ಮಂಗಳೂರು: ಹತ್ಯೆ, ಹಲ್ಲೆ, ಅನೈತಿಕ ಪೊಲೀಸ್ ಗಿರಿ ಖಂಡಿಸಿ ಎಸ್ಡಿಪಿಐ ಪ್ರತಿಭಟನೆ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಹತ್ಯೆ, ಹಲ್ಲೆ, ಅನೈತಿಕ ಪೊಲೀಸ್ ಗಿರಿ ಯನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಶುಕ್ರವಾರ ನಗರದ ಮಂಗಳೂರು ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ಮತ್ತು ಹಕ್ಕೊತ್ತಾಯ ಸಭೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ‘ಜಿಲ್ಲೆಯಲ್ಲಿ ನಡೆಯುವ ಎಲ್ಲಾ ರೀತಿಯ ಅಹಿತಕರ ಘಟನೆ, ಮತೀಯ ಹತ್ಯೆ, ಹಲ್ಲೆ, ಅನೈತಿಕ ಪೊಲೀಸ್ಗಿರಿಗೆ ಜಿಲ್ಲೆಯ ಪೊಲೀಸ್ ಇಲಾಖೆಯೇ ಕಾರಣವಾಗಿದೆ. ಪೊಲೀಸ್ ಇಲಾಖೆಯು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರಗಿಸುವ ಬದಲು ಸಂಘಪರಿವಾರದ ಗೂಂಡಾಗಳ ಬೆಂಬಲಕ್ಕೆ ನಿಂತಿವೆ. ಹಾಗಾಗಿ ಅಮಾಯಕರಾದ ಮಸೂದ್, ಫಾಝಿಲ್, ಜಲೀಲ್ರ ಕೊಲೆಗಳಾಗಿವೆ’ ಎಂದರು.
ಎಸ್ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ಮಾತನಾಡಿ ‘ಉತ್ತರ ಪ್ರದೇಶದ ಗೂಂಡಾ ಸಂಸ್ಕೃತಿಯು ದ.ಕ.ಜಿಲ್ಲೆಯಲ್ಲೂ ನಡೆಯುತ್ತಿವೆ. ಪೊಲೀಸರು ಸರಕಾರದ ಒತ್ತಡಕ್ಕೆ ಮಣಿಯದೆ ಸಂವಿಧಾನಕ್ಕೆ ಬದ್ಧರಾಗಿ ಕರ್ತವ್ಯ ನಿರ್ವಹಿಸಿ ಎಂದರು.
*ದುಷ್ಕರ್ಮಿಗಳಿಂದ ಕೊಲೆಗೀಡಾದ ಜಲೀಲ್ ಅವರ ಸಹೋದರ ಅಬ್ದುಲ್ ಹಮೀದ್ ಮಾತನಾಡಿ‘ ಪೊಲೀಸ್ ಇಲಾಖೆಯು ಜಲೀಲ್ ಹತ್ಯೆಗೆ ಸಂಬಂಧಿಸಿದಂತೆ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ. ಈ ಕೃತ್ಯದ ಹಿಂದಿರುವ ಕಾಣದ ಕೈಗಳನ್ನೂ ಕೂಡ ಪತ್ತೆ ಹಚ್ಚಿ ಕಠಿಣ ಕ್ರಮ ಜರಗಿಸಬೇಕು. ಅಲ್ಲದೆ ಆರೋಪಿಗಳ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು’ಎಂದು ಒತ್ತಾಯಿಸಿದರು.
ದುಷ್ಕರ್ಮಿಗಳಿಂದ ಕೊಲೆಗೀಡಾದ ಮಸೂದ್, ಫಾಝಿಲ್, ಜಲೀಲ್ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು. ಕುಟುಂಬದ ಸದಸ್ಯರಿಗೆ ಸರಕಾರಿ ಉದ್ಯೋಗ ಕಲ್ಪಿಸಬೇಕು, ಜಿಲ್ಲೆಯಲ್ಲಿ ನಡೆದ ಎಲ್ಲಾ ಅಹಿತಕರ ಘಟನೆ, ಕೊಲೆ ಕೃತ್ಯಗಳ ಬಗ್ಗೆ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕು, ಜಿಲ್ಲೆಯಲ್ಲಿ ಹಿಂಸಾಚಾರ ತಡೆಗಟ್ಟಲು ವಿಶೇಷ ಕಾರ್ಯಪಡೆಯನ್ನು ನೇಮಿಸಬೇಕು ಎಂದು ಹಕ್ಕೊತ್ತಾಯ ಸಭೆಯು ನಿರ್ಣಯ ಕೈಗೊಂಡಿತು.
ಪ್ರತಿಭಟನೆಯಲ್ಲಿ ಎಸ್ಡಿಪಿಐ ಮುಖಂಡರಾದ ಬಿ.ಆರ್.ಭಾಸ್ಕರ್ ಪ್ರಸಾದ್, ರಿಯಾಝ್ ಫರಂಗಿಪೇಟೆ, ಅಶ್ರಫ್ ಮಾಚಾರ್, ಮಿಸ್ರಿಯಾ ಕಣ್ಣೂರು, ಅಕ್ಬರ್ ಕುದ್ರೋಳಿ, ಅಥಾವುಲ್ಲಾ ಜೋಕಟ್ಟೆ, ವಿಕ್ಟರ್ ಮಾರ್ಟಿಸ್, ರಿಯಾಝ್ ಕಡಂಬು ಮತ್ತಿತರರು ಉಪಸ್ಥಿತರಿದ್ದರು.