ್ತರಣೆಯಾಗಿದೆ. ಕಳೆದ ಕೊರೋನ ಸಂದರ್ಭದಲ್ಲಿ ಅಡಿಕೆಗೆ ಧಾರಣೆ ಇದ್ದ ಕಾರಣ ಅಡಿಕೆ ಬೆಳೆಗಾರರು ಬಚವಾದರು ಎಂದು ಅವರು ಹೇಳಿದರು.
ಅಡಿಕೆಗೆ ತಗಲಿರುವ ಎಲೆ ಚುಕ್ಕಿ ರೋಗದಿಂದಾಗಿ ಅಡಿಕೆ ಬೆಳೆಗಾರರು ತತ್ತರಿಸಿದ್ದಾರೆ. ಇದಕ್ಕೆ ಪರಿಹಾರ ನೀಡುವಂತೆ ಅಡಿಕೆ ಬೆಳಗಾರರು ಹೋರಾಟ ಮಾಡುತ್ತಿದ್ದರೂ, ಈ ನಿಟ್ಟಿನಲ್ಲಿ ಸರಕಾರ ಗಮನ ಹರಿಸಿಲ್ಲ. ಈ ಹಿಂದೆ ಅಡಿಕೆ ಹಳದಿ ರೋಗ ಬಂದಾಗ ಕಾಂಗ್ರೆಸ್ ಸರಕಾರ ಪ್ರೋತ್ಸಾಹ ಧನ ನೀಡುವ ಕಾರ್ಯ ಮಾಡಿತ್ತು. ಮಾರುಕಟ್ಟೆ ಮಧ್ಯೆಪ್ರವೇಶ ಯೋಜನೆಯಡಿ . ಪ್ರತಿ ಕಿಲೋ ಅಡಿಕೆಗೆ 10 ರೂ.ನಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಮತ್ತು ಕ್ಯಾಂಪ್ಕೊದ ಮೂಲಕ ಸರಕಾರ ನೀಡಿತ್ತು. ಇದರಿಂದಾಗಿ ಅಡಿಕೆ ಬೆಳೆಗಾರರಿಗೆ ಬಹಳಷ್ಟು ಪ್ರಯೋಜನ ಆಗಿತ್ತು ಎಂದು ಅವರು ಹೇಳಿದರು.
ಬರ್ಮಾದಿಂದ ಅಡಿಕೆ ಕಳ್ಳ ಸಾಗಾಣಿಕೆ ಮೂಲಕ ಅಡಿಕೆ ಬರುತ್ತಿದೆ. ಇದರಿಂದಾಗಿ ಯಾವುದೋ ಒತ್ತಾಯಕ್ಕೆ ಮಣಿದು ಸಚಿವ ಆರಗ ಜ್ಞಾನೇಂದ್ರ ಮಾತನಾಡಿದಂತಿದೆ. ವಿಶ್ವ ಮಾರುಕಟ್ಟೆಯಲ್ಲಿ ಅಡಿಕೆ ಜಾಸ್ತಿಯಾಗುತ್ತಿದೆ. ಬೆಳೆಗಾರರು ತೊಂದರೆಗೊಳಗಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಸನ್ನಿವೇಶ ಎದುರಾಗಿದೆ.ಯಾವುದೇ ಷರತ್ತುರಹಿತ ಆಮದು ನೀತಿ ಮುಂದಿನ ದಿನಗಳಲ್ಲಿ ರೈತರಿಗೆ ಮಾರಕವಾಗುವ ಸಾಧ್ಯತೆ ಇದೆ. ಇವತ್ತು ಸರಕಾರ ಬಡವರ, ಬೆಳೆಗಾರರ ಪರ ಇಲ್ಲ. ಬಂಡವಾಳಶಾಹಿ ಮತ್ತು ಶ್ರೀಮಂತರ ಜೇಬು ತುಂಬಿಸಲು ಅವಕಾಶ ಮಾಡಿಕೊಡುತ್ತಿದೆ ಎಂದು ಅವರು ಹೇಳಿದರು.
ಈಗಾಗಲೇ ಸಾಲ ಮಾಡಿ ಅಡಿಕೆ ತೋಟ ಮಾಡಿದ ತೋಟದ ಮಾಲಕರ ಪರಿಸ್ಥಿತಿ ಹದಗೆಟ್ಟಿದೆ. ಅವರಿಗೆ ದೊಡ್ಡ ಹೊಡೆತ ಆಗಿದೆ. ಕೃಷಿ ಉಪಕರಣಗಳ ಬೆಲೆ, ರಸಗೊಬ್ಬರಗಳ ಏರಿಕೆಯಾಗುವ ಈ ದಿನಗಳಲ್ಲಿ ಸಚಿವರ ಬೇಜವಾಬ್ದಾರಿ ಹೇಳಿಕೆಯು ಇಡೀ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಲಿದೆ. ಬೆಲೆ ಕುಸಿತ ಉಂಟಾಗುವ ಸಾಧ್ಯತೆ ಇದೆ. ಆದರೆ ಮಾರುಕಟ್ಟೆಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವುದನ್ನು ನಮಗೆ ಊಹಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಅಡಿಕೆ ಎಲೆ ಚುಕ್ಕಿ ರೋಗಕ್ಕೆ ಕಾರಣವೇನು ಎಂದು ಕಂಡು ಹಿಡಿಯಲು ಸಂಶೋಧನೆ ಮತ್ತು ಇದರ ಮೂಲಕ ಔಷಧಿ ಕಂಡು ಹಿಡಿಯುವ ಪ್ರಯತ್ನ ಸರಕಾರದಿಂದ ನಡೆಯುತ್ತಿಲ್ಲ. ಸರಕಾರದ ಧೋರಣೆಯನ್ನು ಜಿಲ್ಲಾ ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದ್ದು, ಶನಿವಾರ ಕಿಸಾನ್ ಕಾಂಗ್ರೆಸ್ ಘಟಕದ ನೇತೃತ್ವದಲ್ಲಿ ಎಲ್ಲ ತಾಲೂಕುಗಳಲ್ಲಿ ಪ್ರತಿಭಟನೆ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪ್ರ.ಕಾರ್ಯದರ್ಶಿ ರಕ್ಷಿತ್ ಶಿವರಾಂ, ಕೆಪಿಸಿಸಿ ಸದಸ್ಯೆ ಅಪ್ಪಿಲತಾ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಬ್ಲಾಕ್ ಅಧ್ಯಕ್ಷ ಉಮೇಶ್ ದಂಡಕೇರಿ, ಮ.ನ.ಪಾ ವಿಪಕ್ಷ ನಾಯಕ ನವೀನ್ ಡಿ ಸೋಜಾ, ಮುಂಚೂಣಿ ಘಟಕಾಧ್ಯಕ್ಷರಾದ ಶಾಹುಲ್ ಹಮೀದ್ ಕೆ.ಕೆ, ಅಬ್ಬಾಸ್ ಅಲಿ ಬೋಳಂತೂರು, ಕೆಪಿಸಿಸಿ ವಕ್ತಾರ ಪದ್ಮಪ್ರಸಾದ್ ಜೈನ್, ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ, ಡಿಸಿಸಿ ಪ್ರ.ಕಾರ್ಯದರ್ಶಿಗಳಾದ ಶುಭೋದಯ ಆಳ್ವ, ಕಾರ್ಯದರ್ಶಿ ಜಯಶೀಲ ಅಡ್ಯಂತಾಯ, ಶಬೀರ್‌ಸಿದ್ದಕಟ್ಟೆ ಉಪಸ್ಥಿತಿತರಿದ್ದರು.









