ಪುತ್ತೂರು | ಜಾನುವಾರ ಚರ್ಮಗಂಟು ರೋಗ ನಿಯಂತ್ರಣಕ್ಕಾಗಿ ಅಭಿಯಾನ: ಸುಚರಿತ ಶೆಟ್ಟಿ

ಪುತ್ತೂರು: ರೋಗ ನಿರೋಧಕ ಶಕ್ತಿಯ ಕೊರತೆಯ ಕಾರಣದಿಂದಾಗಿ ಜಾನುವಾರುಗಳಲ್ಲಿ ಚರ್ಮಗಂಟು ರೋಗವು ಕಾಣಿಸಿಕೊಳ್ಳುತ್ತಿದೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಕ್ಕೂಟದ ವತಿಯಿಂದ ಮುಂದಿನ 15 ದಿನಗಳಲ್ಲಿ ಅಭಿಯಾನ ನಡೆಸಲಾಗುವುದು ಎಂದು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ತಿಳಿಸಿದ್ದಾರೆ.
ಅವರು ಶನಿವಾರ ಪುತ್ತೂರಿಗೆ ಆಗಮಿಸಿದ್ದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಚರ್ಮಗಂಟು (ಲುಂಪಿ ಸ್ಕಿನ್ ಡಿಸೀಸ್) ರೋಗವು ಅಂಟುರೋಗವಲ್ಲ. ಜಾನುವಾರುಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಈ ರೋಗ ಕಾಣಿಸಿಕೊಳ್ಳುತ್ತದೆ. ರೊಗ ಪೀಡಿತ ಹಸುಗಳು ನೀಡುವ ಹಾಲಿನಲ್ಲಿ ಒಂದಷ್ಟು ಇಳಿಮುಖವಾಗುತ್ತದೆ ಹೊರತು ಹಾಲಿನ ಗುಣಮಟ್ಟದಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ಈ ರೋಗವನ್ನು ತಡೆಯುವ ನಿಟ್ಟಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಔಷಧ, ಲಸಿಕೆ ನೀಡುವ ಪ್ರಕ್ರಿಯೆ ಜಾರಿಯಲ್ಲಿದ್ದು, ಇದರಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ರೋಗ ಕಡಿಮೆಯಾಗಿದೆ. ಬೆಳ್ತಂಗಡಿ ಭಾಗದಲ್ಲಿ ಒಂದಷ್ಟು ಹೆಚ್ಚಿದೆ. ಪಶುಸಂಗೋಪನಾ ಇಲಾಖೆ, ನಮ್ಮ ವೈದ್ಯರು ಸೇರಿಕೊಂಡು ಮುಂದಿನ 15 ದಿನಗಳಲ್ಲಿ ಸಮರೋಪಾದಿ ಕ್ರಮ ಕೈಗೊಳ್ಳಲಿದ್ದೇವೆ. ರೋಗ ಬಾಧಿತ ದನಗಳನ್ನು ಗುರುತಿಸಿ ಉಚಿತ ಚಿಕಿತ್ಸೆ ನೀಡಲು ವೈದ್ಯರ ತಂಡ ಸಿದ್ಧವಿದೆ.ಹೈನುಗಾರರು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಪ್ರಸ್ತುತ ದ.ಕ. ಹಾಲು ಒಕ್ಕೂಟದಲ್ಲಿ ದಿನವೊಂದಕ್ಕೆ 4.70 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಉತ್ಪಾದನಾ ಕ್ಷೇತ್ರ, ಗುಣಮಟ್ಟ, ಗಾಹಕ ಸ್ನೇಹಿ ವಿಚಾರ ಮತ್ತು ಆಡಳಿತಾತ್ಮಕವಾಗಿ ಉತ್ತಮ ಸಾಧನೆ ಮಾಡುತ್ತಿದೆ. ರಾಜ್ಯದಲ್ಲೇ ನಮ್ಮ ಒಕ್ಕೂಟ ಮೊದಲ ಸ್ಥಾನದಲ್ಲಿದೆ. ಕಾಲೇಜು ಕ್ಯಾಂಪಸ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ನಂದಿನಿ ಉತ್ಪನ್ನಗಳ ಪಾರ್ಲರ್ ಸ್ಥಾಪಿಸುವ ಕಾರ್ಯ ನಡೆಯುತ್ತಿದ್ದು, ಈಗಾಗಲೇ ಐದಾರು ಕಡೆ ಕಾರ್ಯಾರಂಭಗೊಂಡಿದೆ. ಹಾಲಿ ಆರ್ಥಿಕ ವರ್ಷಾಂತ್ಯಕ್ಕೆ ಮೊದಲು ಇನ್ನೂ ಕೆಲವು ಪಾರ್ಲರ್ ಸ್ಥಾಪಿಸುವ ಗುರಿ ಹೊಂದಲಾಗಿದೆ. 157 ಉತ್ಪನ್ನಗಳನ್ನು ನಂದಿನಿ ಹೊಂದಿದ್ದು, ಬೇಡಿಕೆ ಇರುವ ಉತ್ಪನ್ನಗಳನ್ನು ಪಾರ್ಲರ್‍ಗಳ ಮೂಲಕ ಒದಗಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ. ಜಯರಾಮ ರೈ, ನಿರ್ದೇಶಕ ನಾರಾಯಣ ಪ್ರಕಾಶ್ ಉಪಸ್ಥಿತರಿದ್ದರು.