ಅಹಮದಾಬಾದ್ -ಮುಂಬೈ ಹೆದ್ದಾರಿಯಲ್ಲಿ ಅಪಘಾತ: ಒಂಬತ್ತು ಮಂದಿ ಮೃತ್ಯು, ಹಲವರಿಗೆ ಗಾಯ
ಬಸ್ ಚಾಲಕನಿಗೆ ಹೃದಯಾಘಾತ, ಕಾರಿಗೆ ಢಿಕ್ಕಿ ಹೊಡೆದು ದುರಂತ

ಅಹಮದಾಬಾದ್: ಗುಜರಾತ್‌ನ ನವಸಾರಿಯಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ಅಪಘಾತದಲ್ಲಿ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಹಾಗೂ ಹಲವರು ಗಾಯಗೊಂಡಿದ್ದಾರೆ.
ನವಸಾರಿಯ ಅಹಮದಾಬಾದ್-ಮುಂಬೈ ಹೆದ್ದಾರಿಯಲ್ಲಿ ಬಸ್ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿದ ನಂತರ ಈ ಘಟನೆ ನಡೆದಿದ್ದು, ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ, ಆ ವ್ಯಕ್ತಿಯನ್ನು ಸೂರತ್‌ಗೆ ಕಳುಹಿಸಲಾಗಿದೆ ಎಂದು ನವಸಾರಿಯ ಉಪ ಎಸ್ಪಿ ವಿ.ಎನ್. ಪಟೇಲ್ ಹೇಳಿಕೆ ಉಲ್ಲೇಖಿಸಿ ANI ವರದಿ ಮಾಡಿದೆ.
ಸೂರತ್‌ನಿಂದ ಪ್ರಮುಖ್ ಸ್ವಾಮಿ ಮಹಾರಾಜ್ ಶತಾಬ್ದಿ ಮಹೋತ್ಸವ ಕಾರ್ಯಕ್ರಮದಿಂದ ವಾಪಸಾಗುತ್ತಿದ್ದ ಜನರಿಂದ ತುಂಬಿದ್ದ ಬಸ್ ನ ಚಾಲಕನಿಗೆ ಹೃದಯಾಘಾತ ಸಂಭವಿಸಿ ವಾಹನದ ನಿಯಂತ್ರಣ ತಪ್ಪಿತು. ಪರಿಣಾಮವಾಗಿ ನವಸಾರಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 48 ರಲ್ಲಿ ಟೊಯೊಟಾ ಫಾರ್ಚುನರ್ ಕಾರಿಗೆ ಡಿಕ್ಕಿ ಹೊಡೆದಿದೆ.
ಕಾರಿನಲ್ಲಿದ್ದ ಒಂಬತ್ತು ಮಂದಿಯಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದು, ಬಸ್ಸಿನಲ್ಲಿದ್ದ 28 ಮಂದಿ ಗಾಯಗೊಂಡಿದ್ದಾರೆ. 11 ಮಂದಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಐಷಾರಾಮಿ ಬಸ್ ಸೂರತ್‌ನಿಂದ ವಲ್ಸಾದ್‌ಗೆ ಹೋಗುತ್ತಿತ್ತು.
"ಗುಜರಾತ್‌ನ ನವಸಾರಿಯಲ್ಲಿ ನಡೆದ ರಸ್ತೆ ಅಪಘಾತ ಹೃದಯ ವಿದ್ರಾವಕವಾಗಿದೆ. ಈ ಘಟನೆಯಲ್ಲಿ ಕುಟುಂಬವನ್ನು ಕಳೆದುಕೊಂಡವರಿಗೆ ನನ್ನ ಸಂತಾಪ. ಸ್ಥಳೀಯ ಆಡಳಿತವು ಗಾಯಾಳುಗಳಿಗೆ ತಕ್ಷಣದ ಚಿಕಿತ್ಸೆ ನೀಡುತ್ತಿದೆ, ಎಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತಿದ್ದೇನೆ" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.







