ಫೆಲಸ್ತೀನೀಯರ ವಿರುದ್ಧ ಸೇಡಿನ ಕ್ರಮ: ಇಬ್ಬರು ಯೋಧರ ಮೇಲೆ ಇಸ್ರೇಲ್ ದೋಷಾರೋಪ

ಟೆಲ್ ಅವೀವ್, ಡಿ.30: ಕಳೆದ ತಿಂಗಳು ಇಸ್ರೇಲ್ನ ಯುವಕನೊಬ್ಬನ ಮೃತದೇಹವನ್ನು ಅಪಹರಿಸಿದ್ದಕ್ಕೆ ಪ್ರತೀಕಾರವಾಗಿ ಆಕ್ರಮಿತ ಪಶ್ಚಿಮ ದಂಡೆಯಲ್ಲಿನ ಫೆಲಸ್ತೀನೀಯರ ಮನೆಯೊಂದರ ಮೇಲೆ ಸುಧಾರಿತ ಸ್ಫೋಟಕವನ್ನು ಎಸೆದ ಇಬ್ಬರು ಯೋಧರ ವಿರುದ್ಧ ಕಠಿಣ ದೋಷಾರೋಪಣೆ ದಾಖಲಿಸಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ.
ಆಕ್ರಮಿತ ಪಶ್ಚಿಮ ದಂಡೆಯಲ್ಲಿನ ಜೆನಿನ್ ನಗರವೊಂದರ ಆಸ್ಪತ್ರೆಯಲ್ಲಿದ್ದ ಇಸ್ರೇಲ್ ವಿದ್ಯಾರ್ಥಿಯೊಬ್ಬನ ಮೃತದೇಹವನ್ನು ಫೆಲಸ್ತೀನ್ ಹೋರಾಟಗಾರರು ಅಪಹರಿಸಿದ್ದರು. ಇದಕ್ಕೆ ಪ್ರತಿಯಾಗಿ ಇಸ್ರೇಲ್ನ ಇಬ್ಬರು ಯೋಧರು ಫೆಲಸ್ತೀನೀಯರ ಮನೆಯೊಂದಕ್ಕೆ ಸುಧಾರಿತ ಸ್ಫೋಟಕವನ್ನು ಎಸೆದಿದ್ದರು.
ಮನೆಗೆ ಬೆಂಕಿ ಹಚ್ಚುವುದು ಈ ಕೃತ್ಯದ ಉದ್ದೇಶವಾಗಿತ್ತು. ಆದರೆ ಯಾರಿಗೂ ಗಾಯವಾಗಿರಲಿಲ್ಲ. ದ್ವೇಷದ ಭಾವನೆಯಿಂದ, ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಈ ಕೃತ್ಯ ಎಸಗಿರುವುದು ಸ್ಪಷ್ಟವಾದ್ದರಿಂದ ಇಬ್ಬರು ಯೋಧರ ವಿರುದ್ಧ ದೋಷಾರೋಪಣೆ ಸಲ್ಲಿಸಲಾಗಿದೆ. ಮೂರನೇ ಯೋಧನ ವಿಚಾರಣೆ ಮುಂದುವರಿದಿದೆ ಎಂದು ಸೇನೆಯ ಮೂಲಗಳು ಹೇಳಿವೆ.
ಫೆಲಸ್ತೀನೀಯರ ವಿರುದ್ಧದ ಅಪರಾಧಕ್ಕಾಗಿ ಇಸ್ರೇಲ್ ಯೋಧರ ವಿಚಾರಣೆ ಮತ್ತು ಅಪರಾಧ ನಿರ್ಣಯ ಅತ್ಯಂತ ಅಪರೂಪವಾಗಿದ್ದು ಫೆಲಸ್ತೀನೀಯರು ಸಲ್ಲಿಸುವ ದೂರುಗಳಲ್ಲಿ ಕೇವಲ 2%ದಷ್ಟು ಮಾತ್ರ ವಿಚಾರಣೆಗೆ ಒಳಪಡುತ್ತದೆ. ಆದರೆ ಫೆಲಸ್ತೀನೀಯರ ವಿರುದ್ಧದ ಎಲ್ಲಾ ಪ್ರಕರಣಗಳೂ ವಿಚಾರಣೆಗೆ ಸ್ವೀಕಾರವಾಗುತ್ತದೆ ಎಂದು ಮಾನವ ಹಕ್ಕುಗಳ ಸಂಘಟನೆಯ ವರದಿ ಹೇಳಿದೆ.







