ಬಂಟ್ವಾಳ: ಮೆಲ್ಕಾರ್ ಮಹಿಳಾ ಕಾಲೇಜು 14ನೆ ವಾರ್ಷಿಕೋತ್ಸವ

ಬಂಟ್ವಾಳ: ಮಾರ್ನಬೈಲು ಮೆಲ್ಕಾರ್ ಮಹಿಳಾ ಪದವಿ ಪೂರ್ವ ಮತ್ತು ಪದವಿ ಕಾಲೇಜ್ ಇದರ 14ನೇ ವಾರ್ಷಿಕೋತ್ಸವವು ಶನಿವಾರ ಜರಗಿತು.
ಸಮಾರಂಭವನ್ನು ಉದ್ಘಾಟಿಸಿದ ಬಂಟ್ವಾಳ ಉಪ ವಿಭಾಗದ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಪ್ರತಾಪ್ ಥೋರಟ್ ಮಾತನಾಡಿ, ಇಂದಿನ ಯುವ ಜನತೆ, ವಿದ್ಯಾರ್ಥಿಗಳು ಮೊಬೈಲ್ ದಾಸರಾಗುತ್ತಿದ್ದು, ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುವುದರೊಂದಿಗೆ ಅನೇಕ ಸಮಸ್ಯೆಗಳಿಗೆ, ಕ್ರಿಮಿನಲ್ ಕೃತ್ಯಗಳಿಗೆ, ಸೈಬರ್ ಅಪರಾಧಗಳಿಗೆ ಬಲಿಯಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ವಿದ್ಯಾರ್ಥಿನಿಯರು ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಕುರಿತು ಅವರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರಾದ ಪ್ರೊ.ಪಿ ಎಲ್ ಧರ್ಮ ಮಾತನಾಡುತ್ತಾ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತರಾಗುವುದರೊಂದಿಗೆ ಸಮಾಜದಲ್ಲಿ ಮುಂದುವರಿದು ಶೋಷಣೆ ಅಸಮಾನತೆ, ದೌರ್ಜನ್ಯವನ್ನು ಮೆಟ್ಟಿ ನಿಲ್ಲಬೇಕೆಂದು ಕರೆ ನೀಡಿದರು.
ಮಂಜೇಶ್ವರ ಶಹರುದ್ದೀನ್ ಎಜುಕೇಶನ್ ಸೆಂಟರ್ ಅಧ್ಯಕ್ಷ ಶಾಹುಲ್ ಹಮೀದ್ ಎಂ. ಮಾತನಾಡಿ, ಇಂದಿನ ಸಮಾಜದಲ್ಲಿ ಪುರುಷರಂತೆ ಮಹಿಳೆಯರು ವಿದ್ಯಾವಂತರಾಗಬೇಕಿದ್ದು, ಈ ಮಹಿಳಾ ಶಿಕ್ಷಣ ಸಂಸ್ಥೆಯು ಈ ದಿಶೆಯಲ್ಲಿ ಮಹತ್ವದ ಕೊಡುಗೆ ನೀಡಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸ್ಥಾಪಕಧ್ಯಕ್ಷ ಡಾ. ಎಸ್.ಎಂ.ರಶೀದ್ ಹಾಜಿ ಮಾತನಾಡುತ್ತಾ, ಇಂದಿನ ಸಮಾಜದಲ್ಲಿ ಮಹಿಳೆಯರು ಮುಂದುವರಿಯಲು ಶಿಕ್ಷಣವು ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಈ ಮಹಿಳಾ ಶಿಕ್ಷಣ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಕಾಲೇಜು ಪ್ರಾಂಶುಪಾಲ್ ಬಿ.ಕೆ. ಅಬ್ದುಲ್ ಲತೀಫ್ ವಾರ್ಷಿಕ ವರದಿ ಮಂಡಿಸಿದರು.
ಉಪ ಪ್ರಾಂಶುಪಾಲೆ ಸುನೀತಾ ಪಿರೇರ, ಉಪನ್ಯಾಸಕಿಯರಾದ ಆಫ್ರೋಝ ನಫೀಸ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ವಿದ್ಯಾರ್ಥಿನಿ ಹವ್ವ ನೌಫ ಸ್ವಾಗತಿಸಿ ಶಹನಾಜ್ ವಂದಿಸಿದರು. ಸಾರ ಸಫ್ವತ್ ಕಾರ್ಯಕ್ರಮ ನಿರ್ವಹಿಸಿದರು.
ಮಧ್ಯಾಹ್ನ ಬಳಿಕ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
ಫಿದಾ ನಹಿಮಾ, ಮರಿಯಾಮ್ ಜಸೀರ ಮತ್ತು ಫಾತಿಮಾ ಶಿಫ್ನಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.