ಹೊಸ ವರ್ಷಾಚರಣೆ ಹಿನ್ನೆಲೆ: ಮಂಗಳೂರಿನಲ್ಲಿ ಬಾಂಬ್ ಪತ್ತೆದಳ ಸಹಿತ ಪೊಲೀಸರಿಂದ ತೀವ್ರ ತಪಾಸಣೆ

ಮಂಗಳೂರು: ಹೊಸ ವರ್ಷಾಚರಣೆಯ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಶನಿವಾರ ಮುಸ್ಸಂಜೆಯಿಂದ ತಡರಾತ್ರಿವರೆಗೆ ಬಾಂಬ್ ಪತ್ತೆದಳ ಸಹಿತ ಪೊಲೀಸರಿಂದ ತೀವ್ರ ತಪಾಸಣೆ ನಡೆಸಲಾಯಿತು.
ಕಮಿಷನರೇಟ್ ವ್ಯಾಪ್ತಿಯ 32 ಸ್ಥಳಗಳಲ್ಲಿ ನಿರ್ಮಿಸಲಾಗಿದ್ದ ಚೆಕ್‌ಪೋಸ್ಟ್‌ಗಳಲ್ಲದೆ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸಹಿತ ಬಹುತೇಕ ಜನಸಂದಣಿ, ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಬೈಕ್, ಸ್ಕೂಟರ್, ರಿಕ್ಷಾ, ಕಾರು, ಲಾರಿ ಮತ್ತಿತರ ವಾಹನಗಳನ್ನು ತಪಾಸಣೆಗೊಳಪಡಿಸಿದರು.
ರಾಷ್ಟ್ರೀಯ ಹೆದ್ದಾರಿಗಳಲ್ಲದೆ ವಿವಿಧೆಡೆ ವಾಹನಗಳ ತಪಾಸಣೆಯಲ್ಲದೆ ಶ್ವಾನದಳ, ಬಾಂಬ್ ಪತ್ತೆದಳದಿಂದಲೂ ತಪಾಸಣೆ ನಡೆಸಲಾಯಿತು.
ಪೊಲೀಸ್ ಆಯುಕ್ತ ಶಶಿಕುಮಾರ್ ನೇತೃತ್ವದಲ್ಲಿ ನಡೆದ ತಪಾಸಣೆಯ ವೇಳೆ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದಾರೆಯೇ ಎಂಬುದರ ಬಗ್ಗೆ ಪೊಲೀಸ್ ಹೆಚ್ಚಿನ ಆದ್ಯತೆ ನೀಡಿದ್ದರು. ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದವರ ಪತ್ತೆಗೆ ಸ್ಥಳದಲ್ಲಿ ಉಪಕರಣದ ಮೂಲಕ ಪರೀಕ್ಷೆಗೊಳಪಡಿಸಿದರು. ಹಲವರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಾರ್ವಜನಿಕರ ಅಸಮಾಧಾನ: ನಗರದ ಕೆಪಿಟಿ, ಪಂಪ್‌ವೆಲ್, ವೆಲೆನ್ಸಿಯಾದಲ್ಲಿ ಮುಸ್ಸಂಜೆಯ ವೇಳೆ ನಾಕಾಬಂಧಿ ಹಾಕಿದ ಪರಿಣಾಮ ಅಲ್ಲಲ್ಲಿ ಟ್ರಾಫಿಕ್ ಬ್ಲಾಕ್ ಉಂಟಾಗಿದೆ ಎಂದು ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.







