ಜಿಲ್ಲಾವಾರು ಸಿಎಚ್‌ಒ ನೇಮಕಾತಿಯಲ್ಲಿ ಅಕ್ರಮ: 100ಕ್ಕೂ ಹೆಚ್ಚು ಅರ್ಹ ಅಭ್ಯರ್ಥಿಗಳಿಗೆ ಅವಕಾಶ ವಂಚನೆಯ ಆರೋಪ

ಬೆಂಗಳೂರು: ಜಿಲ್ಲೆಗಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಗುತ್ತಿಗೆ ಆಧಾರದಲ್ಲಿ ಸಮುದಾಯ ಆರೋಗ್ಯ ಅಧಿಕಾರಿ(ಸಿಎಚ್‌ಒ)ಗಳ ನೇಮಕಾತಿಯಲ್ಲಿ ಇಲಾಖಾ ಅಧಿಕಾರಿಗಳು ಅರ್ಹ ಅಭ್ಯರ್ಥಿಗಳಿಗೆ ಅವಕಾಶ ನೀಡದಿರುವ ಬಗ್ಗೆ ಆರೋಪ ವ್ಯಕ್ತವಾಗಿದೆ. ಹಲವು ಜಿಲ್ಲೆಗಳಲ್ಲಿ ಸಿಎಚ್‌ಒ ನೇಮಕಾತಿ ಪ್ರಕ್ರಿಯೆಯ ಮೊದಲ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಹೆಸರನ್ನು ಪ್ರಕಟಿಸಿ ೨ನೇ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಹೆಸರು ಪ್ರಕಟಿಸದೆ ಇಲಾಖೆ ಕಳ್ಳಾಟವಾಡುತ್ತಿದೆ ಎಂದು ವಂಚಿತ ಅಭ್ಯರ್ಥಿಗಳು ಆರೋಪಿಸಿದ್ದಾರೆ. ಸಂಯೋಜಿತ ಅಭ್ಯರ್ಥಿಗಳನ್ನು ಸರಿಯಾಗಿ ಪರಿಶೀಲಿಸದೇ ಸಂಯೋಜಿತವಲ್ಲದ ಅಭ್ಯರ್ಥಿಗಳನ್ನು ಆಯ್ಕೆ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಪರೀಕ್ಷೆಯಲ್ಲಿ ಉತ್ತೀರ್ಣರಾದ ಅರ್ಹ ಸಂತ್ರಸ್ತ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘‘ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳ (ಸಿಎಚ್‌ಒ) ೧,೦೪೮ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದ್ದು ಈ ಹಿನ್ನೆಲೆಯಲ್ಲಿ ಅರ್ಜಿ ಹಾಕಿ ಪರೀಕ್ಷೆ ಬರೆದು ಜಿಲ್ಲಾಮಟ್ಟದಲ್ಲಿ ಎರಡನೇ ರ್ಯಾಂಕ್ ಪಡೆದು ಮೊದಲ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ನನ್ನ ಹೆಸರು ಪ್ರಕಟಿಸಲಾಗಿತ್ತು. ಪುನಃ ಬಿಡುಗಡೆಯಾದ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ನನ್ನನ್ನು ಕೈಬಿಡಲಾಗಿದೆ. ಆರೋಗ್ಯ ಇಲಾಖೆ ಅರ್ಹತೆ ಹೊಂದಿದ್ದ ನನ್ನನ್ನು ಪರಿಗಣಿಸದೆ ದ್ರೋಹ ಎಸಗಿದೆ’’ ಎಂದು ವಿಜಯಪುರ ಜಿಲ್ಲೆಯ ಅವಕಾಶ ವಂಚಿತೆ ಅಭ್ಯರ್ಥಿ ಪುಷ್ಪಾ ಎಸ್. ನೋವು ತೋಡಿಕೊಂಡಿದ್ದಾರೆ.
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಅರ್ಹ ಅಭ್ಯರ್ಥಿಗಳು ಲಭ್ಯವಿರುವುದಿಲ್ಲ ಎಂದು ಇಲಾಖಾ ಅಧಿಕಾರಿಗಳು ಆಯ್ಕೆ ಪ್ರಕ್ರಿಯೆಯನ್ನು ಮುಂದೂಡುತ್ತಿದ್ದಾರೆ.
