ಹೊಸ ವರ್ಷಾಚರಣೆ ಸಂಭ್ರಮ: ಬೆಂಗಳೂರಿನ ಎಲ್ಲೆಡೆ ಕಟ್ಟೆಚ್ಚರ, ಬಿಗಿ ಪೊಲೀಸ್ ಭದ್ರತೆ

ಬೆಂಗಳೂರು, ಡಿ. 31: ಹೊಸ ವರ್ಷಾಚರಣೆ ಸಂಭ್ರಮದ ಹಿನ್ನೆಲೆ ರಾಜ್ಯದ ರಾಜಧಾನಿ ಬೆಂಗಳೂರು ನಗರದ ವಿವಿಧೆಡೆ ಯಾವುದೇ ಅಹಿತಕರ ಘಟನೆಗೆ ನಡೆಯದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಪ್ರಮುಖವಾಗಿ ನಗರದ ಬ್ರಿಗೇಡ್ ರಸ್ತೆ, ಮಹಾತ್ಮಗಾಂಧಿ ರಸ್ತೆ ಹಾಗೂ ಚರ್ಚ್ ಸ್ಟ್ರೀಟ್‍ಗಳಲ್ಲಿ ಸಿಸಿ ಕ್ಯಾಮರಾ, ಡ್ರೋಣ್ ಸೇರಿದಂತೆ ಹಲವಡೆ ವ್ಯಾಪಕ ಭದ್ರತೆ ಕಲ್ಪಿಸಲಾಗಿದೆ. ಜತೆಗೆ ಕೋರಮಂಗಲ, ಕಲ್ಯಾಣನಗರ, ಕಮ್ಮನಹಳ್ಳಿ, ಯಲಹಂಕ ಸೇರಿದಂತೆ ವಿವಿಧೆಡೆಯ ಹೋಟೆಲ್, ಪಬ್, ಪಾರ್ಟಿ ಹಾಲ್‍ಗಳಲ್ಲಿ ಭದ್ರತೆ ಕೈಗೊಳ್ಳಲಾಗಿದ್ದು, ಒಟ್ಟಾರೆ, ಭದ್ರತೆಗಾಗಿ 10 ಸಾವಿರಕ್ಕೂ ಅಧಿಕ ಮಂದಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ.
ಶನಿವಾರ ಮಧ್ಯಾಹ್ನ 3ರಿಂದ ರಾತ್ರಿ 1 ಗಂಟೆಯ ವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಬ್ರಿಗೇಡ್ ರಸ್ತೆಯಲ್ಲಿ ಜನರಿಗೆ ಏಕಮುಖ ಪ್ರವೇಶಕ್ಕೆ ಮಾತ್ರ ಅವಕಾಶ ನೀಡಲಾಗಿದೆ. 2 ರಸ್ತೆಗಳ ಜಂಕ್ಷನ್‍ನಲ್ಲಿ ಪ್ರವೇಶ ದ್ವಾರ ನಿರ್ಮಾಣ ಮಾಡಲಾಗುತ್ತದೆ. ಪ್ರವೇಶ ದ್ವಾರದಲ್ಲಿ ಮೆಟಲ್ ಡಿಟೆಕ್ಟರ್ ಉಪಕರಣವನ್ನು ಇಡಲಾಗಿರುವ ದೃಶ್ಯ ಕಂಡಿತು.
ಮಹಿಳೆಯರ ಸುರಕ್ಷತೆಗೆ ನಗರದ ಪ್ರಮುಖ ಸ್ಥಳಗಳಲ್ಲಿ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿ ಒಳಗೊಂಡ ಮಹಿಳಾ ಸುರಕ್ಷತಾ ಸ್ಥಳಗಳನ್ನು ತೆರೆಯಲಾಗಿದೆ. ತುರ್ತು ಸಂದರ್ಭದಲ್ಲಿ ಮಹಿಳೆಯರು ಈ ಸೌಲಭ್ಯ ಬಳಸಿಕೊಳ್ಳುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತ ಸಿ.ಎಚ್.ಪ್ರತಾಪ್ ರೆಡ್ಡಿ, ಭದ್ರತೆಗೆ ಇಬ್ಬರು ಹೆಚ್ಚುವರಿ ಆಯುಕ್ತರು, ಇಬ್ಬರು ಜಂಟಿ ಆಯುಕ್ತರು, 15 ಮಂದಿ ಡಿಸಿಪಿ, 45 ಮಂದಿ ಎಸಿಪಿ, 160 ಮಂದಿ ಇನ್ಸ್‍ಪೆಕ್ಟರ್, 600 ಸಬ್ ಇನ್ಸ್‍ಪೆಕ್ಟರ್, 800 ಎಎಸ್ಸೈ, 1,800 ಎಚ್‍ಸಿ ಹಾಗೂ 5,200 ಕಾನ್‍ಸ್ಟೆಬಲ್‍ಗಳು ಸೇರಿ ಒಟ್ಟು 8,624 ಭದ್ರತೆಗೆ ನಿಯೋಜನೆ ಮಾಡಲಾಗಿದೆ.
ನಗರದ ಪೊಲೀಸರ ಜೊತೆ ಹೊರ ಜಿಲ್ಲೆಗಳು ಹಾಗೂ ತರಬೇತಿಯಲ್ಲಿರುವ 20 ಎಸಿಪಿ, 50 ಪಿಐ, 50 ಪಿಎಸ್‍ಐ ಮತ್ತು 1300 ಪೊಲೀಸರ ಸಹ ನಿಯುಕ್ತಗೊಂಡಿದ್ದಾರೆ. 52 ಕೆಎಸ್‍ಆರ್‍ಪಿ ಹಾಗೂ 25 ಸಿಎಆರ್ ತುಕಡಿಗಳನ್ನು ಭದ್ರತೆಗೆ ಬಳಸಲಾಗಿದೆ ಎಂದು ಮಾಹಿತಿ ನೀಡಿದರು.
ಮೇಲ್ಸೇತುವೆ ಬಂದ್: ನಾಗರಿಕರ ಹಿತದೃಷ್ಟಿಯಿಂದ ಇಂದು ರಾತ್ರಿ 9ರಿಂದ ರವಿವಾರ ಬೆಳಗ್ಗೆ 6 ಗಂಟೆಯ ವರೆಗೆ ವಿಮಾನ ನಿಲ್ದಾಣ ಮೇಲ್ಸುತುವೆ ಹೊರತುಪಡಿಸಿ, ನಗರದ ಇನ್ನುಳಿದ 30 ಮೇಲ್ಸುತುವೆಗಳನ್ನು ಬಂದ್ ಮಾಡಲಾಗಿದೆ ಎಂದು ವಿಶೇಷ ಆಯುಕ್ತ (ಸಂಚಾರ) ಡಾ.ಎಂ.ಎ.ಸಲೀಂ ತಿಳಿಸಿದ್ದಾರೆ.






.jpg)
.jpg)

