ಚೀನಾ: ಜನವರಿಯಲ್ಲಿ ಕೋವಿಡ್ ಉತ್ತುಂಗಕ್ಕೆ ದಿನಕ್ಕೆ 25 ಸಾವಿರ ಮಂದಿ ಸಾವನ್ನಪ್ಪುವ ಸಾಧ್ಯತೆ; ವರದಿ

ಲಂಡನ್, ಡಿ.30: ಕೋವಿಡ್ ನಿರ್ಬಂಧ ಸಡಿಲಿಸಿದಂದಿನಿಂದ ಚೀನಾದಲ್ಲಿ ಕೋವಿಡ್ ಸೋಂಕಿನ ಪ್ರಕರಣದಲ್ಲಿ ಭಾರೀ ಹೆಚ್ಚಳ ಕಂಡುಬಂದಿದ್ದು ಒಟ್ಟು ಪ್ರಕರಣ 18.6 ದಶಲಕ್ಷಕ್ಕೆ ಏರಿದೆ. ಡಿಸೆಂಬರ್ 1ರಿಂದ ಇದುವರೆಗೆ ಒಟ್ಟು 1 ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿರಬಹುದು ಎಂದು ಬ್ರಿಟನ್ ಮೂಲದ ಆರೋಗ್ಯ ಅಂಕಿಅಂಶ ಸಂಸ್ಥೆ ‘ಏರ್‌ಫಿನಿಟಿ’ ಗುರುವಾರ ಹೇಳಿದೆ.
ಶೂನ್ಯ ಕೋವಿಡ್ ನೀತಿಯನ್ನು ಕೈಬಿಟ್ಟು ಹಲವು ನಿರ್ಬಂಧಗಳನ್ನು ಸಡಿಲಿಸಿದ ಬಳಿಕ ಚೀನಾದಲ್ಲಿ ಕೋವಿಡ್ ಸೋಂಕು ಉಲ್ಬಣಿಸಿದೆ. ಆದರೆ ದೈನಂದಿನ ಸೋಂಕಿನ ಪ್ರಕರಣ, ಸಾವಿನ ಪ್ರಮಾಣದ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗುತ್ತಿಲ್ಲ. ಚೀನಾದಲ್ಲಿ ಈಗ ದೈನಂದಿನ ಸಾವಿನ ಸಂಖ್ಯೆ 9 ಸಾವಿರಕ್ಕೆ ತಲುಪಿರಬಹುದು ಎಂದು ಬ್ರಿಟನ್‌ನ ಆರೋಗ್ಯ ತಜ್ಞರು ಅಂದಾಜಿಸಿದ್ದಾರೆ. ಇದು ಕಳೆದ ವಾರದ ಅಂದಾಜಿಗಿಂತ ದ್ವಿಗುಣವಾಗಿದೆ.
ಚೀನಾದ ಕೋವಿಡ್ ಸೋಂಕು ಜನವರಿ 13ರಂದು ಮೊದಲ ಗರಿಷ್ಟ ಮಟ್ಟ ತಲುಪಲಿದ್ದು ಪ್ರತೀ ದಿನ 3.7 ದಶಲಕ್ಷ ಪ್ರಕರಣ ದಾಖಲಾಗಲಿದೆ. ಜನವರಿ 23ರಂದು ಸೋಂಕು ಉತ್ತುಂಗ ಮಟ್ಟ ತಲುಪಲಿದ್ದು ದೈನಂದಿನ ಸಾವಿನ ಪ್ರಕರಣ 25,000ಕ್ಕೆ ತಲುಪಲಿದೆ ಮತ್ತು ಒಟ್ಟು ಸಾವಿನ ಪ್ರಕರಣ (ಡಿಸೆಂಬರ್ 1ರಿಂದ) 5,84,000ಕ್ಕೇರಲಿದೆ ಎಂದು ‘ಏರ್‌ಫಿನಿಟಿ’ ಹೇಳಿದೆ.
