ಕಿಸಾನ್ ಸಮ್ಮಾನ್ ಯೋಜನೆ: 2,000 ಕೋಟಿ ರೂ. ಅನುದಾನ ಬಿಡುಗಡೆಯೇ ಆಗಿಲ್ಲ

ಬೆಂಗಳೂರು: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ಯೋಜನೆ ಎಂದೇ ಬಿಂಬಿತವಾಗಿರುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ಹಂಚಿಕೆಯಾಗಿದ್ದ 2,000 ಕೋಟಿ ರೂ. ಅನುದಾನದಲ್ಲಿ ಹಣ ಬಿಡುಗಡೆಯೇ ಆಗಿಲ್ಲ. ಹೀಗಾಗಿ ಈ ಯೋಜನೆಯಲ್ಲಿ ಪ್ರಗತಿಯಾಗಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 12ನೇ ಕಂತಿನ ನೆರವು ಬಿಡುಗಡೆ ಸಂಬಂಧ 2022ರ ಅಕ್ಟೋಬರ್ 17ರಂದು ಪ್ರಧಾನಿ ಮೋದಿ ನಡೆಸಿದ್ದ ವರ್ಚುವಲ್ ಕಾರ್ಯಕ್ರಮದಲ್ಲಿ ರಾಜ್ಯದ 50.36 ಲಕ್ಷ ರೈತರಿಗೆ 1,007.26 ಕೋಟಿ ರೂ. ವರ್ಗಾವಣೆ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೆಮ್ಮೆಯಿಂದ ಬೀಗಿದ್ದರು. ಇದಾಗಿ ಎರಡೇ ಎರಡು ತಿಂಗಳ ಅಂತರದಲ್ಲಿ ಈ ಯೋಜನೆಗೆ 2,000 ಕೋಟಿ ರೂ. ಅನುದಾನದಲ್ಲಿ ಹಣವೇ ಬಿಡುಗಡೆಯಾಗಿಲ್ಲ ಎಂದು ಖುದ್ದು ಕೃಷಿ ಇಲಾಖೆಯ ಸರಕಾರದ ಕಾರ್ಯದರ್ಶಿಯೇ ಹೇಳಿದ್ದಾರೆ.
ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಅಡಿಯಲ್ಲಿ ವಿವಿಧ ಇಲಾಖೆಗಳು ಸಾಧಿಸಿರುವುದಕ್ಕೆ ಸಂಬಂಧಿಸಿದಂತೆ 2022ರ ಡಿಸೆಂಬರ್ 16ರಂದು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅಧ್ಯಕ್ಷತೆಯಲ್ಲಿ ನಡೆದಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿ ಇಲಾಖೆಯ ಸರಕಾರದ ಕಾರ್ಯದರ್ಶಿಗಳು ಈ ಮಾಹಿತಿಯನ್ನು ಒದಗಿಸಿದ್ದಾರೆ. ಸಭೆಯ ನಡವಳಿಗಳು ''the-file.in''ಗೆ ಲಭ್ಯವಾಗಿದೆ.
‘ಕೃಷಿ ಇಲಾಖೆಯಲ್ಲಿನ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ 2,000 ಕೋಟಿ ರೂ. ಅನುದಾನದಲ್ಲಿ ಹಣ ಬಿಡುಗಡೆಯಾಗದಿರುವುದರಿಂದ ಪ್ರಗತಿಯಾಗಿರುವುದಿಲ್ಲ. ಹಣ ಬಿಡುಗಡೆಯಾದ ಕೂಡಲೇ ಪ್ರಗತಿ ಸಾಧಿಸಲಾಗುವುದು,’ ಎಂದು ಕೃಷಿ ಇಲಾಖೆ ಸರಕಾರದ ಕಾರ್ಯದರ್ಶಿಗಳು ಮಾಹಿತಿ ಒದಗಿಸಿರುವುದು ನಡಾವಳಿಯಿಂದ ತಿಳಿದು ಬಂದಿದೆ.
ಅಲ್ಲದೇ ರೈತ ವಿದ್ಯಾ ನಿಧಿ ಯೋಜನೆಯಡಿ ಈಗಾಗಲೇ ರೂ. 430 ಕೋಟಿಯಷ್ಟು ಅನುದಾನ ಬಿಡುಗಡೆಯಾಗಿದ್ದರೂ ಎಸ್‌ಎಸ್‌ಪಿ ಪೋರ್ಟಲ್‌ನಲ್ಲಿ ತಾಂತ್ರಿಕ ತೊಂದರೆಯಿಂದಾಗಿ ಪೂರ್ಣ ಪ್ರಮಾಣದಲ್ಲಿ ವೆಚ್ಚವಾಗಿಲ್ಲ. ಹಾಗೆಯೇ ಕೃಷಿ ಕಾರ್ಮಿಕರ ಕುಟುಂಬಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳೂ ಅಂತಿಮಗೊಂಡಿಲ್ಲ ಎಂಬುದು ನಡಾವಳಿಯಿಂದ ಗೊತ್ತಾಗಿದೆ.
