ವ್ಯವಸ್ಥಿತ ಕೊಲೆ ಪ್ರಕರಣದ ವಿರುದ್ದ ಕ್ರಮಕೈಗೊಳ್ಳಲು ಪೊಲೀಸರು ವಿಫಲ: ಬಿಜು ಥೋಮಸ್ ಆರೋಪ

ಕಾರ್ಕಳ: ಸಾಣೂರು ಶುಂಠಿಗುಡ್ಡೆಯಲ್ಲಿರುವ ರಬ್ಬರ್ ಪ್ಲಾಂಟೇಶನ್‌ನಲ್ಲಿ ಕೇರಳ ಮಲಪ್ಪುರಂ ನಿವಾಸಿ ಗೋಪಿನಾಥನ್ ನಾಯರ್(60) ಎಂಬವರು ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಆತನ ಸಾವು ಒಂದು ವ್ಯವಸ್ಥಿತ ಕೊಲೆಯಾಗಿದ್ದು, ಈ ಪ್ರಕರಣವನ್ನು ಕಾರ್ಕಳ ಪೊಲೀಸ್ ಇಲಾಖೆ ಸಮರ್ಪಕವಾಗಿ ತನಿಖೆ ನಡೆಸುತ್ತಿಲ್ಲ ರಬ್ಬರ್ ಪ್ಲಾಂಟೇಶನ್ ಮಾಲಕ ಬಿಜು ಥೋಮಸ್ ಆರೋಪಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ರಬ್ಬರ್ ಪ್ಲಾಂಟೇಶನ್ ವಿಚಾರದಲ್ಲಿ ಆರ್.ವಿವೇಕಾನಂದ ಶೆಣೈ ಮತ್ತು ನನ್ನ ನಡುವೆ ತಕರಾರಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ. ಈ ನಡುವೆ ಎರಡು ಬಾರಿ ಆರ್.ವಿವೇಕಾನಂದ ಶೆಣೈ ನನಗೆ ಜೀವ ಬೆದರಿಕೆ ಹಾಕಿದ್ದಾರೆ, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೆ. ಆದರೆ ಪೊಲೀಸರು ಸಮಗ್ರವಾಗಿ ತನಿಖೆ ನಡೆಸಿಲ್ಲ. ಇದೀಗ ಸಂಶಯಾಸ್ಪದ ಸಾವಿನ ಬಗ್ಗೆಯೂ ಪೊಲೀಸರು ತನಿಖೆ ಕೈಗೆತ್ತಿಕೊಂಡು ನ್ಯಾಯ ಒದಗಿಸುವಲ್ಲಿ ವಿಫಲರಾಗಿದ್ದಾರೆ. ನನಗೂ ಜೀವಭಯವಿದ್ದು, ನನ್ನ ಸಂಕಷ್ಟಕ್ಕೆ ಇಲಾಖೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ತನಗೆ ಜೀವಬೆದರಿಕೆ ಇರುವುದರಿಂದ ಸೂಕ್ತ ರಕ್ಷಣೆ ಹಾಗೂ ಈ ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಸಿ ನಮಗೆ ನ್ಯಾಯ ಒದಗಿಸುವಂತೆ ಅವರು ಪೋಲಿಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ
ಪ್ರಕರಣ ದಾಖಲು
ಡಿ.16ರಂದು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಗೋಪಿನಾಥನ್ ನಾಯರ್ ಅವರ ಪತ್ನಿ ಸುಧಾ ಕೆ.ಎಸ್ ಉದ್ಯಮಿ ಆರ್.ವಿವೇಕಾನಂದ ಶೆಣೈ ಹಾಗೂ ದಿಲೀಪ್ ಜಿ ಎಂಬವರ ವಿರುದ್ದ ದೂರು ದಾಖಲಿಸಿದ್ದಾರೆ.
ತನ್ನ ಪತಿಗೆ ಸರಿಯಾಗಿ ವೇತನ ನೀಡದೆ ಅಗತ್ಯವಿದ್ದಾಗ ರಜೆಯೂ ಕೊಡದೆ ಕಿರುಕುಳ ನೀಡುತ್ತಿದ್ದರು. ಕೆಲಸ ಬಿಟ್ಟರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ಆರೋಪಿಸಿದ್ದಾರೆ. ಪತಿಯು ಹಿಂದೆ ಫೋನ್ ಮಾಡುವ ಸಂದರ್ಭ " ನಾನು ಇಲ್ಲಿ ನಾನು ಒಬ್ಬನೇ ಇದ್ದೇನೆ. ಜತೆಯಲ್ಲಿ ಕೆಲಸ ಮಾಡುತ್ತಿದ್ದವರು ಆಪಾದಿತರ ಕಿರುಕುಳದಿಂದ ಬಿಟ್ಟು ಹೋಗಿದ್ದಾರೆ ಎಂದು ಪತಿ ತನಗೆ ತಿಳಿಸಿದ್ದಾರೆ ಎಂದು ಸುಧಾ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
ಕಳೆದ ಅ.17ರಂದು ವಾಯಿಸ್ ಮೆಸೆಜ್ ಕಳುಹಿಸಿ ಎರಡು-ಮೂರು ಮೊಬೈಲ್ ಸಂಖ್ಯೆ ಕಳುಹಿಸುತ್ತೇನೆ. ಅದನ್ನು ಸೇವ್ ಮಾಡಿಟ್ಟುಕೊಂಡು ಸಂಜೆಯ ಸಮಯ ನಾನು ಫೋನ್ ಕರೆ ಸ್ವೀಕರಿಸದಿದ್ದರೆ ಈ ನಂಬರ್‌ಗಳನ್ನು ಪೊಲೀಸರಿಗೆ ತಿಳಿಸುವಂತೆ ಸೂಚಿಸಿರುತ್ತಾರೆ. ಆದರೆ ಅ. 19ರಂದು ಗೋಪಿನಾಥನ್ ಅವರ ಮೃತದೇಹ ರಬ್ಬರ್ ತೋಟದಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರು ಪೆಟ್ರೋಲ್ ಸುರಿದುಕೊಂಡು ಕ್ರೂರ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವರಲ್ಲ. ಆಪಾದಿತರು ತಮ್ಮ ಕ್ರಿಮಿನಲ್ ಹಿನ್ನೆಲೆಯ ಸಂಗಡಿಗರೊಂದಿಗೆ ಪತಿಗೆ ಹಿಂಸೆ ನೀಡಿ ಆತ್ಮಹತ್ಯೆ ಮಾಡಲು ಪ್ರಚೋದಿಸಿದ್ದಾರೆ ಎಂದು ಆಕೆ ದೂರು ನೀಡಿದ್ದಾರೆ.







