ಪುತ್ತೂರು: ಜ.2ರಂದು ಅಡಕೆ ಬೆಳೆಯ ಬಗ್ಗೆ ರಾಜ್ಯ ಗೃಹ ಸಚಿವ ಹೇಳಿಕೆ ಖಂಡಿಸಿ ಕಾಂಗ್ರೆಸ್ ಕಿಸಾನ್ ಘಟಕ ಪ್ರತಿಭಟನೆ
ಪುತ್ತೂರು: ಅಡಕೆ ಬೆಳೆಗೆ ಮುಂದಿನ ದಿನಗಳಲ್ಲಿ ಭವಿಷ್ಯವಿಲ್ಲ. ಈ ನಿಟ್ಟಿನಲ್ಲಿ ಅಡಕೆ ಬೆಳೆಗಾರರು ಪರ್ಯಾಯ ಬೆಳೆಯತ್ತ ಗಮನ ಹರಿಸಬೇಕು ಎಂದು ರಾಜ್ಯ ಗೃಹ ಮಂತ್ರಿ ಅರಗ ಜ್ಞಾನೇಂದ್ರ ಅವರು ಬಾಲಿಷವಾದ ಹೇಳಿಕೆಯನ್ನು ನೀಡಿದ್ದು, ಇದರಿಂದಾಗಿ ಅಡಕೆ ಬೆಳೆಗಾರರ ಆತ್ಮಸ್ಥೈರ್ಯ ಕುಸಿಯುವಂತಾಗಿದೆ. ಗೃಹ ಸಚಿವರ ಈ ಹೇಳಿಕೆಯನ್ನು ಖಂಡಿಸಿ ಹಾಗೂ ಅಡಕೆ ಬೆಳೆಗಾರರಿಗೆ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಜ.2ರಂದು ಪುತ್ತೂರಿನ ಅಮರ್ ಜವಾನ್ ವೃತ್ತದ ಬಳಿ ಕಾಂಗ್ರೆಸ್ ಕಿಸಾನ್ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ತಿಳಿಸಿದ್ದಾರೆ.
ಅವರು ಶುಕ್ರವಾರ ಪುತ್ತೂರು ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಡಕೆ ಬೆಳೆಗೆ ಭವಿಷ್ಯವಿಲ್ಲ ಎಂಬ ಹೇಳಿಕೆ ನೀಡಿದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಅಡಕೆ ಆಮದು ವಿಚಾರದಲ್ಲಿ ಯಾವುದೇ ಮಾತುಗಳನ್ನಾಡದೆ ನುಣುಚಿಕೊಂಡಿದ್ದಾರೆ. ಇದು ಸರ್ಕಾರದ ರೈತ ವಿರೋಧಿ ನಿಲುವನ್ನು ತಿಳಿಸುತ್ತದೆ. ಕರಾವಳಿ ಸೇರಿದಂತೆ ರಾಜ್ಯದ 12 ಜಿಲ್ಲೆಗಳಲ್ಲಿ ಅಡಕೆ ಬೆಳೆಯನ್ನು ಬೆಳೆಸಲಾಗುತ್ತಿದೆ. ಸುಮಾರು 2ಕೋಟಿಗೂ ಅಧಿಕ ಮಂದಿ ಅಡಕೆಯನ್ನು ನಂಬಿಕೊಂಡು ಬದುಕುತ್ತಿದ್ದಾರೆ. ಈ ಬಗ್ಗೆ ಕಾಳಜಿಯೇ ಇಲ್ಲದ ಬಿಜೆಪಿ ನೇತೃತ್ವದ ಸರ್ಕಾರವು ಭೂತಾನ್, ವಿಯೆಟ್ನಾಂ, ಬರ್ಮಾದಿಂದ ಅಡಕೆ ಆಮದು ಮಾಡುತ್ತಿದೆ. ಪ್ರಸ್ತುತ 17 ಸಾವಿರ ಟನ್ ಅಡಕೆ ಆಮದು ಮಾಡಿಕೊಳ್ಳಲಾಗಿದೆ. ಸರ್ಕಾರವು ಆಮದು ನಿರ್ಬಂದ ನೀತಿಯನ್ನು ತೆಗೆದು ಮುಕ್ತ ಮಾಡುಕಟ್ಟೆ ಮಾಡಿರುವುದರಿಂದ ನಮ್ಮಲ್ಲಿ ಅಡಕೆಯ ಧಾರಣೆ ಮತ್ತು ಬೇಡಿಕೆ ಕುಸಿತವಾಗುತ್ತಿದೆ. ಅಲ್ಲದೆ ಅಡಕೆಗೆ ಹಳದಿ ರೋಗ ಮತ್ತು ಎಲೆಚುಕ್ಕಿ ರೋಗ ಕಾಡುತ್ತಿದೆ. ಸರ್ಕಾರ ಅದಕ್ಕೆ ಸಮರ್ಪಕ ಪರಿಹಾರವನ್ನು ಒದಗಿಸುತ್ತಿಲ್ಲ. ಬದಲಿಗೆ ಅಡಕೆಯ ಬಗ್ಗೆ ಬಾಲಿಷ ಹೇಳಿಕೆ ನೀಡುತ್ತಾ ರೈತರನ್ನು ಇನ್ನಷ್ಟು ಕಂಗೆಡುವಂತೆ ಮಾಡುತ್ತಿದೆ ಎಂದು ಆರೋಪಿಸಿದರು.
ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿಯಿದ್ದಲ್ಲಿ ತಕ್ಷಣವೇ ಆಮದು ನಿರ್ಬಂದ ನೀತಿಯನ್ನು ಪಾಲಿಸಬೇಕು. ಅಡಕೆ ಅಕ್ರಮ ಆಮದುಗಳನ್ನು ನಿಯಂತ್ರಿಸಬೇಕು ಮತ್ತು ಅಡಕೆ ಬೆಳೆಗಾರರ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.
ಜಾಗದ ಪಹಣಿ ಪತ್ರವು ಹೆಚ್ಚಾಗಿ ರೈತರಿಗೆ ಬಳಕೆಯಾಗುತ್ತಿದೆ. ಸರ್ಕಾರವು ಇದೀಗ ಪಹಣಿ ಪತ್ರದ ದರವನ್ನು ಹೆಚ್ಚು ಮಾಡಿದೆ. ಒಂದು ಪಹಣಿ ಪತ್ರಕ್ಕೆ ಹಿಂದೆ ರೂ. 10 ಇತ್ತು. ಇದೀಗ ಅದನ್ನು ರೂ. 25ಕ್ಕೆ ಏರಿಸಲಾಗಿದೆ. ಈ ಮೂಲಕ ಸರ್ಕಾರ ರೈತರ ಹಗಲು ದರೋಡೆ ನಡೆಸುತ್ತಿದೆ ಎಂದು ಅವರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಮುರಳೀಧರ ಕೆಮ್ಮಾರ, ಉಪಾಧ್ಯಕ್ಷ ರವೀಂದ್ರನಾಥ ರೈ ನೆಕ್ಕಿಲು, ಕಾರ್ಯದರ್ಶಿ ವಿಕ್ರಂ ರೈ ಸಾಂತ್ಯ ಮತ್ತು ಹಬೀಬ್ ಕಣ್ಣೂರು ಉಪಸ್ಥಿತರಿದ್ದರು.