ಈ ಯೋಜನೆಯಡಿ ಮಾರ್ಚ್ 2019 ರಿಂದ ಜುಲೈ 2022 ರವರೆಗೆ ರಾಜ್ಯದ 58.83 ಲಕ್ಷ ರೈತ ಕುಟುಂಬಗಳು ಕೇಂದ್ರ ಸರಕಾರದಿಂದ ಒಟ್ಟು 9,968.57 ಕೋಟಿ ರೂ. ಸಹಾಯ ಧನ ಪಡೆದಿವೆ. 2022-23ನೇ ಸಾಲಿನಲ್ಲಿ 1,251.98 ಕೋಟಿ ಆರ್ಥಿಕ ಸಹಾಯಧನ ವರ್ಗಾವಣೆಯಾಗಿದೆ. ರಾಜ್ಯ ಸರಕಾರದಿಂದ ಪಿಎಂ ಕಿಸಾನ್? ಕರ್ನಾಟಕ ಯೋಜನೆಯಡಿ ರೈತ ಕುಟುಂಬಗಳಿಗೆ 2019 ರಿಂದ ಇಲ್ಲಿಯವರೆಗೆ 4,821.37 ಕೋಟಿ ಆರ್ಥಿಕ ಸಹಾಯಧನವನ್ನು ನೀಡಲಾಗಿದೆ. 2022-23ನೇ ಸಾಲಿನಲ್ಲಿ 956.71 ಕೋಟಿ ರೂ. ಆರ್ಥಿಕ ನೆರವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆಗೆ ಮಂಜೂರಾತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದನ್ನು ಸ್ಮರಿಸಬಹುದು.
ಹೊಸ ಬೆಳೆ ವಿಮಾ ಯೋಜನೆ ಮತ್ತು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ 2021-22ನೇ ಸಾಲಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಲೆಕ್ಕ ಶೀರ್ಷಿಕೆಯಡಿಯಲ್ಲಿ ಒದಗಿಸಿದ್ದ ಅನುದಾನವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಲ್ಲಿ ವಿಫಲವಾಗಿರುವ ಕೃಷಿ ಇಲಾಖೆಯು 210.66 ಕೋಟಿ ರೂ. ಗಳನ್ನು ಸರಕಾರಕ್ಕೆ ವಾಪಸ್ ಮಾಡಿತ್ತು. ಈ ಕುರಿತು ''ಣhe-ಜಿiಟe.iಟಿ'' ಮತ್ತು ವಾರ್ತಾಭಾರತಿಯು 2022ರ ಫೆ.22ರಂದೇ ವರದಿ ಪ್ರಕಟಿಸಿತ್ತು.
‘2021-22ನೇ ಸಾಲಿನಲ್ಲಿ ಹೊಸ ಬೆಳೆ ವಿಮಾ ಯೋಜನೆ ಲೆಕ್ಕ ಶೀರ್ಷಿಕೆಯಡಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಉಪ ಶೀರ್ಷಿಕೆಯಡಿಯಲ್ಲಿ ವೆಚ್ಚವಾಗದೇ ಉಳಿತಾಯವಾದ ಒಟ್ಟು 138 ಕೋಟಿ ರೂ. ಹಾಗೂ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಲೆಕ್ಕ ಶೀರ್ಷಿಕೆಯ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಉಪ ಶೀರ್ಷಿಕೆಯಡಯಲ್ಲಿ ಉಳಿತಾಯವಾಗುವ ಒಟ್ಟು 72.00 ಕೋಟಿ ಸೇರಿ ಒಟ್ಟು 210.66 ಕೋಟಿ ರೂ.ಗಳನ್ನು ಅನುದಾನವನ್ನು ಸರಕಾರಕ್ಕೆ ಆಧ್ಯರ್ಪಿಸಲಾಗಿದೆ. ಆದ್ದರಿಂದ ಈ ಲೆಕ್ಕ ಶೀರ್ಷಿಕೆಗಳಡಿ ಅನುದಾನ ಉಳಿತಾಯವಿರುವುದಿಲ್ಲ. ಪ್ರಸ್ತಾವದಲ್ಲಿ ಕೋರಿದಂತೆ ಪುನರ್‌ವಿನಿಯೋಗ ಸಾಧ್ಯವಿಲ್ಲ,’ ಎಂದು ಕೃಷಿ ಇಲಾಖೆಯ ಸರಕಾರದ ಪ್ರ.ಕಾರ್ಯದರ್ಶಿಗಳು ಇಲಾಖೆಯ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ನಿರ್ದೇಶಿಸಿದ್ದರು.
