ಮಂಗಳೂರು | ಹೊಸ ವರ್ಷದ ಪಾರ್ಟಿಗಳಿಗೆ ದಾಳಿ ಮಾಡಲು ಭಜರಂಗ ದಳ ಯಾರು: ಎಐವೈಎಫ್ ಪ್ರಶ್ನೆ
ಮಂಗಳೂರು: ಹೊಸ ವರ್ಷಾಚರಣೆಯ ನೆಪದಲ್ಲಿ ಹೊಟೇಲ್, ಪಬ್ ಗಳಲ್ಲಿ ಲವ್ ಜಿಹಾದ್, ಡ್ರಗ್ಸ್ ಜಿಹಾದ್ ನಡೆಯುತ್ತಿದೆ. ಈ ಕಾರಣ ಹೊಸ ವರ್ಷದ ಪಾರ್ಟಿಗಳನ್ನು ರಾತ್ರಿ 11ರೊಳಗೆ ಮುಗಿಸದಿದ್ದಲ್ಲಿ ಭಜರಂಗದಳದ ಕಾರ್ಯಕರ್ತರು ಪಾರ್ಟಿಗಳಿಗೆ ದಾಳಿ ನಡೆಸಲಿದ್ದಾರೆ ಎಂದು ಭಜರಂಗದಳದ ನಾಯಕರ ಹೇಳಿಕೆಯನ್ನು ಅಖಿಲ ಭಾರತ ಯುವಜನ ಫೆಡರೇಶನ್ (ಎಐವೈಎಫ್) ತೀವ್ರವಾಗಿ ಖಂಡಿಸಿದೆ.
ಯುವ ಪೀಳಿಗೆ ದುಶ್ಚಟಗಳಿಗೆ ಬಲಿಯಾಗಬಾರದು ಹಾಗೂ ಇಂತಹವರಿಗೆ ಬುದ್ದಿ ಹೇಳಿ ಸರಿಪಡಿಸುವುದು ಅವರ ರಕ್ಷಕರ ಜವಾಬ್ಧಾರಿಯಾಗಿದೆ. ಬಾರ್, ಪಬ್ ಗಳು ನಿಯಮ ತಪ್ಪಿದರೆ ಸೂಕ್ತ ಕಾನೂನು ಕ್ರಮ ತೆಗೆಯಲು ಪೊಲೀಸ್ ಇಲಾಖೆ ಇದೆ. ರಾತ್ರಿ 1ರವರೆಗೆ ಹೊಸ ವರ್ಷದ ಪಾರ್ಟಿಗಳಿಗೆ ಸರಕಾರ ಅವಕಾಶ ನೀಡಿದ್ದರೂ ರಾತ್ರಿ 11ರೊಳಗೆ ನಿಲ್ಲಿಸದಿದ್ದಲ್ಲಿ ದಾಳಿ ನಡೆಸುತ್ತೇವೆ ಎಂದು ಬೆದರಿಸಲು ಭಜರಂಗದಳ ಯಾರು? ತಪ್ಪಿತಸ್ಥರ ಮೇಲೆ ಪೊಲೀಸರಿಗೆ ದೂರು ನೀಡಿ ಸೂಕ್ತ ಕ್ರಮಕ್ಕೆ ಒತ್ತಾಯಿಸಬೇಕೇ ಹೊರತು ಅನೈತಿಕ ಗೂಂಡಾಗಿರಿ ಮಾಡಲಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟು ಜಿಲ್ಲೆಯಲ್ಲಿ ಕೋಮು ಸಂಘರ್ಷ ಉಂಟು ಮಾಡಿ ಸಮಾಜದಲ್ಲಿ ಅರಾಜಕತೆ ಸೃಷ್ಟಿಸುವುದೇ ಇಂತಹ ಕೋಮುಪರ ಸಂಘಟನೆಗಳ ಹಿಡನ್ ಅಜೆಂಡಾವಾಗಿದೆ. ಇಂತಹ ಬೆದರಿಕೆ ಹಾಕುವವರ ಮೇಲೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಎಐವೈಎಫ್ ಮಂಗಳೂರು ತಾಲೂಕು ಅಧ್ಯಕ್ಷ ಪುಷ್ಪರಾಜ್ ಬೋಳೂರು ಹಾಗೂ ಕಾರ್ಯದರ್ಶಿ ಜಗತ್ಪಾಲ್ ಕೋಡಿಕಲ್ ಒತ್ತಾಯಿಸಿದ್ದಾರೆ.