ಇನ್ನೂ ಹಲವು ಹುದ್ದೆಗಳಿಗೆ ಅನರ್ಹರನ್ನೇ ಆಯ್ಕೆ ಮಾಡುತ್ತಿದ್ದಾರೆ. ಈ ರೀತಿ ಹುದ್ದೆಗಳು ಖಾಲಿ ಇರುವ ಕಡೆಗಳಲ್ಲಿ ಸಾರ್ವಜನಿಕರು ಆರೋಗ್ಯ ಸೇವೆಗಳ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಅವಕಾಶ ವಂಚಿತ ಅಭ್ಯರ್ಥಿಗಳ ಪರ ಹೋರಾಟಗಾರ ಎಲ್ದೋ ಹೊನ್ನೆಕುಡಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಗ್ರ ಹೋರಾಟ ಒಂದೇ ದಾರಿ: ಮೊದಲ ಆಯ್ಕೆ ಪಟ್ಟಿಯಲ್ಲಿ ನನ್ನ ಹೆಸರನ್ನು ಕಂಡು ಇದ್ದ ಒಂದು ಕೆಲಸವನ್ನು ಬಿಟ್ಟಿದ್ದೇನೆ. ಆದರೆ, ಎರಡನೇ ಆಯ್ಕೆ ಪಟ್ಟಿಯಲ್ಲಿ ಹೆಸರನ್ನು ಕೈಬಿಟ್ಟಿದ್ದಾರೆ. ನನ್ನಂತೆ ಹಲವರಿಗೆ ಈ ರೀತಿ ವಂಚನೆ ಮಾಡಲಾಗಿದೆ. ಈ ಬಗ್ಗೆ ಆರೋಗ್ಯ ಸಚಿವರು, ಇಲಾಖಾ ಅಧಿಕಾರಿಗಳು ನಮಗಾದ ಅನ್ಯಾಯಕ್ಕೆ ಸ್ಪಂದಿಸದಿದ್ದರೆ ಆರೋಗ್ಯ ಸೌಧದ ಎದುರು ಉಗ್ರ ಹೋರಾಟ ನಡೆಸಲಾಗುವುದು ಎಂದು ವಂಚಿತ ಅಭ್ಯರ್ಥಿ ಒಬ್ಬರು ಎಚ್ಚರಿಕೆ ನೀಡಿದ್ದಾರೆ.
ಅರ್ಹತೆ ಇದ್ದರೂ ಅನ್ಯಾಯ
ಅಧಿಕಾರಿಗಳ ಬೇಜವ್ದಾರಿಯಿಂದ ಅರ್ಹ ಅಭ್ಯರ್ಥಿಗಳಿಗೆ ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. ಇದರಿಂದ ರಾಜ್ಯದಲ್ಲಿ ನೂರಕ್ಕೂ ಮಿಕ್ಕ ಅಭ್ಯರ್ಥಿಗಳು ಅವಕಾಶ ವಂಚನೆಗೆ ಒಳಗಾಗಿದ್ದಾರೆ. ಇಲಾಖೆ ಅಧಿಕಾರಿಗಳು ಅನರ್ಹ ಅಭ್ಯರ್ಥಿಗಳಿಗೆ ಮಣೆಹಾಕಿಕೊಟ್ಟು ಸಂರಕ್ಷಿಸುತ್ತಿದ್ದಾ ಇದು ಇನ್ನೊಂದು ಪಿಎಸ್ಸೈ ಹಗರಣದಂತೆ ಕಾಣಿಸುತ್ತಿದೆ. ಮೊದಲ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಎರಡನೇ ಆಯ್ಕೆ ಪಟ್ಟಿಯಲ್ಲಿ ಅರ್ಹತೆಯಿದ್ದರೂ ಕೈಬಿಟ್ಟಿರುವುದರಿಂದ ನಮಗೆ ಅನ್ಯಾಯವಾಗಿದೆ ಎಂದು ನೊಂದ ಅಭ್ಯರ್ಥಿಗಳು ದೂರಿದ್ದಾರೆ.
