ತಾರತಮ್ಯ ಮಾಡಿದ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲ್ಲ: ಎಚ್. ಆರ್ ಸುಜಾತ
ಕವಿಗೋಷ್ಠಿ ಅಧ್ಯಕ್ಷತೆ ತಿರಸ್ಕರಿಸಿದ ಕವಯತ್ರಿ

ಬೆಂಗಳೂರು, ಡಿ.30: ಹಾವೇರಿಯಲ್ಲಿ ಆಯೋಜಿಸಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡದ ಸಮಕಾಲೀನ ಮಹತ್ವದ ಲೇಖಕ ಲೇಖಕಿಯರ, ಮುಸ್ಲಿಮ್ ಸಮುದಾಯದ ಲೇಖಕರಿಗೆ ಪ್ರಾತಿನಿಧ್ಯ ನೀಡದೆ ತಾರತಮ್ಯ ಮಾಡಲಾಗಿದ್ದು, ಈ ಸಮ್ಮೇಳನದಲ್ಲಿ ನಾನು ಭಾಗವಹಿಸುವುದಿಲ್ಲ ಎಂದು ಕವಯಿತ್ರಿ, ಲೇಖಕಿ ಎಚ್.ಆರ್.ಸುಜಾತ ತಿಳಿಸಿದ್ದಾರೆ.
ಈ ಸಂಬಂಧ ಕಸಾಪ ಅಧ್ಯಕ್ಷರಿಗೆ ಪತ್ರ ಬರೆದಿರುವ ಅವರು, ವಿವಿಧ ಗೋಷ್ಠಿಗಳಲ್ಲಿ, ವೇದಿಕೆಗಳಲ್ಲಿ ಕನ್ನಡದ ಸಮಕಾಲೀನ ಮಹತ್ವದ ಲೇಖಕ ಲೇಖಕಿಯರ ಹೆಸರುಗಳೇ ಕಂಡು ಬರುತ್ತಿಲ್ಲ. ಅಲ್ಲದೇ ಕನ್ನಡಿಗರೇ ಆಗಿರುವ ಮುಸ್ಲಿಮ್ ಸಮುದಾಯದ ಲೇಖಕರ ಪ್ರಾತಿನಿಧ್ಯವೇ ಇರುವುದಿಲ್ಲ. ನೂರಾರು ಸಂಖ್ಯೆಯಲ್ಲಿರುವ ಬ್ಯಾರಿ ಸಮುದಾಯದ ಮಹತ್ವದ ಲೇಖಕರನ್ನು ಸಮ್ಮೇಳನದಲ್ಲಿ ಸಂಯೋಜಿಸಿಕೊಂಡಿಲ್ಲ. ಈ ಬಗ್ಗೆ ಕನ್ನಡದ ಹಲವಾರು ಲೇಖಕರು ಪ್ರತಿರೋಧ ವ್ಯಕ್ತಪಡಿಸಿದರೂ ಪರಿಷತ್‌ನಿಂದ ಯಾವುದೇ ರೀತಿಯ ಸಮಜಾಯಿಷಿ ಹೇಳಿಕೆಗಳೂ ಬಂದಿಲ್ಲ. ಈ ಎಲ್ಲ ಘಟನೆಗಳನ್ನು ನೋಡಿದರೆ ಬ್ಯಾರಿ ಸಮುದಾಯದ ಲೇಖಕರನ್ನು ಸಮ್ಮೇಳನದಿಂದ ಬೇಕೆಂದೇ ದೂರವಿಟ್ಟಿರುವಂತೆ ಮೇಲು ನೋಟಕ್ಕೆ ಕಂಡು ಬರುತ್ತಿದೆ ಎಂದು ತಿಳಿಸಿದ್ದಾರೆ.
ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ರೀತಿಯ ತಾರತಮ್ಯ ಇರಬಾರದು ಎನ್ನುವುದು ವೈಯಕ್ತಿಕ ಅಭಿಪ್ರಾಯ. ಇಂತಹ ತಾರತಮ್ಯದಿಂದ ಕೂಡಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಕವಿ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡುವುದಕ್ಕೆ ನನ್ನ ಮನಸ್ಸು ಒಪ್ಪುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಾನು ಹಾವೇರಿಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುತ್ತಿಲ್ಲ ಎಂದು ಖಚಿತಪಡಿಸಿದ್ದಾರೆ.
ಕವಿ ಗೋಷ್ಠಿಯ ಅಧ್ಯಕ್ಷತೆಗೆ ಒಪ್ಪಿಗೆ ನೀಡಿ ಈಗ ಅಸಮ್ಮತಿ ಸೂಚಿಸುತ್ತಿರುವುದರಿಂದ ಅಧ್ಯಕ್ಷರಿಗೆ ಆಗಬಹುದಾದ ಮುಜುಗುರಕ್ಕೆ ವಿಷಾದಿಸುತ್ತೇನೆ. ಇನ್ನು ಮುಂದೆ ಇಂತಹ ಘಟನೆಗಳು ಪುನರಾವರ್ತನೆ ಆಗದಂತೆ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಮಹೇಶ್ ಜೋಶಿ ಅವರು ಗಮನ ಹರಿಸಬೇಕೆಂದು ಮನವಿ ಮಾಡಿದ್ದಾರೆ.







