ಕಾರ್ಪೊರೇಟ್ ಕಂಪೆನಿಗಳು ಮಾಧ್ಯಮಗಳನ್ನು ಕಬಳಿಸಿವೆ: ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು, ಡಿ.31: ಮಾಧ್ಯಮಗಳು ಜೀವಂತವಾಗಿರದೇ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲ. ಆದರೆ ಮಾಧ್ಯಮಗಳು ಇಂದು ಕಾರ್ಪೊರೇಟ್ ಕಂಪೆನಿಗಳ ಕೈಯಲ್ಲಿದ್ದು, ದೊಡ್ಡ ಕಂಪೆನಿಗಳು ಮಾಧ್ಯಮಗಳನ್ನು ಕಬಳಿಸಿವೆ. ಹಾಗಾಗಿ ಪತ್ರಿಕಾ ಸ್ವತಂತ್ರ ಇಲ್ಲವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಶನಿವಾರ ಪ್ರೆಸ್‍ಕ್ಲಬ್ ಆಫ್ ಬೆಂಗಳೂರು ವತಿಯಿಂದ ಆಯೋಜಿಸಿದ್ದ ಪ್ರೆಸ್‍ಕ್ಲಬ್ ‘2022ನೆ ವರ್ಷದ ವ್ಯಕ್ತಿ ಪ್ರಶಸ್ತಿ’ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ‘ಪ್ರಸ್ತುತ ಜಗತ್ತಿನಲ್ಲಿ ಮಾಧ್ಯಮ ಎನ್ನುವುದು ಅತ್ಯಂತ ಪ್ರಮುಖ ಸಂವಹನ ಕ್ಷೇತ್ರವಾಗಿದ್ದು, ಇದು ಜೀವಂತವಾಗಿರದೇ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲ. ಮುಂದಿನ ಪೀಳಿಗೆಯು ಉತ್ತಮ ಜೀವನವನ್ನು ನಡೆಸಬೇಕಾದರೆ ಮಾಧ್ಯಮಗಳ ಪಾತ್ರ ಮುಖ್ಯವಾಗಿದೆ ಎಂದರು.
ಮಾಧ್ಯಮಗಳು ಸಮಾಜದಲ್ಲಿ ನಡೆಯುವ ತಪ್ಪುಗಳನ್ನು ಪತ್ತೆ ಹಚ್ಚಿ ಸಾರ್ವಜನಿಕರಿಗೆ ತಿಳಿಸುವ ಕೆಲಸ ಮಾಡಬೇಕು. ಸಮಾಜವನ್ನು ಎಚ್ಚರಿಸುವ ಕೆಲಸವನ್ನೂ ಮಾಧ್ಯಮಗಳು ಮಾಡಬೇಕು. ಸತ್ಯವನ್ನು ತಿಳಿಸುತ್ತಾರೆ ಎಂಬ ಕಾರಣಕ್ಕೆ ಮಾಧ್ಯಮದವರ ಕಡೆ ಜನ ನೋಡುತ್ತಾರೆ. ಅನ್ಯಾಯಕ್ಕೊಳಗಾದವರ ಪರವಾಗಿ ಮಾಧ್ಯಮಗಳು ನಿಲ್ಲಬೇಕು. ಅವಕಾಶ ಸಿಕ್ಕಲ್ಲಿ ಆ ಕೆಲಸ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ನಾನು ಕೇಂದ್ರ ಸಚಿವರಾಗುವುದಕ್ಕೂ ಮುನ್ನ ಎಸ್.ಎಂ.ಕೃಷ್ಣ, ವೀರಪ್ಪ ಮೋಯ್ಲಿಗೆ ಮಂತ್ರಿ ಸ್ಥಾನ ಪ್ರಕಟವಾಗಿತ್ತು. ಮಾಧ್ಯಮಗಳಲ್ಲಿ ‘ಖರ್ಗೆ ಅವರಿಗೆ ಅನ್ಯಾಯವಾಗಿದೆ’ ಎಂದು ಸುದ್ದಿ ಪ್ರಕಟವಾಗಿತ್ತು. ಇದೇ ಸಂದರ್ಭದಲ್ಲಿ ಬೋಧ್‍ಗಯಾಗೆ ತೆರಳಿದ್ದಾಗ, ಗುಲಾಂ ನಬಿ ಆಜಾದ್ ಕರೆ ಮಾಡಿ, ‘ಯಾಕೆ ಹೋಗಿದ್ದೀರಾ ಇಲ್ಲಿ ಎಲ್ಲರೂ ನಿಮಗಾಗಿ ಕಾಯುತ್ತಿದ್ದಾರೆ’ ಎಂದು ಹೇಳಿದರು. ರಾಜ್ಯದ ಇಬ್ಬರಿಗೆ ಮಂತ್ರಿ ಸ್ಥಾನ ಸಿಕ್ಕಿರುವ ಬಗ್ಗೆ ಅವರಿಗೆ ತಿಳಿಸಿದೆ. ಮಾಧ್ಯಮದವರು ‘ಖರ್ಗೆಗೆ ಅನ್ಯಾಯವಾಗಿದೆ’ ಎಂದು ಬರೆದಿದ್ದಾರೆ ಎಂದು ತಿಳಿಸಿ, ನನಗೆ ಸಚಿವ ಸ್ಥಾನ ನೀಡಿದ್ದರು ಎಂದು ಅವರು ನೆನಪಿಸಿಕೊಂಡರು.
ಒಬ್ಬ ಸಾಮಾನ್ಯ ಸಂಸದರನ್ನು ಸಚಿವರನ್ನಾಗಿ ಮಾಡುವ ಶಕ್ತಿ ಮಾಧ್ಯಮಗಳಿಗಿದೆ. ನಿಮ್ಮ ಬರವಣಿಗೆ, ನೀವು ಹೇಳಿದ ಮಾತಿನ ಮೇಲೆ ನಾವು ಸಂಸತ್‍ನಲ್ಲಿ ಚರ್ಚೆಗಳನ್ನು ಮಾಡುತ್ತೇವೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿವ ಮುರಗೇಶ್ ನಿರಾಣಿ ಮಾತನಾಡಿ, ಇತ್ತೀಚೆಗೆ ನಡೆದ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 10ಲಕ್ಷ ಕೋಟಿ ರೂ.ಬಂಡವಾಳ ಹೂಡಿಕೆಗೆ ಒಪ್ಪಂದವಾಗಿದ್ದು 6 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ರಾಜ್ಯದಲ್ಲಿ ನವೋದ್ಯಮಗಳಿಗೆ ಹೆಚ್ಚಿನ ಬೆಂಬಲ ನೀಡಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸುಪ್ರೀಂಕೋರ್ಟ್‍ನ ನಿವೃತ್ತ ನ್ಯಾ. ಗೋಪಾಲಗೌಡ ಅವರಿಗೆ ಪ್ರೆಸ್‍ಕ್ಲಬ್‍ನ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹಾಗೂ ಸಚಿವ ಮುರುಗೇಶ್ ನಿರಾಣಿ ಅವರಿಗೆ ವಿಶೇಷ ಪ್ರಶಸ್ತಿಯನ್ನು ನೀಡಲಾಯಿತು. ಮಾಧ್ಯಮದ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ 32 ಸಾಧಕರಿಗೆ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರೆಸ್‍ಕ್ಲಬ್‍ನ ಅಧ್ಯಕ್ಷ ಶ್ರೀಧರ್, ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಮತ್ತಿತರರು ಉಪಸ್ಥಿತರಿದ್ದರು.






.jpg)
.jpg)
.jpg)
.jpg)

