ಇಸ್ರೇಲ್ನ ಆಕ್ರಮಣದ ಕುರಿತ ನಿರ್ಣಯ ಅಂಗೀಕರಿಸಿದ ವಿಶ್ವಸಂಸ್ಥೆ: ಮತದಾನದಿಂದ ದೂರವುಳಿದ ಭಾರತ

ವಿಶ್ವಸಂಸ್ಥೆ, ಡಿ.31: ‘ಪೂರ್ವ ಜೆರುಸಲೇಂ ಸೇರಿದಂತೆ ಆಕ್ರಮಿತ ಫೆಲಸ್ತೀನ್ ಪ್ರಾಂತದಲ್ಲಿ ಫೆಲಸ್ತೀನ್ ಜನರ ಮಾನವ ಹಕ್ಕುಗಳ ಮೇಲೆ ಪರಿಣಾಮ ಬೀರುವ ಇಸ್ರೇಲ್ ನ ಕಾರ್ಯವಿಧಾನ’ ಎಂಬ ಕರಡು ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಶುಕ್ರವಾರ ಅಂಗೀಕರಿಸಿದೆ.
ನಿರ್ಣಯದ ಪರ 87, ವಿರುದ್ಧ 26 ದೇಶಗಳು ಮತ ಹಾಕಿದರೆ ಭಾರತ ಸೇರಿದಂತೆ 53 ದೇಶಗಳು ಮತದಾನದಿಂದ ದೂರ ಉಳಿದಿದೆ. ಇಸ್ರೇಲ್‌ನ ದೀರ್ಘಕಾಲದ ಆಕ್ರಮಣ ಮತ್ತು ಫೆಲಸ್ತೀನ್ ಭೂಪ್ರದೇಶದ ಸ್ವಾಧೀನದ ಕಾನೂನು ಕ್ರಮಗಳ ಬಗ್ಗೆ ಅಂತರಾಷ್ಟ್ರೀಯ ನ್ಯಾಯಾಲಯದ ಅಭಿಪ್ರಾಯ ಕೇಳುವ ನಿರ್ಣಯ ಇದಾಗಿದೆ.
‘ಫೆಲಸ್ತೀನ್ ಜನರ ಸ್ವ-ನಿರ್ಣಯದ ಹಕ್ಕನ್ನು ಇಸ್ರೇಲ್ ಉಲ್ಲಂಘಿಸುತ್ತಿರುವುದರಿಂದ ಉಂಟಾಗುವ ಕಾನೂನು ಪರಿಣಾಮಗಳು, ಆಕ್ರಮಿತ ಪ್ರದೇಶದಲ್ಲಿ 1967ರಿಂದಲೂ ಮುಂದುವರಿದಿರುವ ಇಸ್ರೇಲ್‌ನ ದೀರ್ಘಕಾಲದ ಸ್ವಾಧೀನತೆ, ಅಲ್ಲಿ ವಸಾಹತು ಸ್ಥಾಪನೆ, ಜೆರುಸಲೇಂನ ಪವಿತ್ರ ನಗರದ ಜನಸಂಖ್ಯಾ ಸಂಯೋಜನೆ, ಸ್ವರೂಪ ಮತ್ತು ಸ್ಥಿತಿಯನ್ನು ಬದಲಾಯಿಸುವ ಗುರಿಯನ್ನು ಹೊಂದಿರುವ ಕ್ರಮಗಳು, ಸಂಬಂಧಿತ ತಾರತಮ್ಯದ ಕಾನೂನು ಕ್ರಮಗಳನ್ನು ಅಳವಡಿಸಿಕೊಳ್ಳುವುದರಿಂದ ಉಂಟಾಗುವ ಕಾನೂನು ಪರಿಣಾಮಗಳ ಬಗ್ಗೆ’ ಅಂತರಾಷ್ಟ್ರೀಯ ನ್ಯಾಯಾಲಯದ ಅಭಿಪ್ರಾಯ ಕೇಳಲು ನಿರ್ಧರಿಸಲಾಗಿದೆ.
ಇಸ್ರೇಲ್‌ನ ನೀತಿಗಳು ಮತ್ತು ಆಚರಣೆಗಳು ಆಕ್ರಮಿತ ಪ್ರದೇಶದ ಕಾನೂನು ಸ್ಥಿತಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮತ್ತು ಈ ಸ್ಥಿತಿಯಿಂದ ಎಲ್ಲಾ ದೇಶಗಳು ಹಾಗೂ ವಿಶ್ವಸಂಸ್ಥೆಗೆ ಉಂಟಾಗುವ ಕಾನೂನು ಪರಿಣಾಮಗಳೇನು ಎಂಬ ಬಗ್ಗೆಯೂ ಸಲಹೆ ನೀಡುವಂತೆ ನಿರ್ಣಯದಲ್ಲಿ ಕೋರಲಾಗಿದೆ. ಅಮೆರಿಕ, ಇಸ್ರೇಲ್ ಸಹಿತ 26 ದೇಶಗಳು ನಿರ್ಣಯದ ವಿರುದ್ಧ ಮತ ಚಲಾಯಿಸಿದರೆ, ಭಾರತ, ಬ್ರೆಝಿಲ್, ಜಪಾನ್, ಮ್ಯಾನ್ಮಾರ್, ಫ್ರಾನ್ಸ್ ಸೇರಿದಂತೆ 53 ದೇಶಗಳು ಮತದಾನದಿಂದ ದೂರ ಉಳಿದಿವೆ.