ಆದರೆ ಈ ಅಂಕಿಅಂಶಕ್ಕೂ ಚೀನಾದ ಆರೋಗ್ಯ ಇಲಾಖೆ ನೀಡುತ್ತಿರುವ ಮಾಹಿತಿಗೂ ಅಜಗಜಾಂತರ ವ್ಯತ್ಯಾಸವಿದೆ. ಪ್ರತೀ ದಿನ ಕೆಲವು ಸಾವಿರ ಸೋಂಕಿನ ಪ್ರಕರಣ ದಾಖಲಾಗುತ್ತಿದೆ ಹಾಗೂ ಡಿಸೆಂಬರ್ 7ರಿಂದ ಕೇವಲ 10 ಸಾವಿನ ಪ್ರಕರಣ ವರದಿಯಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಈ ಮಧ್ಯೆ, ದೇಶದಲ್ಲಿನ ಸಾಂಕ್ರಾಮಿಕ ಪರಿಸ್ಥಿತಿಯ ಬಗ್ಗೆ ವಿವರವಾದ ಮಾಹಿತಿ ಒದಗಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಘೆಬ್ರಯೇಸಸ್ ಕರೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ(ಎನ್‌ಎಚ್‌ಸಿ)ದ ಉನ್ನತ ಅಧಿಕಾರಿ ಜಿಯಾವೊ ಯಾಹುಯಿ ‘ ಕೋವಿಡ್-19 ಪ್ರಕರಣ ಹಾಗೂ ಸಾವಿನ ಬಗ್ಗೆ ಚೀನಾ ಪ್ರಕಟಿಸುವ ಮಾಹಿತಿ ಯಾವಾಗಲೂ ಪಾರದರ್ಶಕವಾಗಿರುತ್ತದೆ. ಸೋಂಕಿನ ಕುರಿತ ಮಾಹಿತಿಯಲ್ಲಿ ಯಾವುದೇ ಮುಚ್ಚುಮರೆಯಿಲ್ಲ’ ಎಂದಿದ್ದಾರೆ.
ನ್ಯೂಕ್ಲಿಯಿಕ್ ಆ್ಯಸಿಡ್ ಟೆಸ್ಟ್‌ನಲ್ಲಿ ಪೊಸಿಟಿವ್ ವರದಿ ಬಂದ ಬಳಿಕ ಸೋಂಕಿನಿಂದ ಪ್ರೇರಿತ ಉಸಿರಾಟದ ವೈಫಲ್ಯದಿಂದ ಮೃತಪಟ್ಟವರನ್ನು ಮಾತ್ರ ಕೋವಿಡ್-19 ಸೋಂಕಿನಿಂದ ಮೃತಪಟ್ಟವರೆಂದು ಪರಿಗಣಿಸಲಾಗುವುದು. ಆದರೆ ಉಳಿದ ದೇಶಗಳಲ್ಲಿ ಕೋವಿಡ್ ಪರೀಕ್ಷೆಯಲ್ಲಿ ಪೊಸಿಟಿವ್ ವರದಿ ಬಂದ ನಂತರದ 28 ದಿನದಲ್ಲಿ ಮೃತಪಟ್ಟ ಪ್ರಕರಣವನ್ನು ಕೋವಿಡ್ ಸಾವು ಎಂದು ಪರಿಗಣಿಸಲಾಗುತ್ತದೆ. ಕೋವಿಡ್ ಸಾವನ್ನು ನಿರ್ಧರಿಸುವಲ್ಲಿ ಚೀನಾ ಯಾವಾಗಲೂ ವೈಜ್ಞಾನಿಕ ಮಾನದಂಡಕ್ಕೆ ಬದ್ಧವಾಗಿರುತ್ತದೆ. ಆರಂಭದಿಂದ ಅಂತ್ಯದವರೆಗೂ ನಮ್ಮದು ವೈಜ್ಞಾನಿಕ ಮಾನದಂಡವಾಗಿರುತ್ತದೆ ಎಂದು ಜಿಯಾವೊ ಯಾಹುಯಿ ಹೇಳಿದ್ದಾರೆ.







