ಉಡುಪಿ: ಹೊಸ ವರ್ಷಾಚರಣೆಗೆ ಜಿಲ್ಲಾಡಳಿತದ ಕೋವಿಡ್ ಮಾರ್ಗಸೂಚಿಗಳು ಪ್ರಕಟ

ಉಡುಪಿ: ಪ್ರಸ್ತುತ ಜಿಲ್ಲೆಯಲ್ಲಿ ಹೊಸ ವರ್ಷದ ಆಚರಣೆ ಹಾಗೂ ಇತರೆ ಸಮಾರಂಭಗಳಲ್ಲಿ ಸಾರ್ವಜನಿಕರು ಗುಂಪಾಗಿ ಸೇರುವುದರಿಂದ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಸಾಧ್ಯವಾಗದೇ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ಕೋವಿಡ್-19 ಸೋಂಕು ಹರಡುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಮುಂದಿನ ಆದೇಶದವರೆಗೆ ಈ ಕೆಳಕಂಡ ನಿಬಂಧನೆಗಳನ್ನು ವಿಧಿಸಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಆದೇಶ ಹೊರಡಿಸಿದ್ದಾರೆ.
ಹೊಸ ವರ್ಷಕ್ಕೆ ಸಂಬಂಧಿಸಿದಂತೆ ಡಿ.31ರಿಂದ ಜನವರಿ 2ರವರೆಗೆ ಆಚರಿಸಲಾಗುವ ಎಲ್ಲಾ ಸಮಾರಂಭಗಳನ್ನು ಮಧ್ಯರಾತ್ರಿ 1 ಗಂಟೆಯ ಒಳಗೆ ಕಡ್ಡಾಯವಾಗಿ ಮುಕ್ತಾಯಗೊಳಿಸಬೇಕು. ದೊಡ್ಡ ಪ್ರಮಾಣದಲ್ಲಿ ನಡೆಸುವ ಸಮಾರಂಭಗಳನ್ನು ಕಡ್ಡಾಯವಾಗಿ ಹೊರಾಂಗಣದಲ್ಲಿ ಬೆಳಗಿನ ಹೊತ್ತಿನಲ್ಲಿ ನಡೆಸಬೇಕು. ಸಾಧ್ಯವಾದಷ್ಟು ಮುಂಜಾನೆ ಹಾಗೂ ತಡರಾತ್ರಿ ಸಮಯದಲ್ಲಿ ಆಚರಣೆ ಮಾಡುವುದನ್ನು ತಪ್ಪಿಸಬೇಕು ಎಂದು ತಿಳಿಸಿದ್ದಾರೆ.
ಸಾರ್ವಜನಿಕರು ಸೇರುವ ಪ್ರದೇಶ ಅಥವಾ ಸ್ಥಳಗಳಲ್ಲಿ ಮುಖ್ಯವಾಗಿ ಒಳಾಂಗಣ ಪ್ರದೇಶ/ಸ್ಥಳಗಳಾದ ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್, ರೆಸಾರ್ಟ್, ಪಬ್, ಕ್ಲಬ್ ಮುಂತಾದವುಗಳಲ್ಲಿ ಆಸನ ಸಾಮರ್ಥ್ಯ ಮೀರದಂತೆ ಸಂಬಂಧಪಟ್ಟ ಮಾಲಕರು ಹಾಗೂ ವ್ಯವಸ್ಥಾಪಕರು ಕ್ರಮ ವಹಿಸಬೇಕು.
ಎಲ್ಲಾ ಸಾರ್ವಜನಿಕ ಸ್ಥಳಗಳು, ಸರಕಾರಿ ಕಚೇರಿಗಳು, ಬಸ್ ನಿಲ್ದಾಣ, ಪ್ರಾರ್ಥನಾ/ ಪೂಜಾ ಮಂದಿರ, ದೇವಸ್ಥಾನ, ಅಂಗಡಿ ಮುಂಗಟ್ಟುಗಳು, ಕೈಗಾರಿಕೆ ಹಾಗೂ ಕಾರ್ಖಾನೆಗಳು ಇತ್ಯಾದಿ ಪ್ರದೇಶಗಳಲ್ಲಿ ಮುಖಗವಸನ್ನು ಧರಿಸುವುದು ಹಾಗೂ ಸ್ಯಾನಿಟೈಸರ್‌ನ್ನು ಬಳಕೆ ಮಾಡುವುದು ಕಡ್ಡಾಯ ಎಂದರು.
