ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆಯಲ್ಲಿ ಸುಧಾರಣೆ ಅಗತ್ಯ: ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಅಬ್ದುಲ್ ನಝೀರ್
ಉಡುಪಿ: ಕ್ರಿಮಿನಲ್ ನ್ಯಾಯಾಂಗ ಪ್ರಕ್ರಿಯೆ ಎಂಬುದು ಇಂದು ಶಿಕ್ಷೆಯೆಂಬಂತಾಗಿದೆ. ಇದು ಕ್ರಿಮಿನಲ್ ಜಸ್ಟೀಸ್ ವ್ಯವಸ್ಥೆಗೆ ಅಪರಿಚಿತವಾದುದು. ನ್ಯಾಯದಾನ ಪ್ರಕ್ರಿಯೆ ಎಂದೂ ಶಿಕ್ಷೆಯಾಗಬಾರದು ಎಂದು ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾ ನ್ಯಾಯಾಂಗ ಉಡುಪಿ, ಲೋಕೋಪಯೋಗಿ ಇಲಾಖೆ ಉಡುಪಿ ಹಾಗೂ ವಕೀಲರ ಸಂಘ ಉಡುಪಿ ಮತ್ತು ವಕೀಲರ ಸಂಘ ಬೈಂದೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಇಲ್ಲಿನ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ನಡೆದ ಉಡುಪಿಯ ನೂತನ ಆನೆಕ್ಸ್ ನ್ಯಾಯಾಲಯ ಸಂಕೀರ್ಣದ ಶಿಲಾನ್ಯಾಸ ಮತ್ತು ನೂತನ ಸಿವಿಲ್ ಜಡ್ಜ್ ಹಾಗೂ ಜೆಎಂಎಫ್ಸಿ ನ್ಯಾಯಾಲಯ ಬೈಂದೂರು ಇದರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತಿದ್ದರು.
ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣಗಳಲ್ಲಿ ಶೇ.95ರಷ್ಟು ಮಂದಿ ವಿಚಾರಣೆಯಲ್ಲಿ ನಿರಪರಾಧಿಗಳೆಂದು ಬಿಡುಗಡೆಯಾಗುತ್ತಿದ್ದಾರೆ. ಇದು ಚಾರ್ಜ್ ಶೀಟ್ ಅನ್ನು ತಪ್ಪಾಗಿ ಹಾಕಿದ್ದಾರೆಂಬುದನ್ನು ತೋರಿಸುತ್ತದೆ. ಅಲ್ಲದೇ ಈ ಪ್ರಕರಣಗಳು ಇತ್ಯರ್ಥಗೊಳ್ಳುವುದಕ್ಕೆ ಸುಮಾರು 5ರಿಂದ 10 ವರ್ಷಗಳು ತೆಗೆದುಕೊಳ್ಳುತ್ತಿವೆ. ಈ ಪ್ರಕ್ರಿಯೆಗಳು ಮುಗಿಯುವರೆಗೆ ಆರೋಪಿತ ವ್ಯಕ್ತಿ ಒಂದು ರೀತಿಯಲ್ಲಿ ಶಿಕ್ಷೆಯನ್ನೇ ಅನುಭವಿಸುತ್ತಾನೆ. ಒಬ್ಬ ವ್ಯಕ್ತಿ ಅನಗತ್ಯವಾಗಿ ಯಾಕೆ 5-10 ವರ್ಷ ತೊಂದರೆ ಅನುಭವಿಸಬೇಕು ಎಂದು ಪ್ರಶ್ನಿಸಿದ ನ್ಯಾಯಮೂರ್ತಿಗಳು, ಈ ವ್ಯವಸ್ಥೆ ಸುಧಾರಣೆಯಾಗಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕ್ರಿಮಿನಲ್ ಪ್ರಕರಣದಲ್ಲಿ ಸಿಲುಕಿದ ಆರೋಪಿ ಪೊಲೀಸ್ ಕಸ್ಟಡಿ, ನ್ಯಾಯಾಂಗ ಕಸ್ಟಡಿ, ವಿಚಾರಣೆ ಹೆಸರಿನಲ್ಲಿ ಬಹುಪಾಲು ಸಮಯ ಬಂಧನ ದಲ್ಲಿರುತ್ತಾನೆ. ಅಲ್ಲದೆ ಕೋರ್ಟ್ ನಲ್ಲಿ ಆತನಿಗೆ ಸುಲಭದಲ್ಲಿ ಜಾಮೀನು ಕೂಡ ಸಿಗುವುದಿಲ್ಲ. ಪ್ರತಿ ಬಾರಿಯ ಸಿಟ್ಟಿಂಗ್ ಗೂ ಆತ ವಕೀಲರಿಗೆ ದುಬಾರಿ ಶುಲ್ಕ ಪಾವತಿಸಬೇಕಿರುವುದರಿಂದ ಆತ ಮತ್ತು ಆತನ ಕುಟುಂಬ ಆರ್ಥಿಕ ಮತ್ತು ಸಾಮಾಜಿಕವಾಗಿ ಸಂಕಷ್ಟವನ್ನು ಅನುಭವಿಸುತ್ತಾರೆ. ಇವುಗಳಿಗೆಲ್ಲಾ ಯಾರು ಹೊಣೆ, ಯಾರು ಉತ್ತರದಾಯಿಗಳು ಎಂಬ ಪ್ರಶ್ನೆ ಮೂಡುತ್ತದೆ ಎಂದು ನ್ಯಾ.ಅಬ್ದುಲ್ ನಝೀರ್ ನುಡಿದರು.
