ಆರ್ಥಿಕ ಸ್ಥಿತಿಗತಿ ಕುರಿತಂತೆ ಮಂಗಳೂರು ಮನಪಾ ಶ್ವೇತ ಪತ್ರ ಹೊರಡಿಸಲಿ: ವಿಪಕ್ಷ ನಾಯಕ ನವೀನ್ ಡಿಸೋಜ ಆಗ್ರಹ

ಮಂಗಳೂರು, ಡಿ.31: ಮಂಗಳೂರು ಮಹಾನಗರ ಪಾಲಿಕೆಯ ಆರ್ಥಿಕ ಸ್ಥಿತಿಗತಿ ಕುರಿತಂತೆ ಶ್ವೇತಪತ್ರ ಹೊರಡಿಸಬೇಕು ಎಂದು ವಿಪಕ್ಷ ನಾಯಕ ನವೀನ್ ಡಿಸೋಜ ಒತ್ತಾಯಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನಪಾ ಸಾಮಾನ್ಯ ಸಭೆಯಲ್ಲಿ 30 ಕೋಟಿ ರೂ.ಗಳ ಬಗ್ಗೆ ಕೆಯುಐಡಿಎಫ್ ಸಿ ಸಾಲಕ್ಕೆ ಮೇಯರ್ ಪೂರ್ವ ಮಂಜೂರಾತಿ ನೀಡಿದ್ದಾರೆ. ಇದಕ್ಕೆ ಸಭೆಯಲ್ಲಿ ಈಗಾಗಲೇ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಸಣ್ಣ ಪುಟ್ಟ ಕಾಮಗಾರಿಗಳಿಗೆ ಕೆಯುಡಿಎಫ್ ಸಿ ಸಾಲ ಪಡೆಯುವ ದುರ್ಗತಿ ಮಹಾನಗರ ಪಾಲಿಕೆಗೆ ಬಂದಿಲ್ಲ ಎಂದು ಹೇಳಿದರು.
ಮುಂಬರುವ ಚುನಾವಣೆಯ ಸಂದರ್ಭದಲ್ಲಿ ಈ ವಿಷಯವನ್ನು ಜನತೆಯ ಮುಂದಿಡಲಾಗುವುದು. ಇದಕ್ಕಾಗಿ ಹೋರಾಟ ಮಾಡುವ ಕುರಿತಂತೆ ಮುಂದಿನ ದಿನಗಳಲ್ಲಿ ಪಕ್ಷದ ನಾಯಕರ ಜತೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದು ನವೀನ್ ಡಿಸೋಜ ತಿಳಸಿದರು.
ಮನಪಾ ಹಿರಿಯ ಸದಸ್ಯ ಶಶಿಧರ ಹೆಗ್ಡೆ ಮಾತನಾಡಿ, ಮನಪಾದ ಕ್ರಿಯಾ ಯೋಜನೆ ರೂಪಿಸಲು ಅವಕಾಶ ಇರುವುದು ಮೇಯರ್ಗೆ ಮಾತ್ರ. ಶಾಸಕರು ಸರಕಾರದಿಂದ ವಿಶೇಷ ಅನುದಾನದ ತಂದು ಯೋಜನೆಗಳನ್ನು ರೂಪಿಸಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅನಿಲ್ ಕುಮಾರ್, ಅಬ್ದುಲ್ ರವೂಫ್, ಅಶ್ರಫ್, ಕೇಶವ ಮರೋಳಿ ಉಪಸ್ಥಿತರಿದ್ದರು.