ಜ.7ರಂದು ಪುತ್ತೂರು ಬಂಟರ ಭವನದಲ್ಲಿ `ತುಳುವೆರೆ ಮೇಳೋ-2023': ಕಾವು ಹೇಮನಾಥ ಶೆಟ್ಟಿ
ಪುತ್ತೂರು: ಪುತ್ತೂರು ತುಳು ಕೂಟ ಸಂಘಟನೆಯು 50ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ನಿಟ್ಟಿನಲ್ಲಿ ಜ.7ರಂದು ಪುತ್ತೂರಿನ ಕೊಂಬೆಟ್ಟು ಬಂಟರ ಭವನದಲ್ಲಿ ಸುವರ್ಣ ಮಹೋತ್ಸವ ಉದ್ಘಾಟನೆ ಮತ್ತು ಪುತ್ತೂರು ತಾಲೂಕು `ತುಳುವೆರೆ ಮೇಳೋ-2023' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತುಳುವೆರೆ ಮೇಳೋ ಸಮಿತಿಯ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ತಿಳಿಸಿದ್ದಾರೆ.
ಅವರು ಶುಕ್ರವಾರ ಪುತ್ತೂರು ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಳಗ್ಗೆ ಶಾಸಕ ಸಂಜೀವ ಮಠಂದೂರು ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ತುಳುವೆರೆ ಮೇಳೋ ಸಮಿತಿಯ ಗೌರವ ಅಧ್ಯಕ್ಷ ಸವಣೂರು ಕೆ. ಸೀತಾರಾಮ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ನಗರಸಭೆ ಅಧ್ಯಕ್ಷ ಕೆ. ಜೀವಂಧರ್ ಜೈನ್ ವಸ್ತುಪ್ರದರ್ಶನ, ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಪುಸ್ತಕ ಮೇಳವನ್ನು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಪುಡಾ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ನಗರಸಭೆ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಅಕ್ಷಯ ಕಾಲೇಜು ಸಂಚಾಲಕ ಜಯಂತ ನಡುಬೈಲು, ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯೆ ಪ್ರೇಮಲತಾ ರಾವ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಸುದಾನ ಶಾಲಾ ಸಂಚಾಲಕ ರೆ.ವಿಜಯ ಹಾರ್ವಿನ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಉಮೇಶ್ ನಾಯಕ್, ಕೊಟ್ಟಕಲ್ ಆಯುರ್ವೇದ ಶಾಲಾದ ಡಾ.ಪ್ರದೀಪ್ ಕುಮಾರ್, ಮುರ ಎಂಪಿಎಂ ವಿದ್ಯಾಲಯದ ಸಂಚಾಲಕ ಎಂ.ಪಿ.ಅಬೂಬಕ್ಕರ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾಹಿತ್ಯ-ಸಂಗೀತ-ಚಿತ್ರ ಎಂಬ ಕವಿಗಳ ಸಾಹಿತ್ಯದ ವಿಚಾರಮಂಥನ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ನಡೆಯಲಿದೆ. ಅಲ್ಲದೆ ವಿವಿಧ ಕವಿಗಳಿಂದ `ಎನ್ನ ಕಬಿತೆ' ಎಂಬ ಕವಿ ವಿಚಾರಗೋಷ್ಠಿ, ನಮ್ಮ ನಲಿಕೆ ಎಂಬ ನಲಿಕೆದ ಮೇಳ, ತುಳು ಜಾನಪದ ನಲಿಕೆ, ತುಳು ಬದುಕಿನ ಹಿಂದೆ-ಮುಂದೆ ಸಾಹಿತ್ಯದ ಕುರಿತು `ಕಟ್ಟೆ ಪಾತೆರ ಕತೆ' ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಸಂಜೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ತುಳು ಮೇಳ ಸಮಿತಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ವಹಿಸಲಿದ್ದು, ಉಪ್ಪಿನಂಗಡಿ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಿನ್ಸಿಪಾಲ್ ಸುಬ್ಬಪ್ಪ ಕೈಕಂಬ ಸಮಾರೋಪ ಭಾಷಣ ಮಾಡುವರು. ವಿಶ್ರಾಂತ ಪ್ರಧ್ಯಾಪಕ ವಿ.ಬಿ.ಅರ್ತಿಕಜೆ ಸನ್ಮಾನ ನೆರವೇರಿಸುವರು. ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಸನ್ಮಾನ ಪತ್ರ ವಾಚಿಸುವರು. ಮುಖ್ಯ ಅತಿಥಿಗಳಾಗಿ ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್.ಗೌರಿ ಮತ್ತಿತರರು ಭಾಗವಹಿಸಲಿದ್ದಾರೆ. ಸಮಾರೋಪದ ಬಳಿಕ `ತುಳುನಾಡ ಸೃಷ್ಟಿ' ಯಕ್ಷಗಾನ ಬಯಲಾಟ ಜರಗಲಿದೆ ಎಂದರು.
ಇದಕ್ಕೆ ಪೂರ್ವಭಾವಿಯಾಗಿ ಜ.1ರಂದು ಕೊಂಬೆಟ್ಟು ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ನಾಲ್ಕು ವಿಭಾಗಗಳಲ್ಲಿ ತುಳು ಜಾನಪದ ನಲಿಕೆ, ತುಳುವರ ಪದ್ಯ, ಚಿತ್ರ ರಚನೆ, ತುಳು ಕವಿತೆ ರಚನೆ ಮುಂತಾದ ಸ್ಪರ್ಧೆಗಳು ನಡೆಯಲಿವೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ತುಳು ಕೂಟದ ಅಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯಾನ್, ಉಪಾಧ್ಯಕ್ಷೆ ಹೀರಾ ಉದಯ್, ಮಾಜಿ ಅಧ್ಯಕ್ಷ ವಿಜಯ ಕುಮಾರ್ ಭಂಡಾರಿ ಹೆಬ್ಬಾರಬೈಲು, ಉಲ್ಲಾಸ್ ಪೈ ಉಪಸ್ಥಿತರಿದ್ದರು.