ಬಂಟ್ವಾಳ | ಅಡಿಕೆ ಬೆಳೆಗಾರರು ಬಿಜೆಪಿಯನ್ನು ಶಾಶ್ವತವಾಗಿ ಮರೆಯಾಗಿಸುವ ಕಾರ್ಯ ಮಾಡಲಿದ್ದಾರೆ: ರಮಾನಾಥ ರೈ

ಬಂಟ್ವಾಳ: ಬಿಜೆಪಿ ಸರಕಾರವು ವ್ಯಾಪಾರಿಗಳ ಲಾಭಕ್ಕಾಗಿ ಅಡಿಕೆ ಆಮದು ಹೆಚ್ಚಿಸುವ ಜತೆಗೆ ಅಸಂಬದ್ಧ ಹೇಳಿಕೆಗಳ ಮೂಲಕ ಅಡಿಕೆ ಬೆಳೆಯುವ ರೈತರ ತಲೆ ಒಡೆಯುವ ಕಾರ್ಯ ಮಾಡುತ್ತಿದ್ದು, ಇದರಿಂದ ಬೆಳೆಗಾರರು ಬಿಜೆಪಿಯನ್ನು ಶಾಶ್ವತವಾಗಿ ಮರೆಯಾಗಿಸುವ ಕಾರ್ಯ ಮಾಡಲಿದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.
ಅಡಿಕೆ ಬೆಳೆಗಾರರ ವಿರುದ್ಧ ರಾಜ್ಯ ಗೃಹ ಸಚಿವರ ಹೇಳಿಕೆ ವಿರುದ್ಧ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಿಸಾನ್ ಘಟಕದ ವತಿಯಿಂದ ಬಿ.ಸಿ.ರೋಡ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಅಡಿಕೆ ಬೆಳೆಗೆ ಹಳದಿ ರೋಗ, ಕೊಳೆರೋಗ, ಬೆಲೆ ಕುಸಿತದಿಂದ ತೊಂದರೆಯಾದಾಗ ಆಡಳಿತಾರೂಢ ಕಾಂಗ್ರೆಸ್ ಸರಕಾರ ಪರಿಹಾರದ ಜತೆಗೆ ಹೆಚ್ಚುವರಿ ಬೆಲೆಯನ್ನೂ ನೀಡಿದೆ. ಆದರೆ ಈಗ ಪ್ರಗತಿಪರ ರೈತರೆಂದು ಹೇಳಿಕೊಳ್ಳುವವರು ಸುಮ್ಮನಿದ್ದಾರೆ. ಸದನದಲ್ಲಿ ಗೃಹ ಸಚಿವರ ಅಡಿಕೆ ವಿರುದ್ಧದ ಹೇಳಿಕೆ ಸಂದರ್ಭದಲ್ಲಿ ಬಾಯಿಗೆ ಬೀಗ ಹಾಕಿದ್ದ ಬಿಜೆಪಿಯ ಶಾಸಕರು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಸದಸ್ಯ ಪಿಯೂಸ್ ಎಲ್.ರಾಡ್ರಿಗಸ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಜಿ.ಪಂ.ಮಾಜಿ ಸದಸ್ಯರುಗಳಾದ ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮಹಮ್ಮದ್, ಪದ್ಮಶೇಖರ್ ಜೈನ್, ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ಘಟಕಾದ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಎಪಿಎಂಸಿ ಮಾಜಿ ಅಧ್ಯಕ್ಷ ಪದ್ಮನಾಭ ರೈ, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮೋಹನ್ ಗೌಡ ಕಲ್ಮಂಜ, ಬಂಟ್ವಾಳ ಪುರಸಭಾ ಅಧ್ಯಕ್ಷ ಮಹಮ್ಮದ್ ಶರೀಫ್, ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಪಕ್ಷ ಪ್ರಮುಖರಾದ ಎಂ.ಚಂದ್ರಶೇಖರ ಪೂಜಾರಿ, ಮಾಯಿಲಪ್ಪ ಸಾಲ್ಯಾನ್, ಜಯಂತಿ ಪೂಜಾರಿ, ಸದಾಶಿವ ಬಂಗೇರ, ಮಧುಸೂದನ್ ಶೆಣೈ, ಚಿತ್ತರಂಜನ್ ಶೆಟ್ಟಿ ಬೊಂಡಾಲ, ಬಿ.ದೇವಿಪ್ರಸಾದ್ ಪೂಂಜ, ಸದಾಶಿವ ಶೆಣೈ ಖಂಡಿಗ, ದಯಾನಂದ ಶೆಟ್ಟಿ ಅಮೈ, ಪರಮೇಶ್ವರ ಮೂಲ್ಯ, ವಾಸು ಪೂಜಾರಿ, ಲೋಕೇಶ್ ಸುವರ್ಣ, ವೆಂಕಪ್ಪ ಪೂಜಾರಿ, ಜಗದೀಶ್ ಕೊಯಿಲ, ಇಬ್ರಾಹಿಂ ನವಾಜ್ ಬಡಕಬೈಲ್ ಮೊದಲಾದವರು ಭಾಗವಹಿಸಿದ್ದರು.