ಬಿಜೆಪಿಯನ್ನು ಗುರು ಎಂದು ಪರಿಗಣಿಸುತ್ತೇನೆ, ಏನು ಮಾಡಬಾರದೆಂದು ಅವರಿಂದ ಕಲಿಯುತ್ತೇನೆ: ರಾಹುಲ್ ಗಾಂಧಿ

ಹೊಸದಿಲ್ಲಿ: "ಅವರು (BJP) ನಮ್ಮ ಕುರಿತು ಆಕ್ರಮಣಕಾರಿಯಾಗಿರಬೇಕೆಂದು ನಾನು ಬಯಸುತ್ತೇನೆ. ಇದು ಕಾಂಗ್ರೆಸ್ (Congress) ಪಕ್ಷಕ್ಕೆ ಅವರ ಸಿದ್ಧಾಂತವನ್ನು ಅರ್ಥೈಸಲು ಸಾಧ್ಯವಾಗುತ್ತದೆ. ಅವರನ್ನು (ಬಿಜೆಪಿ) ನಾನು ನನ್ನ ಗುರು ಎಂದು ಪರಿಗಣಿಸುತ್ತೇನೆ, ಏಕೆಂದರೆ ಅವರು ನನಗೆ ಹಾದಿಯನ್ನು ತೋರಿಸುತ್ತಿದ್ದಾರೆ ಹಾಗೂ ಏನನ್ನು ಮಾಡಬಾರದೆಂಬ ಕುರಿತು ನನಗೆ ತರಬೇತಿ ನೀಡುತ್ತಾರೆ," ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ.
'ಭಾರತ್ ಜೋಡೋ ಯಾತ್ರೆ' ಕುರಿತು ಪ್ರತಿಕ್ರಿಯಿಸಿದ ಅವರು ʻʻಇದನ್ನು ಆರಂಭಿಸಿದಾಗ ಇದು ಕನ್ಯಾಕುಮಾರಿಯಿಂದ ಕಾಶ್ಮೀರ ತನಕದ ಒಂದು ಸಾಮಾನ್ಯ ಯಾತ್ರೆಯಾಗಬಹುದೆಂದು ಅಂದಕೊಂಡಿದ್ದೆ. ಆದರೆ ನಿಧಾನವಾಗಿ ಈ ಯಾತ್ರೆಗೆ ದನಿಯಿದೆ ಹಾಗೂ ಭಾವನೆಗಳಿವೆ ಎಂದು ತಿಳಿದು ಬಂತು," ಎಂದು ಅವರು ಹೇಳಿದರು.
"ಭಾರತ್ ಜೋಡೋ ಯಾತ್ರೆಯ ಬಾಗಿಲುಗಳು ಎಲ್ಲರಿಗೂ ತೆರೆದಿವೆ. ನಮ್ಮನ್ನು ಸೇರಿಕೊಳ್ಳಲು ಬಯಸುವ ಯಾರನ್ನೂ ನಾವು ತಡೆಯುವುದಿಲ್ಲ. ಅಖಿಲೇಶ್ ಜೀ, ಮಾಯಾವತೀ ಜಿ ಮತ್ತಿತರರಿಗೆ ಮೊಹಬ್ಬತ್ ಕಾ ಹಿಂದುಸ್ತಾನ್ ಬೇಕಿದೆ," ಎಂದು ಅವರು ಹೇಳಿದರು.





