ಮಂಗಳೂರು: ಲೂಯಿಸ್ ಪಾಶ್ಚರ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ವಿಜ್ಞಾನಿ: ಡಾ. ಪ್ರಶಾಂತ ನಾಯ್ಕ
ವಿಜ್ಞಾನಿಯ 200ನೇ ಜನ್ಮ ದಿನೋತ್ಸವದ ಪ್ರಯುಕ್ತ ಮಂಗಳೂರು ವಿವಿಯಲ್ಲಿ ವಿಶೇಷ ಉಪನ್ಯಾಸ
ಮಂಗಳೂರು: ಜಗತ್ತು ಕಂಡ ಮಹಾನ್ ವಿಜ್ಞಾನಿ ಲೂಯಿಸ್ ಪಾಶ್ಚರ್ ಅವರು ಸೂಕ್ಷ್ಮಾಣು ಜೀವಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ ವಿಜ್ಞಾನ, ಭೌತಶಾಸ್ತ್ರ , ಸ್ಫಟಿಕಶಾಸ್ತ್ರ ಹೀಗೆ ವಿವಿಧ ಕ್ಷೇತ್ರಗಳಿಗೆ ಕೊಡುಗೆ ನೀಡಿದ್ದಾರೆ. ಅದರಲ್ಲಿಯೂ ರೇಬೀಸ್, ಆಂಥ್ರಾಕ್ಸ್ ಮತ್ತು ಚಿಕನ್ ಕಾಲರಾ ಕಾಯಿಲೆಗಳಿಗೆ ಚುಚ್ಚುಮದ್ದು ಅಭಿವೃದ್ಧಿಪಡಿಸುವಲ್ಲಿ ಅವರು ನೀಡಿದ ಕೊಡುಗೆ ಅತ್ಯಮೂಲ್ಯ. ಆದುದರಿಂದಲೇ ಅವರನ್ನು ಆಧುನಿಕ ರೋಗನಿರೋಧಕ ಶಾಸ್ತ್ರದ ಪಿತಾಮಹ ಎಂದೂ ಗುರುತಿಸಲಾಗುತ್ತದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಜೀವವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಪ್ರಶಾಂತ ನಾಯ್ಕ ಹೇಳಿದ್ದಾರೆ.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ನ 134ನೇ ಉಪನ್ಯಾಸ ಮಾಲಿಕೆಯಾಗಿ ಲೂಯಿಸ್ ಪಾಶ್ಚರ್ ಅವರ 200 ನೇ ಜನ್ಮ ದಿನೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ರೇಬೀಸ್ ವಿರುದ್ಧದ ಸಂಶೋಧನೆಯ ವೇಳೆ ಪ್ರಾಣವನ್ನೇ ಪಣಕ್ಕಿಟ್ಟು ಹುಚ್ಚುನಾಯಿಯ ಲಾವಾ ಸಂಗ್ರಹಿಸಿದ್ದರು. ಆಧುನಿಕ ಉಪಕರಣಗಳು ಇಲ್ಲದಿದ್ದರೂ ಜಗತ್ತನ್ನೇ ಬೆರಗುಗೊಳಿಸುವಂತಹ ಸಂಶೋಧನೆಗಳನ್ನು ಮಾಡಿ ವಿಜ್ಞಾನದ ಹಲವಾರು ಹೊಸ ಶಾಖೆಗಳಿಗೆ ನಾಂದಿ ಹಾಡಿದರು ಎಂದರು.
ಕರಾವಿಪ ಕಾರ್ಯಕಾರಿ ಸಮಿತಿ ಸದಸ್ಯ ಫ್ರಾನ್ಸಿಸ್ ಜಿ. ಬೆಂಜಮಿನ್ ಪ್ರಾಸ್ತಾವಿಕವಾಗಿ ಮಾತಾನಾಡಿದರು. ಕರಾವಿಪ ಅಧ್ಯಕ್ಷ ಗಿರೀಶ ಕಡ್ಲೇವಾಡ, ಗೌರವ ಕಾರ್ಯದರ್ಶಿ ಕೃಷ್ಣೇಗೌಡ ಸಿ ಇತರ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಆನ್ಲೈನ್ ಮೋಡ್ ನಲ್ಲಿ ಆಯೋಜಿಸಿದ ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಕರ್ನಾಟಕದಾದ್ಯಂತ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.