ಹಾವೇರಿ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಿಂದ ಹಿಂದೆ ಸರಿದ ಮತ್ತೊಬ್ಬ ಕವಿ ರಮೇಶ್ ಅರೋಲಿ
'ವಾದ್ಯಗಳನ್ನು ಬಳಸುವಂತಿಲ್ಲ, ಕವಿತೆ ಹಾಡುವಂತಿಲ್ಲ' ಎಂಬ ಕಸಾಪ ನಿರ್ಬಂಧಕ್ಕೆ ಖಂಡನೆ

ಹಾವೇರಿ, ಡಿ.31: ಜ.6ರಿಂದ ಜ.8ರವರೆಗೆ ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ 'ಕವಿತೆಗಳನ್ನು ವಾಚಿಸಬೇಕೇ ಹೊರತು ಹಾಡುವಂತಿಲ್ಲ' ಎಂಬ ಕಸಾಪ ನಿಯಮಕ್ಕೆ ವಿರೋಧ ವ್ಯಕ್ತಪಡಿಸಿರುವ ರಾಯಚೂರು ಮೂಲದ ಕವಿ ಡಾ.ರಮೇಶ್ ಅರೋಲಿ ಅವರು ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಸಂಬಂಧ ಸಾಹಿತ್ಯ ಸಮ್ಮೇಳನ ಅಧ್ಯಕ್ಷರು ಮತ್ತು ಸಂಘಟಕರಿಗೆ ಪತ್ರ ಬರೆದಿರುವ ಅವರು, ''ಯಾವುದೇ ಕಾರಣಕ್ಕೂ ವಾದ್ಯಗಳನ್ನು ಬಳಸುವಂತಿಲ್ಲ ಹಾಗೂ ಕವಿತೆಗಳನ್ನು ವಾಚಿಸಬೇಕೇ ಹೊರತು ಹಾಡುವಂತಿಲ್ಲ" ಎಂಬ ನಿಯಮ ಹಾಕಿದ್ದೀರಿ. ಯಾವುದೇ ವಾದ್ಯ ಬಳಸದೆ ಕವಿತೆಯನ್ನು ನಾನು ಹಾಡ ಬಯಸುತ್ತೇನೆ. ಬಹುತೇಕ ನನ್ನ ಕವಿತೆಗಳು ಹಾಡುಗವಿತೆಯಾಗಿದ್ದು, ಲಯದಿಂದ ಕೂಡಿವೆ. ಕೇವಲ ವಾಚನಕ್ಕೆ ಸೀಮಿತಗೊಳಿಸಿ, ಕವಿತೆ ಹಾಡುವ ನನ್ನ ಸ್ವಾತಂತ್ರ್ಯವನ್ನು ಮಿತಿಗೊಳಿಸಲಾಗಿದೆ. ಹೀಗಾಗಿ ನಾನು ಗೋಷ್ಠಿಗೆ ಬರುವುದಿಲ್ಲ'' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ... ತಾರತಮ್ಯ ಮಾಡಿದ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲ್ಲ: ಎಚ್. ಆರ್ ಸುಜಾತ
''2016ರಲ್ಲಿ ನಡೆದ ರಾಯಚೂರಿನಲ್ಲಿ ನಡೆದ 82ನೇ ಅಕ್ಷರ ಜಾತ್ರೆಯ ಪ್ರಧಾನ ಕವಿಗೋಷ್ಠಿಯಲ್ಲಿ ನಾನು ನನ್ನ ಕವಿತೆಯನ್ನು ಹಾಡಿದ್ದೆ. ಇದಕ್ಕೆ ಭಾರಿ ಜನಮೆಚ್ಚುಗೆ ಸಿಕ್ಕಿತ್ತು. ಅಂಥದ್ದರಲ್ಲಿ ಪರಿಷತ್ತು ಕವಿತೆ ಹಾಡುವುದಕ್ಕೆ ನಿರ್ಬಂಧ ಹಾಕಿದ್ದು ಸರಿಯಲ್ಲ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
''ಶಿಶುನಾಳ ಷರೀಫರು, ದ.ರಾ.ಬೇಂದ್ರೆ, ಕೆ.ಎಸ್.ನರಸಿಂಹಸ್ವಾಮಿ, ಕೆ.ಎಸ್.ನಿಸಾರ್ ಅಹಮದ್, ಲಕ್ಷ್ಮೀನಾರಾಯಣ ಭಟ್ಟ ರು, ಕಂಬಾರರು ಅಷ್ಟೇ ಅಲ್ಲದೆ ಸಮ್ಮೇಳನದ ಅಧ್ಯಕ್ಷರು ಸಹ ಹಾಡುಗಳ ಮೂಲಕವೇ ಕನ್ನಡಿಗರ ಮನವನ್ನು ತಲುಪಿದ್ದು. ಅನೇಕ ಹಿರಿಯರು ಕಾವ್ಯವನ್ನು ಕಟ್ಟಿದ್ದು ಹಾಡಿನ ರೂಪದಲ್ಲಿ. ಇಂದು ಆ ಹಾಡುಗವಿತೆಯನ್ನು ನಿಗದಿತ ಸಮಯದಲ್ಲಿ ಹಾಡಲು ಪರಿಷತ್ತು ಅನುಮತಿ ಇಲ್ಲದೇ, ಕೇವಲ ವಾಚನ ಕ್ಕೆ ಮಿತಿಗೊಳಿಸಿದ್ದು ಸರಿಯಲ್ಲ ಅನಿಸಿ ನನ್ನ ಭಾಗವಹಿಸುವಿಕೆಯನ್ನು ಹಿಂಪಡಿಯುತ್ತಿದ್ದೇನೆ'' ಎಂದು ಕವಿ ರಮೇಶ್ ಅರೋಲಿ ಖಚಿತಪಡಿಸಿದ್ದಾರೆ.







