ಜ.1ರಿಂದ ಎಂಟು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಏರಿಕೆ: ಪಿಪಿಎಫ್ ಬಡ್ಡಿಯಲ್ಲಿ ಬದಲಾವಣೆಯಿಲ್ಲ

ಹೊಸದಿಲ್ಲಿ,ಡಿ.30: ಸರಕಾರವು 12 ಸಣ್ಣ ಉಳಿತಾಯ ಯೋಜನೆಗಳ ಪೈಕಿ ಎಂಟರ ಮೇಲಿನ ಬಡ್ಡಿದರಗಳನ್ನು 2023 ಜನವರಿ-ಮಾರ್ಚ್ ತ್ರೈಮಾಸಿಕಕ್ಕೆ ಶೇ.0.2ರಿಂದ ಶೇ.1.1ರವರೆಗೆ ಹೆಚ್ಚಿಸಿದೆ. ಆದರೆ ಸಾರ್ವಜನಿಕ ಭವಿಷ್ಯ ನಿಧಿ (PPF)ಯ ಮೇಲಿನ ಶೇ.7.1 ಬಡ್ಡಿದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ.
ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯ ಮೇಲಿನ ಬಡ್ಡಿದರವನ್ನು ಈಗಿನ ಶೇ.7.6ರಲ್ಲಿಯೇ ಉಳಿಸಿಕೊಳ್ಳಲಾಗಿದೆ. ಕಿಸಾನ ವಿಕಾಸ ಪತ್ರ ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳ ಮೇಲಿನ ಬಡ್ಡಿದರವನ್ನು ಕೇವಲ ಶೇ.0.2ರಷ್ಟು ಹೆಚ್ಚಿಸಿದ್ದು,ಅವು ಅನುಕ್ರಮವಾಗಿ ಶೇ.7.2 ಮತ್ತು ಶೇ.7 ಬಡ್ಡಿಯನ್ನು ಗಳಿಸಲಿವೆ.
ಒಂದು,ಎರಡು ಮತ್ತು ಮೂರು ವರ್ಷಗಳ ಸಾವಧಿ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ.1.1ರಷ್ಟು ಹೆಚ್ಚಿಸಲಾಗಿದ್ದು,ಅವು ಅನುಕ್ರಮವಾಗಿ ಶೇ.6.6,ಶೇ.6.8 ಮತ್ತು ಶೇ.6.9ರಷ್ಟು ಪ್ರತಿಫಲವನ್ನು ಗಳಿಸಲಿವೆ. ಐದು ವರ್ಷಗಳ ಸಾವಧಿ ಠೇವಣಿಗಳ ಮೇಲೆ ಈಗ ಶೇ.6.7ರ ಬದಲು ಶೇ.7ರಷ್ಟು ಬಡ್ಡಿ ಲಭಿಸಲಿದೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆ ಮತ್ತು ಮಾಸಿಕ ಆದಾಯ ಖಾತೆ ಯೋಜನೆ ಮೇಲಿನ ಬಡ್ಡಿದರಗಳನ್ನು ತಲಾ ಶೇ.0.4ರಷ್ಟು ಹೆಚ್ಚಿಸಲಾಗಿದ್ದು,ಅವು ಈಗ ಅನುಕ್ರಮವಾಗಿ ಶೇ.8.1 ಮತ್ತು ಶೇ.7.1 ಬಡ್ಡಿ ಗಳಿಸಲಿವೆ.
ಒಂದರಿಂದ ಐದು ವರ್ಷಗಳ ಅಂಚೆಕಚೇರಿ ಸಾವಧಿ ಠೇವಣಿಗಳ ಮೇಲಿನ ಬಡ್ಡಿದರಗಳು ಶೇ.1.1ರವರೆಗೆ ಹೆಚ್ಚಲಿವೆ.