ಜ್ವರ, ಕೆಮ್ಮು, ನೆಗಡಿ, ಉಸಿರಾಟದ ಸಮಸ್ಯೆ ಇತ್ಯಾದಿ ಕೋವಿಡ್-19 ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಸ್ವಯಂ ಪ್ರೇರಿತರಾಗಿ ಕೂಡಲೇ ವೈದ್ಯ ರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. 60 ವರ್ಷ ಮೇಲ್ಪಟ್ಟ ವಯಸ್ಕರು, ಅನಾರೋಗ್ಯದಿಂದ ಬಳಲುತ್ತಿ ರುವವರು, ಗರ್ಭಿಣಿಯರು ಮತ್ತು ಬಾಣಂತಿಯರು ಸಭೆ, ಸಮಾರಂಭಗಳಲ್ಲಿ ಭಾಗವಹಿಸುವುದರಿಂದ ದೂರವಿರಬೇಕು ಎಂದು ತಿಳಿಸಿದ್ದಾರೆ
ಸಮಾರಂಭಗಳು, ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್, ರೆಸಾರ್ಟ್, ಪಬ್, ಕ್ಲಬ್ ಇತ್ಯಾದಿಗಳ ಆಯೋಜಕರು, ವ್ಯವಸ್ಥಾಪಕರು ಹಾಗೂ ಸೇವಾ ಸಿಬ್ಬಂದಿಗಳು ಆದ್ಯತೆಯ ಮೇಲೆ ಬೂಸ್ಟರ್ ಡೋಸ್‌ನ್ನು ಪಡೆಯಬೇಕು.ಕನಿಷ್ಠ ಎರಡು ಡೋಸ್ ಲಸಿಕೆಗಳನ್ನು ಪಡೆದಿರಬೇಕು. ಈ ಮೇಲ್ಕಂಡ ಸ್ಥಳಗಳ ಪ್ರವೇಶ ದ್ವಾರದಲ್ಲಿ ಸಾರ್ವಜನಿಕರು ಗುಂಪು ಗುಂಪಾಗಿ ಸೇರುವುದನ್ನು ತಪ್ಪಿಸಲು ಒಂದಕ್ಕಿಂತ ಹೆಚ್ಚಿನ ಪ್ರವೇಶ ದ್ವಾರಗಳನ್ನು ನಿರ್ಮಿಸಬೇಕು ಎಂದು ಹೇಳಿದ್ದಾರೆ.
ಒಳಾಂಗಣ ಪ್ರದೇಶಗಳಲ್ಲಿ ಸಮಾರಂಭಗಳು ನಡೆಯುವ ಎಲ್ಲಾ ಸಂದರ್ಭ ಗಳಲ್ಲೂ ಕಡ್ಡಾಯವಾಗಿ ಮುಖಗವಸನ್ನು ಧರಿಸಬೇಕು ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಪ್ರವೇಶ ದ್ವಾರದಲ್ಲಿ ಮಾಸ್ಕ್ ಇಲ್ಲದೇ ಪ್ರವೇಶ ಇಲ್ಲ ಎಂಬ ಫಲಕವನ್ನು ಪ್ರದರ್ಶಿಸಬೇಕು. ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕೃಿನಿಂಗ್ ವ್ಯವಸ್ಥೆ ಮಾಡಿಕೊಳ್ಳಬೇಕು.ಒಳಾಂಗಣ ಸಮಾರಂಭ ಗಳಲ್ಲಿ ಪ್ರತಿಯೊಬ್ಬರೂ ಹ್ಯಾಂಡ್ ಸ್ಯಾನಿಟೈಸರ್ ಬಳಸಬೇಕು ಎಂದು ಸೂಚಿಸಿದ್ದಾರೆ.
ದೊಡ್ಡ ಸಮಾರಂಭಗಳನ್ನು ನಡೆಸಲು ಉದ್ದೇಶಿಸಿರುವ ಆಯೋಜಕರು ಸಮಾರಂಭಗಳಲ್ಲಿ ಭಾಗವಹಿಸುವ ವ್ಯಕ್ತಿಯು ಅಸ್ವಸ್ಥಗೊಂಡಲ್ಲಿ ಅಂತಹವರನ್ನು ಹತ್ತಿರದ ವಿಶೇಷ ಸೌಲಭ್ಯವುಳ್ಳ ಆಸ್ಪತ್ರೆಗೆ ಆಂಬುಲೆನ್ಸ್ ಸೇವೆಯ ಮೂಲಕ ದಾಖಲಿಸಲು ಮುಂಚಿತವಾಗಿ ವ್ಯವಸ್ಥೆ ಮಾಡಿಕೊಂಡಿರಬೇಕು ಎಂದು ನುಡಿದಿದ್ದಾರೆ.
ಸಿನಿಮಾ ಮಂದಿರಗಳಲ್ಲಿ ಚಲನಚಿತ್ರ ವೀಕ್ಷಿಸಲು ಬರುವ ಪ್ರತಿಯೊಬ್ಬ ಪ್ರೇಕ್ಷಕರು ಎನ್-೯೫ ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಬೇಕು. ಈ ಕುರಿತು ಪ್ರವೇಶ ದ್ವಾರದಲ್ಲಿರುವ ಸಿಬ್ಬಂದಿಗಳು ಪ್ರೇಕ್ಷಕರಿಗೆ ತಿಳಿಸುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.