ಆಸೆ ತೋರಿಸಿ ಕೈ ಬಿಟ್ಟಿದ್ದಾರೆ
ನಾನು 1 ವರ್ಷದವನಿರುವಾಗ ತಂದೆಯನ್ನು ಕಳೆದುಕೊಂಡಿದ್ದೇನೆ. ಮನೆಯ ಜವಾಬ್ದಾರಿ ನನ್ನ ಮೇಲೆ ಇರುವುದರಿಂದ ಸಿಎಚ್‌ಒ ಪರೀಕ್ಷೆಯಲ್ಲಿ ಉತ್ತಮ ಅಂಕವನ್ನು ಪಡೆದು ತೇರ್ಗಡೆ ಹೊಂದಿರುತ್ತೇನೆ. ಆದರೆ ಮೊದಲ ಆಯ್ಕೆ ಪಟ್ಟಿಯಲ್ಲಿ ನನ್ನ ಹೆಸರು ಇತ್ತು, ಬಳಿಕ ಬಂದ ಎರಡನೇ ಆಯ್ಕೆ ಪಟ್ಟಿಯಲ್ಲಿ ನನ್ನ ಹೆಸರನ್ನು ಕೈ ಬಿಟ್ಟಿದ್ದಾರೆ. ಈ ಬಗ್ಗೆ ಡಿಎಚ್‌ಒ ಅವರ ಗಮನಕ್ಕೂ ತಂದಿದ್ದೇನೆ ಸರಿಯಾದ ಉತ್ತರ ಸಿಕ್ಕಿಲ್ಲ. ಒಟ್ಟಿನಲ್ಲಿ ಈ ಆಯ್ಕೆಯಲ್ಲಿ ಕಡಿಮೆ ಅಂಕ ಗಳಿಸಿದವರಿಗೆ, ಸರಿಯಾಗಿ ದಾಖಲೆಗಳನ್ನು ನೀಡದವರಿಗೆ ಹಣ ಪಡೆದು ಆಯ್ಕೆ ಪಟ್ಟಿಯಲ್ಲಿ ಸೇರಿಸಿದ್ದಾರೆ. ನನ್ನ ಕನಸಾಗಿದ್ದ ಸರಕಾರಿ ಕೆಲಸದ ಆಸೆಗೆ ಆರೋಗ್ಯ ಇಲಾಖೆ ಕೊಳ್ಳಿ ಇಟ್ಟಂತಾಗಿದೆ.
ದಾಕ್ಷಾಯಣಿ ಡಿ. ಮಾಗುಡಿ, ಗದಗ ಜಿಲ್ಲೆ (ಅವಕಾಶ ವಂಚಿತೆ ಅಭ್ಯರ್ಥಿ)
ಸರಿಯಾದ ಮಾಹಿತಿಯಿಲ್ಲದೆ ಇಲಾಖೆ ಗೊಂದಲ
ರಾಜ್ಯದ ಒಂದೊಂದು ಜಿಲ್ಲೆಯಲ್ಲಿ ಒಂದೊಂದು ಇಲಾಖೆಯ ಗೈಡ್ಲೆನ್ಸ್ ವಿಚಿತ್ರವಾಗಿದೆ. ಬೆಂಗಳೂರಿಗೆ ಒಮ್ಮೆ ಮಂಗಳೂರಿಗೆ ಒಮ್ಮೆ ಅಲೆದಾಡುವ ಪರಿಸ್ಥಿತಿಯಲ್ಲಿದ್ದೇವೆ. ಒಮ್ಮೆ ತರಬೇತಿಯನ್ನು ಪೂರ್ಣಗೊಳಿಸಿದ್ದರೂ ಮತ್ತೊಮ್ಮೆ ತರಬೇತಿ ಪಡೆಯಲು ಒತ್ತಾಯಿಸುತ್ತಿದ್ದಾರೆ. ಒಟ್ಟಿನಲ್ಲಿ ನಮಗೆ ಇಲಾಖೆಯಿಂದ ಯಾವುದೇ ಸ್ಪಷ್ಟ ಮಾಹಿತಿಗಳಿಲ್ಲ.
ಜಯಂತಿ, ಮಂಗಳೂರು
ಅವಕಾಶ ವಂಚಿತೆ ಅಭ್ಯರ್ಥಿ







