ಮಂಗಳೂರು: ಕುಂಬ್ಳೆ ಸುಂದರ ರಾವ್‌ರ ಆತ್ಮವೃತ್ತಾಂತ ‘ಯಕ್ಷ ಪಥದ ಯಾತ್ರಿಕ’ ಕೃತಿ ಬಿಡುಗಡೆ

ಮಂಗಳೂರು: ನಗರದ ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗ, ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಹಾಗೂ ವಿಕಾಸ ಪ್ರಕಾಶನ ಬೆಂಗಳೂರು ಇದರ ಸಹಯೋಗದಲ್ಲಿ ಮಾಜಿ ಶಾಸಕ, ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ದಿ. ಕುಂಬ್ಳೆ ಸುಂದರ್ ರಾವ್‌ರ ಆತ್ಮವೃತ್ತಾಂತ ‘ಯಕ್ಷ ಪಥದ ಯಾತ್ರಿಕ’ ಕೃತಿ ಬಿಡುಗಡೆ ಕಾರ್ಯಕ್ರಮವು ಶನಿವಾರ ಕಾಲೇಜಿನ ಎಲ್‌ಸಿಆರ್‌ಐ ಸಭಾಂಗಣದಲ್ಲಿ ನಡೆಯಿತು.
ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಯಕ್ಷಗಾನ ಕಲಾವಿದ ಕೆ. ಗೋವಿಂದ ಭಟ್, ಯಕ್ಷಗಾನದಲ್ಲಿ ಕುಂಬ್ಳೆ ಸುಂದರ ರಾವ್ ತನ್ನ ಮಾತಿನ ಮೂಲಕ ತನ್ನದೇ ಅಸ್ತಿತ್ವ ಉಳಿಸಿಕೊಂಡಿದ್ದರು. ವಿದ್ವಾಂಸರನ್ನು ಗೌರವಿಸುವ, ಎಲ್ಲರೊಂದಿಗೆ ಬೆರೆಯುವ, ಹೊಂದಿಕೊಳ್ಳುವ ಕಲೆಯನ್ನು ಕರಗತ ಮಾಡಿಕೊಂಡಿದ್ದರು ಎಂದು ಹೇಳಿದರು.
ತನ್ನ ಕುಲಕಸುಬು ಸಿದ್ಧಿಪಡದಿದ್ದಾಗ ಯಕ್ಷಗಾನ ರಂಗವನ್ನು ಆರಿಸಿದ ಕುಂಬ್ಳೆ, ಅರ್ಥಗಾರಿಕೆಯಲ್ಲಿ ಮೇರು ಸಾಧಕರಾಗಿದ್ದರು. ಅವರಿಗೆ ನೃತ್ಯ ಒಳಿದಿರಲಿಲ್ಲ. ಆದರೆ ಕಲಿಯುವ ಪ್ರಯತ್ನ ಮಾಡಿದ್ದರು. ಅಭಿಯನದಿಂದ ದೂರವಾಗುತ್ತಿದ್ದಂತೆಯೇ ಯಕ್ಷಗಾನದಲ್ಲಿ ನೆಲೆನಿಂತು ಹೆಸರು ಮಾಡಬೇಕು ಎನ್ನುವ ಛಲದಿಂದ ಅರ್ಥಗಾರಿಕೆಯ ಮೂಲಕ ಗಮನ ಸೆಳೆದಿದ್ದರು ಎಂದು ಕೆ. ಗೋವಿಂದ ಭಟ್ ನುಡಿದರು.
ಹಿರಿಯ ಯಕ್ಷಗಾನ ವಿಮರ್ಶಕ ಡಾ.ಎಂ. ಪ್ರಭಾಕರ ಜೋಶಿ ಮಾತನಾಡಿ, ಕುಂಬ್ಳೆ ಸುಂದರ ರಾವ್ ಮತ್ತು ಶೇಣಿ ಯಕ್ಷಗಾನದ ಮಾತುಗಾರಿಕೆಗೆ ಹೊಸ ರೂಪ ಕೊಟ್ಟವರು. ದೇಶದ ಶ್ರೇಷ್ಟ ಕಲಾವಿದರಾಗಿದ್ದ ಕುಂಬ್ಳೆ ಸುಂದರ ರಾವ್ ಸರ್ವಶ್ರೇಷ್ಟ ಮಾತುಗಾರ. ಅವರ ವಾಕ್ಯ ರಚನೆ, ಮಾತುಗಾರಿಕೆಯ ಸಂಶೋಧನೆ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ವಿಶ್ರಾಂತ ಕುಲಪತಿ ಪ್ರೊ.ಬಿ.ಎ. ವಿವೇಕ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಸಂತ ಅಲೋಶಿಯಸ್ ಕಾಲೇಜು ರೆಕ್ಟರ್ ಫಾ.ಮೆಲ್ವಿನ್ ಜೆ. ಪಿಂಟೋ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯಕ್ಷಪಥದ ಯಾತ್ರಿಕದ ಸಂಪಾದಕ ಡಾ. ನಾ. ದಾಮೋದರ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನ್ಯಾಯವಾದಿ ಶಶಿರಾಜ್ ಕಾವೂರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಭಾಸ್ಕರ ರೈ ಕುಕ್ಕುವಳ್ಳಿಯ ನೇತೃತ್ವದಲ್ಲಿ ಖ್ಯಾತ ಕಲಾವಿದರ ಕೂಡುವಿಕೆಯಿಂದ ಕಾಲಮಿತಿಯ ‘ಕೃಷ್ಣ ಸಂಧಾನ’ ತಾಳಮದ್ದಳೆ ಜರುಗಿತು.