ಆದ್ದರಿಂದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ವ್ಯವಸ್ಥೆಯಲ್ಲಿ ಸುಧಾರಣೆ ಅತ್ಯಗತ್ಯವಾಗಿ ಆಗಬೇಕು ಎಂದು ಹೇಳಿದ ಅವರು, ಈಗೀಗ ಪೊಲೀಸ್ ಠಾಣೆಗಳಲ್ಲಿ ಸಿವಿಲ್ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗುತ್ತಿದೆ. ಪೊಲೀಸರು ಸಿವಿಲ್ ಪ್ರಕರಣ ವಿಚಾರಣೆ ಮಾಡುವಂತಿಲ್ಲ. ಆ ಅಧಿಕಾರ ಅವರಿಗಿಲ್ಲ ಎಂದರು.
ಜಿಲ್ಲೆಯಲ್ಲಿ ಕ್ರಿಮಿನಲ್ ಕೇಸ್ ಅಧಿಕ: ಉಡುಪಿ ಜಿಲ್ಲೆಯಲ್ಲಿ ಸಿವಿಲ್ ಗಿಂತ ಕ್ರಿಮಿನಲ್ ಪ್ರಕರಣಗಳ ಸಂಖ್ಯೆ ಅಧಿಕವಾಗಿದೆ. ಸಮಾಜದ ಮಟ್ಟಿಗೆ ಇದೊಂದು ಆರೋಗ್ಯಕರ ಟ್ರೆಂಡ್ ಅಲ್ಲ. ಇದು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತದೆ. ಇದು ಜನರು ಕಾನೂನು ಕೈಗೆತ್ತಿಕೊಳ್ಳುತ್ತಾರೆ ಎಂಬ ಅಭಿಪ್ರಾಯ ವನ್ನು ಮೂಡಿಸುತ್ತದೆ. ಪೊಲೀಸರು ದಾಖಲಿಸುವ ಎಫ್ಐಆರ್ ಗಳಿಗೂ ಸೂಕ್ತ ಚಾರ್ಜ್ ಶೀಟ್ ಸಲ್ಲಿಸುವುದು ಅಗತ್ಯ ಎಂದು ನ್ಯಾಯಮೂರ್ತಿ ಅಬ್ದುಲ ನಝೀರ್ ನುಡಿದರು.
ನ್ಯಾ.ಕೃಷ್ಣ ಅಯ್ಯರ್ ಹೇಳಿದಂತೆ ‘ಜಾಮೀನು ರೂಲ್, ಜೈಲು ಅಪವಾದ’ ವಾಗಬೇಕಾದ ಅಗತ್ಯವಿದೆ. ನಮ್ಮ ನ್ಯಾಯಾಂಗ ಅಧಿಕಾರಿಗಳು ಇದನ್ನು ಗಮನದಲ್ಲಿರಿಸಬೇಕು. 10 ವರ್ಷಗಳ ವಿಚಾರಣೆಯ ನಂತರ ಬಿಡುಗಡೆ ಗೊಳ್ಳುವ ಒಬ್ಬ ಆರೋಪಿ ಹಾಗೂ ಆತನ ಕುಟುಂಬದ ಸ್ಥಿತಿ ಏನಾಗಬಹುದು ಎಂಬುದನ್ನು ಯೋಚಿಸಿ. ಅದೇ ರೀತಿ ಪೊಲೀಸರಿಗೂ ನನ್ನ ಮನವಿ ಏನೆಂದರೆ, ಯಾರೇ ಎಫ್ಐಆರ್ ದಾಖಲಿಸಿದರೂ ಆ ಬಗ್ಗೆ ಸರಿಯಾದ ತನಿಖೆ ನಡೆಸಿ. ಹಾಗೆಯೇ ಸಿವಿಲ್ ವ್ಯಾಜ್ಯಗಳನ್ನು ಪೊಲೀಸ್ ಠಾಣೆಗಳಲ್ಲಿ ಇತ್ಯರ್ಥ ಪಡಿಸಬೇಡಿ. ಅದು ನಿಮ್ಮ ವ್ಯಾಪ್ತಿಗೆ ಬರುವುದಿಲ್ಲ. ನಿಮಗೆ ಆ ಅಧಿಕಾರವೂ ಇಲ್ಲ ಎಂದರು.