ಮತದಾನಕ್ಕೂ ಮೊದಲು ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಇಸ್ರೇಲ್ ರಾಯಭಾರಿ ಗಿಲಾಡ್ ಎರ್ಡನ್ ‘ ಇದೊಂದು ಅತಿರೇಕದ ನಿರ್ಣಯವಾಗಿದ್ದು ಅಂತರಾಷ್ಟ್ರೀಯ ನ್ಯಾಯಾಲಯದ ಸಲಹೆ, ಅಭಿಪ್ರಾಯಕ್ಕೆ ಕರೆ ನೀಡುವುದು ವಿಶ್ವಸಂಸ್ಥೆ ಹಾಗೂ ನಿರ್ಣಯವನ್ನು ಬೆಂಬಲಿಸಿದ ಎಲ್ಲಾ ದೇಶಗಳಿಗೂ ನೈತಿಕ ಕಳಂಕವಾಗಿದೆ. ತಮ್ಮ ತಾಯ್ನೆಡಿನಲ್ಲಿರುವ ಯೆಹೂದಿ ಜನರನ್ನು ‘ಆಕ್ರಮಣಕಾರರು’ ಎಂದು ಯಾವುದೇ ಅಂತರಾಷ್ಟ್ರೀಯ ಸಂಸ್ಥೆ ನಿರ್ಧರಿಸಲು ಸಾಧ್ಯವಿಲ್ಲ.ನೈತಿಕವಾಗಿ ದಿವಾಳಿಯಾದ ಮತ್ತು ರಾಜಕೀಯಗೊಳಿಸಲ್ಪಟ್ಟ ವಿಶ್ವಸಂಸ್ಥೆಯಿಂದ ಆದೇಶವನ್ನು ಪಡೆಯುವ ನ್ಯಾಯಾಂಗ ಸಂಸ್ಥೆಯ ಯಾವುದೇ ನಿರ್ಧಾರವು ಸಂಪೂರ್ಣವಾಗಿ ನ್ಯಾಯಸಮ್ಮತವಲ್ಲ’ ಎಂದು ಹೇಳಿದರು.
ಮತದಾನದ ಬಳಿಕ ಪ್ರತಿಕ್ರಿಯಿಸಿದ ವಿಶ್ವ ಯೆಹೂದಿ ಕಾಂಗ್ರೆಸ್ನ ಅಧ್ಯಕ್ಷ ರೊನಾಲ್ಡ್ ಲಾಡರ್ ‘ ವಿಶ್ವಸಂಸ್ಥೆಯಲ್ಲಿನ ಮತದಾನವು ಇಸ್ರೇಲ್ ವಿರುದ್ಧ ನಡೆಯುತ್ತಿರುವ ಪಕ್ಷಪಾತದ ಮಾದರಿಯನ್ನು ತೋರಿಸುತ್ತದೆ’ ಎಂದರು.
ವಿಶ್ವಸಂಸ್ಥೆಯ ನಿರ್ಣಯಕ್ಕೆ ಫೆಲಸ್ತೀನೀಯರ ಸ್ವಾಗತ
ಫೆಲಸ್ತೀನೀಯರ ಪ್ರದೇಶಗಳನ್ನು ಇಸ್ರೇಲ್ ಆಕ್ರಮಿಸಿಕೊಂಡಿರುವುದಕ್ಕೆ ಸಂಬಂಧಿಸಿದ ಕಾನೂನು ಪರಿಣಾಮಗಳ ಬಗ್ಗೆ ಅಂತರಾಷ್ಟ್ರೀಯ ನ್ಯಾಯಾಲಯದ(ಐಸಿಜೆ) ಅಭಿಪ್ರಾಯ ಕೇಳುವ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮತಕ್ಕೆ ಹಾಕಿರುವುದನ್ನು ಸ್ವಾಗತಿಸಿರುವ ಫೆಲಸ್ತೀನ್ ಮುಖಂಡರು, ಇದು ತಮಗೆ ದೊರೆತ ಗೆಲುವಾಗಿದೆ ಎಂದು ಹೇಳಿದ್ದಾರೆ.
‘ಇಸ್ರೇಲ್ ಕಾನೂನಿಗೆ ಒಳಪಟ್ಟಿರುವ ದೇಶವಾಗಿರಲು ಮತ್ತು ನಮ್ಮ ಜನರ ವಿರುದ್ಧ ನಡೆಯುತ್ತಿರುವ ಅಪರಾಧಗಳಿಗೆ ಜವಾಬ್ದಾರರಾಗಲು ಸಮಯ ಬಂದಿದೆ’ ಎಂದು ಫೆಲಸ್ತೀನ್ ಅಧ್ಯಕ್ಷರ ವಕ್ತಾರ ನಬೀ ಅಬು ರುಡಿನೆಹ್ ಹೇಳಿದ್ದಾರೆ. ವಿಶ್ವಸಂಸ್ಥೆಯಲ್ಲಿನ ಮತದಾನ ಇಸ್ರೇಲ್ನ ರಾಜತಾಂತ್ರಿಕ ಗೆಲುವನ್ನು ಪ್ರತಿಬಿಂಬಿಸುತ್ತದೆ ಎಂದು ಹಿರಿಯ ಫೆಲಸ್ತೀನ್ ಅಧಿಕಾರಿ ಹುಸೇನ್ ಅಲ್ಶೇಖ್ ಟ್ವೀಟ್ ಮಾಡಿದ್ದಾರೆ.