ಅದೇ ರೀತಿ ರಾಜ್ಯ ಬಿಜೆಪಿ ಸರಕಾರವು 2020-21ನೇ ಸಾಲಿನ ಪ್ರಧಾನಮಂತ್ರಿ ಕಿಸಾನ್ ಕರ್ನಾಟಕ ಯೋಜನೆಯಡಿ ಎರಡನೇ ಕಂತಿನ ಆರ್ಥಿಕ ಸಹಾಯ ಧನ ಬಿಡುಗಡೆ ಮಾಡುವಲ್ಲಿಯೂ ವಿಳಂಬ ಮಾಡಿತ್ತು.
ರಾಜ್ಯ ಸರಕಾರದಿಂದ ಸಿಗದ ಆರ್ಥಿಕ ಸಹಾಯಧನ
ಕೇಂದ್ರ ಸರಕಾರದ ಮಹತ್ವಕಾಂಕ್ಷೆಯ ಯೋಜನೆಯಾಗಿರುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯ ಸರಕಾರವು ಅನುದಾನವನ್ನು ಹಂಚಿಕೊಳ್ಳುತ್ತಿದೆ. ಆದರೆ, 2020-21ನೇ ಸಾಲಿನಲ್ಲಿ ರಾಜ್ಯ ಸರಕಾರದಿಂದ ನೀಡುವ 4,000 ರೂ. ಹೆಚ್ಚುವರಿ ಆರ್ಥಿಕ ಸಹಾಯಧನದ ಎರಡನೇ ಕಂತಿನ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಈ ಕುರಿತು ಕೃಷಿ ಆಯುಕ್ತರು 2021ರ ಮಾರ್ಚ್ 16ರಂದು ಆರ್ಥಿಕ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.
4,000 ರೂ. ಹೆಚ್ಚುವರಿ ಆರ್ಥಿಕ ನೆರವನ್ನು 2 ಕಂತುಗಳಲ್ಲಿ ಪಿಎಂ ಕಿಸಾನ್ ಕರ್ನಾಟಕ ಯೋಜನೆಯಡಿ ನೀಡುತ್ತಿದೆ. ಇದಕ್ಕಾಗಿ ರಾಜ್ಯವಲಯದ ಲೆಕ್ಕ ಶೀರ್ಷಿಕೆ (2401-00-800-1-05-100) ಅಡಿ ಒಟ್ಟು 2,100 ಕೋಟಿ ರೂ. ನಿಗದಿಪಡಿಸಿತ್ತು. ಈ ಪೈಕಿ 2020-21ನೇ ಸಾಲಿನಲ್ಲಿ ಎರಡನೇ ಕಂತಿಗೆ 51,66,395 ರೈತರಿಗೆ 1,033.28 ಕೋಟಿ ರೂ. ಹಾಗೂ ಮೊದಲನೇ ಕಂತಿನ ಬಾಕಿ ಬಾಕಿ 56,665 ರೈತರಿಗೆ 11.33 ಕೋಟಿ ರೂ. ಸೇರಿ ಒಟ್ಟಾರೆ 2020-21ನೇ ಸಾಲಿಗೆ 1,044.61 ಕೋಟಿ ರೂ. ಅನುದಾನ ಒದಗಿಸಬೇಕಿತ್ತು.
‘2020-21ನೇ ಸಾಲಿನಲ್ಲಿ ಎರಡನೇ ಕಂತಿನ ಆರ್ಥಿಕ ಸಹಾಯಧನವನ್ನು ಪಾವತಿಸಲು ಅನುದಾನ ಇಲ್ಲಿಯವರೆಗೆ ಬಿಡುಗಡೆ ಮಾಡಿಲ್ಲ,’ ಎಂದು ಕೃಷಿ ಆಯುಕ್ತರು ಆರ್ಥಿಕ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದನ್ನು ಸ್ಮರಿಸಬಹುದು.