ಜಿಲ್ಲೆಯ ಬೈಂದೂರಿನಲ್ಲಿ ನೂತನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯವನ್ನು ಪ್ರಾರಂಭಿಸಲಾಗಿದೆ. ಬೈಂದೂರಿನಲ್ಲಿ 3500ಕ್ಕೂ ಅಧಿಕ ಕೇಸುಗಳಿದ್ದು, ಅಲ್ಲಿ ಹೆಚ್ಚುವರಿ ಒಂದು ನ್ಯಾಯಾಲಯ ಪ್ರಾರಂಭಿಸುವ ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯ ಮೂರ್ತಿ ಪ್ರಸನ್ನ ಬಿ. ವರಾಲೆ ಮಾತನಾಡಿ, ನ್ಯಾಯಾಂಗ ವ್ಯವಸ್ಥೆ ಉತ್ತಮವಾಗಿ ಕಾರ್ಯ ನಿರ್ವಸಲು ಕೋರ್ಟ್ ಕಟ್ಟಡಗಳು ಸೇರಿದಂತೆ ಮೂಲಭೂತ ಸೌಕರ್ಯಗಳ ಅಗತ್ಯವಿದೆ. ವಕೀಲರು ತಮ್ಮ ಕಕ್ಷಿದಾರರಿಗೆ ತ್ವರಿತ ಮತ್ತು ಕಡಿಮೆ ವೆಚ್ಚದಲ್ಲಿ ಪ್ರಕರಣಗಳನ್ನು ಇತ್ಯರ್ಥ ಪಡಿಸಬೇಕು. ಜಿಲ್ಲೆಯ ನೂತನ ಅನೆಕ್ಸ್ ನ್ಯಾಯಾಲಯ ಮತ್ತು ಬೈಂದೂರು ನ್ಯಾಯಾಲಯಕ್ಕೆ ಅಗತ್ಯ ಸಿಬ್ಬಂದಿ ನೇಮಕಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು.
ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷ ಬಿ.ವೀರಪ್ಪ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಮತ್ತು ಮಾದಕ ವಸ್ತು ವಿರುದ್ಧದ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಜಿಲ್ಲೆಯ ವಕೀಲರು ತಮ್ಮ ಸಂಘ ಅಥವಾ ತಂಡವೊಂದರ ಮೂಲಕ ತಿಂಗಳಲ್ಲಿ ಕನಿಷ್ಠ ಒಂದು ದಿನ ಯಾವುದಾದರೊಂದು ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರಿಗೆ ಕಾನೂನು ಅರಿವು ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಹಿರಿಯ ನಾಗರಿಕರಿಗೆ ಅವರ ಹಕ್ಕುಗಳ ಬಗ್ಗೆ ತಿಳಿಸಬೇಕು. ಮಹಿಳೆಯರು ತಮ್ಮ ಮೇಲೆ ನಡೆಯುವ ಅನ್ಯಾಯಗಳನ್ನು ಧೈರ್ಯದಿಂದ ಪ್ರತಿಭಟಿಸಬೇಕು ಎಂದರು.
ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎಸ್.ಜಿ. ಪಂಡಿತ್, ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್, ನ್ಯಾ.ವಿಶ್ವಜಿತ್ ಶೆಟ್ಟಿ, ನ್ಯಾ.ಸಿ.ಎಂ.ಜೋಶಿ, ಟಿ.ಜಿ ಶಿವಶಂಕರೇ ಗೌಡ, ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ಲೇಖನಾಧಿಕಾರಿ ಮುರುಳೀಧರ ಪೈ ಬಿ, ವಿಜಿಲೆನ್ಸ್ ರಿಜಿಸ್ಟ್ರಾರ್ ಭರತ್ ಕುಮಾರ್, ಬೈಂದೂರು ತಾಲೂಕು ವಕೀಲರ ಸಂಘದ ಅಧ್ಯಕ್ಷ ಮೋಬಿ ಪಿ.ಸಿ., ಕಾರ್ಯದರ್ಶಿ ಪ್ರಶಾಂತ್ ಪೂಜಾರಿ, ಲೋಕೊಪಯೋಗಿ ಇಲಾಖೆಯ ಶಿವಮೊಗ್ಗ ವಲಯದ ಮುಖ್ಯ ಇಂಜಿನಿಯರ್ ಕಾಂತರಾಜು ಬಿ.ಟಿ ಉಪಸ್ಥಿತರಿದ್ದರು.
ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಸ್ವಾಗತಿಸಿ, ಉಡುಪಿ ವಕೀಲರ ಸಂಘದ ಅಧ್ಯಕ್ಷ ಬಿ.ನಾಗರಾಜ್ ಸಂಕ್ಷಿಪ್ತ ವರದಿ ಮಂಡಿಸಿದರು. ಪ್ರಧಾನ ಕಾರ್ಯದರ್ಶಿ ರೆನೋಲ್ಡ್ ಪ್ರವೀಣ್ ಕುಮಾರ್ ವಂದಿಸಿ, ನ್ಯಾಯವಾದಿ ಮೇರಿ ಎ.ಆರ್.ಶ್ರೇಷ್ಠ ಅವರು ಕಾರ್ಯಕ್ರಮ ನಿರೂಪಿಸಿದರು.