ಭೀಮಾ ಕೋರೆಗಾಂವ್ ಸ್ಮಾರಕ ನೆಲಸಮಕ್ಕೆ ಕರ್ಣಿ ಸೇನೆ ಆಗ್ರಹ

ಮುಂಬೈ, ಡಿ. 30: ಪುಣೆಯ ಸಮೀಪ ಇರುವ ಭೀಮಾ ಕೋರೆಗಾಂವ್(Koregaon Bhima) ಯುದ್ಧ ಸ್ಮಾರಕವನ್ನು ನೆಲಸಮಗೊಳಿಸಬೇಕು ಹಾಗೂ ಈ ಘಟನೆಗೆ ಸಂಬಂಧಿಸಿದ ವಾರ್ಷಿಕ ಸಂಭ್ರಮಾಚರಣೆ ನಿಷೇಧಿಸಬೇಕು ಎಂದು ಮೇಲ್ಜಾತಿಯ ರಜಪೂತರನ್ನು ಪ್ರತಿನಿಧಿಸುವ ಕರ್ಣಿ ಸೇನಾ ಮಹಾರಾಷ್ಟ್ರ ಸರಕಾರವನ್ನು ಆಗ್ರಹಿಸಿದೆ.
ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್(Devendra Fadnavis) ಗೆ ಬರೆದ ಪತ್ರದಲ್ಲಿ ಕರ್ಣಿ ಸೇನೆಯ ಮಹಾರಾಷ್ಟ್ರ ಘಟಕದ ಮುಖ್ಯಸ್ಥ ಅಜಯ್ ಸೆಂಗಾರ್(ajay sengar), ಸ್ಮಾರಕ ಮರಾಠರ ಮೇಲೆ ಬ್ರಿಟೀಷರ ವಿಜಯವನ್ನು ಆಚರಿಸುತ್ತದೆ. ಈ ವಿಜಯವನ್ನು ವೌಲ್ಯೀಕರಿಸುವುದು ವಿಶ್ವಾಸಘಾತುಕತೆ ಎಂದಿದ್ದಾರೆ. ಮರಾಠಾ ಸಾಮ್ರಾಜ್ಯದ ಆಡಳಿತ ನಡೆಸುತ್ತಿದ್ದ ಬ್ರಾಹ್ಮಣ ಪೇಶ್ವೆ ವಿರುದ್ಧ ದಲಿತ ಮಹಾರ್ ಸಮುದಾಯ ಬ್ರಿಟೀಷರಿಗಾಗಿ ಹೋರಾಡಿ 1818 ಜನವರಿ 1ರಂದು ಜಯ ಗಳಿಸಿದ ನೆನಪಿನಲ್ಲಿ ಪ್ರತಿವರ್ಷ ಭೀಮಾ ಕೋರೆಗಾಂವ್ ಕಾರ್ಯಕ್ರಮ ಆಚರಿಸಲಾಗುತ್ತಿದೆ.
ಭೀಮಾ ಕೋರೆಗಾಂವ್ ಯುದ್ಧವನ್ನು ಜಾತಿ ತಾರತಮ್ಯದ ವಿರುದ್ಧ ತಮ್ಮ ಹೋರಾಟದ ಪ್ರಥಮ ಹಾಗೂ ಮೊದಲ ಹೆಜ್ಜೆಯಾಗಿ ದಲಿತರು ಗುರುತಿಸುತ್ತಾರೆ. ಪ್ರತಿವರ್ಷ ಜನವರಿ 1ರಂದು ದೇಶಾದ್ಯಂತದ ಲಕ್ಷಾಂತರ ಅಂಬೇಡ್ಕರ್ವಾದಿಗಳು ವಿಜಯೋತ್ಸವ ಆಚರಿಸಲು ಈ ಗ್ರಾಮಕ್ಕೆ ಭೇಟಿ ನೀಡುತ್ತಾರೆ. ಈ ವಿಜಯ ದಿನದ ನೆನಪಿಗಾಗಿ ಬ್ರಿಟೀಷ್ ಸಾಮ್ರಾಜ್ಯ 1821ರಲ್ಲಿ ಇಲ್ಲಿ ವಿಜಯ ಸ್ತಂಭವನ್ನು ಸ್ಥಾಪಿಸಿತ್ತು.
ಈ ನಡುವೆ ಕಾರ್ಯಕ್ರಮ ಆಯೋಜಿಸುವುದಕ್ಕೆ ಕರ್ಣಿ ಸೇನೆಯ ಆಕ್ಷೇಪಕ್ಕೆ ಕಾಂಗ್ರೆಸ್ ಹಾಗೂ ಇತರ ಪ್ರತಿಪಕ್ಷಗಳ ನಾಯಕರಿಂದ ಕಟು ಟೀಕೆ ವ್ಯಕ್ತವಾಗಿದೆ.







