2022ರಲ್ಲಿ ಎನ್ಐಎ ಯಿಂದ 73 ಪ್ರಕರಣಗಳು ದಾಖಲು,456 ಆರೋಪಿಗಳ ಬಂಧನ

ಹೊಸದಿಲ್ಲಿ,ಡಿ.31: ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಯು 2022ರಲ್ಲಿ 73 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು,2021ರಲ್ಲಿ ದಾಖಲಾಗಿದ್ದ 61 ಪ್ರಕರಣಗಳಿಗೆ ಹೋಲಿಸಿದರೆ ಶೇ.19.67ರಷ್ಟು ಏರಿಕೆಯಾಗಿದೆ. ಎನ್ಐಎ ಪಾಲಿಗೆ ಇದು ಸಾರ್ವಕಾಲಿಕ ದಾಖಲೆಯಾಗಿದೆ.
ಈ ಪೈಕಿ 35 ಪ್ರಕರಣಗಳು ಜಮ್ಮು-ಕಾಶ್ಮೀರ,ಅಸ್ಸಾಂ,ಬಿಹಾರ,ದಿಲ್ಲಿ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿಯ ಜಿಹಾದಿ ಭಯೋತ್ಪಾದನೆಗೆ ಸಂಬಂಧಿಸಿವೆ. 11 ಪ್ರಕರಣಗಳು ಜಮ್ಮು-ಕಾಶ್ಮೀರದ್ದಾಗಿದ್ದರೆ,10 ಪ್ರಕರಣಗಳು ಎಡಪಂಥೀಯ ಉಗ್ರವಾದಕ್ಕೆ ಸಂಬಂಧಿಸಿವೆ. ಈಶಾನ್ಯ ಭಾರತದ ಐದು,ಪಿಎಫ್ಐ ಸಂಬಂಧಿತ ಏಳು,ಪಂಜಾಬಿನ ಐದು ಪ್ರಕರಣಗಳಿದ್ದರೆ ಮೂರು ಪ್ರಕರಣಗಳು ಗ್ಯಾಂಗ್ಸ್ಟರ್-ಭಯೋತ್ಪಾದನೆ-ಮಾದಕ ದ್ರವ್ಯ ಕಳ್ಳಸಾಗಣೆದಾರರ ಕೂಟಕ್ಕೆ ಸಂಬಂಧಿಸಿವೆ. ಭಯೋತ್ಪಾದನೆಗೆ ಆರ್ಥಿಕ ನೆರವಿನ ಒಂದು ಮತ್ತು ನಕಲಿ ನೋಟುಗಳಿಗೆ ಸಂಬಂಧಿಸಿದಂತೆ ಎರಡು ಪ್ರಕರಣಗಳನ್ನು ಎನ್ಐಎ ದಾಖಲಿಸಿಕೊಂಡಿದೆ.
2022ರಲ್ಲಿ ಎನ್ಐಎ 368 ಜನರ ವಿರುದ್ಧ 59 ದೋಷಾರೋಪ ಪಟ್ಟಿಗಳನ್ನು ಸಲ್ಲಿಸಿದೆ. ತಲೆಮರೆಸಿಕೊಂಡಿರುವ 19 ಜನರು ಸೇರಿದಂತೆ 456 ಆರೋಪಿಗಳನ್ನು ಬಂಧಿಸಲಾಗಿದ್ದು,ಗಡಿಪಾರಿನ ಬಳಿಕ ಇಬ್ಬರು ಆರೋಪಿಗಳನ್ನು ಮತ್ತು ಹಸ್ತಾಂತರದ ಬಳಿಕ ಓರ್ವ ಆರೋಪಿಯನ್ನು ಎನ್ಐಎ ಬಂಧಿಸಿದೆ. 2022ರಲ್ಲಿ 38 ಎನ್ಐಎ ಪ್ರಕರಣಗಳಲ್ಲಿ ತೀರ್ಪುಗಳು ಪ್ರಕಟಗೊಂಡಿದ್ದು,ಇವೆಲ್ಲವೂ ಶಿಕ್ಷೆಯಲ್ಲಿ ಕೊನೆಗೊಂಡಿವೆ. ನ್ಯಾಯಾಲಯಗಳು 109 ಜನರಿಗೆ ದಂಡಸಹಿತ ಕಠಿಣ ಜೈಲುಶಿಕ್ಷೆಗೆ ಗುರಿಪಡಿಸಿದ್ದು,ಆರು ಜನರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ. ದೋಷನಿರ್ಣಯದ ಒಟ್ಟಾರೆ ಪ್ರಮಾಣವು ಶೇ.94.39ರಷ್ಟಿದೆ.
ಇದಲ್ಲದೆ 2022ರಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಯಡಿ ಎಂಟು ವ್ಯಕ್ತಿಗಳನ್ನು ಭಯೋತ್ಪಾದಕರು ಎಂದು ಘೋಷಿಸಲಾಗಿದ್ದು,ಎನ್ಐಎ ಅವರ ವಿರುದ್ಧ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಎನ್ಐಎ ಮೂರನೇ ಸಚಿವ ಮಟ್ಟದ ‘ನೋ ಮನಿ ಫಾರ್ ಟೆರರ್’ ಸಮಾವೇಶವನ್ನು 2022,ನ.18-19ರಂದು ಯಶಸ್ವಿಯಾಗಿ ನಡೆಸಿದ್ದು,78 ದೇಶಗಳು ಮತ್ತು 16 ಬಹುಪಕ್ಷೀಯ ಸಂಸ್ಥೆಗಳು ಭಾಗವಹಿಸಿದ್ದವು. ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ನೆರವನ್ನು ತಡೆಯುವ ಪ್ರಯತ್ನಗಳ ಅಂಗವಾಗಿ ಈ ಸಮಾವೇಶವನ್ನು ಆಯೋಜಿಸಲಾಗಿತ್ತು.







