ಅವರ ಮೂಗಿನಡಿಯೇ 50 ಶಾಸಕರನ್ನು ಸೆಳೆದೆವು: ಉದ್ಧವ್ ಠಾಕ್ರೆಗೆ ಫಡ್ನವೀಸ್ ತಿರುಗೇಟು

ನಾಗಪುರ: "ನಮಗೆ ಆದಿತ್ಯ ಠಾಕ್ರೆಯ ತಂದೆ ಉದ್ಧವ್ ಠಾಕ್ರೆ ಬಗ್ಗೆ ಯಾವುದೇ ಭೀತಿಯಿಲ್ಲ. ನಾವು ಅವರ ಮೂಗಿನಡಿಯೇ 50 ಶಾಸಕರನ್ನು ಸೆಳೆದು ಸರ್ಕಾರ ರಚಿಸಿದ್ದೇವೆ. ಆಗ ಅವರು ಮುಂಬೈ ಹೊತ್ತಿ ಉರಿಯುತ್ತದೆ ಎಂದು ಹೇಳಿದ್ದರು. ಆದರೆ, ಒಂದು ಬೆಂಕಿ ಕಡ್ಡಿ ಕೂಡಾ ಹೊತ್ತಿ ಉರಿಯಲಿಲ್ಲ" ಎಂದು ಉದ್ಧವ್ ಠಾಕ್ರೆ ವಿರುದ್ಧದ ಇತ್ತೀಚಿನ ದಾಳಿಯಲ್ಲಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಗೇಲಿ ಮಾಡಿದ್ದಾರೆ.
ಶುಕ್ರವಾರ ವಿಧಾನಸಭಾ ಅಧಿವೇಶನವು ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾದ ನಂತರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಗೆ ಆದಿತ್ಯ ಠಾಕ್ರೆ ಅಥವಾ ಅವರ ತಂದೆ ಉದ್ಧವ್ ಠಾಕ್ರೆ ಬಗ್ಗೆ ಯಾವುದೇ ಭಯವಿಲ್ಲ ಎಂದು ತಿರುಗೇಟು ನೀಡಿದರು.
ಇದಕ್ಕೂ ಮುನ್ನ ಶಿವಸೇನಾ ನಾಯಕ ಆದಿತ್ಯ ಠಾಕ್ರೆ, ರಾಜ್ಯ ಸರ್ಕಾರವು ಕೇವಲ 32 ವರ್ಷ ವಯಸ್ಸಿನ ತನಗೆ ಹೆದರುತ್ತಿದೆ ಎಂದು ವ್ಯಂಗ್ಯವಾಡಿದ್ದರು. ಅದಕ್ಕೆ ಪ್ರತಿಯಾಗಿ, ರಾಜ್ಯ ಸರ್ಕಾರವು ಅವರ ತಂದೆಗೂ ಹೆದರುವುದಿಲ್ಲ ಎಂದು ಮುಖ್ಯಮಂತ್ರಿ ಏಕ್‌ನಾಥ್ ಶಿಂದೆ ವಾಗ್ದಾಳಿ ನಡೆಸಿದ್ದರು.
ಶುಕ್ರವಾರ ವಿಧಾನಸಭಾ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಸಿದ್ಧಿವಿನಾಯಕ ದೇವಾಲಯ ಟ್ರಸ್ಟ್‌ನಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಇನ್ನು ಒಂದು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ನಂತರ ಮಹಾರಾಷ್ಟ್ರ ವಿಧಾನಸಭೆಯ ಚಳಿಗಾಲದ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಲಾಗಿದ್ದು, ಮುಂದಿನ ಅಧಿವೇಶನ ಮುಂಬೈನಲ್ಲಿ ಫೆಬ್ರವರಿ 27ರಿಂದ ಶುರುವಾಗಲಿದೆ.







