‘ಸಂಜೀವಿನಿ’ ಒಕ್ಕೂಟದ ಸಿಬ್ಬಂದಿಯನ್ನು ದುರ್ಬಲ ಸ್ಥಿತಿಗೆ ತಂದಿಟ್ಟ ಸರಕಾರ!
ಆರು ತಿಂಗಳಿಂದ ಗೌರವ ವೇತನವಿಲ್ಲ

ಬೆಂಗಳೂರು, ಫೆ.15: ಮಹಿಳಾ ಸಬಲೀಕರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಯೋಜನೆಯಲ್ಲಿ ಒಂದಾಗಿರುವ ‘ಸಂಜೀವಿನಿ’ಯ ಒಕ್ಕೂಟದ ಸಿಬ್ಬಂದಿ ಹಾಗೂ ಫಲಾನುಭವಿಗಳಿಗೆ ಸರಕಾರ ಅತೀ ಕಡಿಮೆ ವೇತನ ನೀಡುವುದಲ್ಲದೇ ಇದುವರೆಗೂ ವೇತನದಲ್ಲಿ ಹೆಚ್ಚಳ ಮಾಡದ ಕಾರಣ 24 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯ ಬದುಕು ಶೋಚನೀಯ ಸ್ಥಿತಿಯನ್ನು ತಲುಪಿದೆ.
11 ವರ್ಷಗಳಿಂದ ಗ್ರಾಪಂ, ಪಪಂ ಹಾಗೂ ಮಹಾನಗರ ಪಾಲಿಕೆ ವಾರ್ಡ್ ಕಚೇರಿಗಳಲ್ಲಿ ಪುಸ್ತಕ ಬರಹಗಾರರು, ಸಂಪನ್ಮೂಲ ವ್ಯಕ್ತಿ ಸಹಾಯಕರು, ವಿವಿಧ ಸಖಿ ಕಾರ್ಯಕರ್ತೆಯರು, ಕಸ ನಿರ್ವಾಹಕ ಸಿಬ್ಬಂದಿ, ಸ್ವ-ಸಹಾಯ ಸಂಘಗಳ ಪ್ರತಿನಿಧಿಗಳಾಗಿ ಅಲ್ಲದೇ ಮಹಿಳಾ ಒಕ್ಕೂಟದ ಮುಖ್ಯ ಕಾರ್ಯಕರ್ತೆಯರಾಗಿ ಸೇವೆ ನೀಡುತ್ತಿದ್ದಾರೆ. ಕಡು ಬಡತನದ ಮಹಿಳೆಯರು, ವಿಧವೆಯರು, ದೇವದಾಸಿಯರು, ವಿಕಲಚೇತನರು ತಿಂಗಳಿಗೆ ಕೇವಲ 2,500 ರೂ. ವೇತನಕ್ಕೆ ದುಡಿಯುತ್ತಿದ್ದು ನಮ್ಮ ಬಗ್ಗೆ ಯಾರೊಬ್ಬರೂ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಸಂಜೀವಿನಿ ಒಕ್ಕೂಟದ ಸಿಬ್ಬಂದಿ ಆಕ್ರೋಶ ಹೊರ ಹಾಕಿದ್ದಾರೆ.
ಅಗತ್ಯ ದಿನಸಿ ವಸ್ತುಗಳ ಬೆಲೆ ಏರಿಕೆ, ಮಕ್ಕಳ ಶಾಲಾ ಶುಲ್ಕ, ಆರೋಗ್ಯ ಸಮಸ್ಯೆ ಎಂಬಿತ್ಯಾದಿ ಹತ್ತೂ ಹಲವು ಸಮಸ್ಯೆಗಳ ಖರ್ಚು ನಿರ್ವಹಿಸಬೇಕೆಂದರೆ ಸರಕಾರ ನೀಡುವ ವೇತನ ಸಾಕಾಗುವುದಿಲ್ಲ. ಇನ್ನು ವಿವಿಧ ಬ್ಯಾಂಕ್, ಸಂಘ ಸಂಸ್ಥೆಗಳಿಂದ ಸಾಲ ಪಡೆದು ತೀರಿಸಲಾಗದೇ ಹಲವು ಮಹಿಳೆಯರು ಆತ್ಯಹತ್ಯೆಗೂ ಯತ್ನಿಸಿದ್ದಾರೆ. ಸರಕಾರದ ಕೆಲವು ಇಲಾಖಾ ಯೋಜನೆಗಳ ತಾಂತ್ರಿಕ ಕೆಲಸಗಳಿಗೆ ಯಾವುದೇ ರೀತಿಯ ತರಬೇತಿಯನ್ನು ನೀಡುವುದಿಲ್ಲ.ಇಲಾಖಾ ಸಭೆಗಳಿಗೆ ಹೋಗುವ ಪ್ರಯಾಣ ಭತ್ತೆ, ಸರ್ವೇ ಮಾಡಿದ ದಾಖಲೆಯನ್ನು ಆನ್ಲೈನ್ನಲ್ಲಿ ನಮೂದಿಸಲು ಮೊಬೈಲ್ಗೆ ಇಂಟರ್ನೆಟ್ ಶುಲ್ಕವನ್ನೂ ನಾವೇ ಭರಿಸಬೇಕು. ಇನ್ನೂ ಕಳೆದ ಆರು ತಿಂಗಳಿನಿಂದ ಖಾತೆಗೆ ವೇತನವೇ ಜಮೆಯಾಗಿಲ್ಲ. ಎಂದು ವಿಜಯನಗರ ಜಿಲ್ಲೆಯ ಸಂಜೀವಿನಿ ಒಕ್ಕೂಟದ ಸಿಬ್ಬಂದಿ ಶೃತಿ ಬೇಸರ ತೋಡಿಕೊಂಡಿದ್ದಾರೆ.
ಈ ಸಲದ ಬಜೆಟ್ ಅಧಿವೇಶನದಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟಕ್ಕೆ ಸಜ್ಜ್ಜಾಗುತ್ತೇವೆ ಎಂದು ಬಳ್ಳಾರಿಯ ಸುಜಾತಾ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕನಿಷ್ಟ ವೇತನ ನೀಡಿ: ನಾನಾ ವಿಭಾಗಗಳಲ್ಲಿ ಸೇವೆ ನೀಡುವ ಸಂಜೀವಿನಿಯ ಒಕ್ಕೂಟದ ಸಿಬ್ಬಂದಿಗೆ ಪುಸ್ತಕ ಬರಹಗಾರರಿಗೆ 21 ಸಾವಿರ ರೂ., ಸಹಾಯಕಿ ಪುಸ್ತಕ ಬರಹಗಾರರಿಗೆ 16 ಸಾವಿರ ರೂ., ಕೃಷಿ ಸಖಿ ಹಾಗೂ ಪಶು ಸಖಿಯರಿಗೆ 13 ಸಾವಿರ ರೂ. ವೇತನ ನೀಡಬೇಕು ಎಂದು ಕರ್ನಾಟಕ ರಾಜ್ಯ ಸಂಜೀವಿನಿ ನೌಕರರ ಹಾಗೂ ಫಲಾನುಭವಿಗಳ ಸಂಘದ ಮುಖಂಡೆ ಬಿ. ಮಾಳಮ್ಮ ಸರಕಾರಕ್ಕೆ
ಒತ್ತಾಯಿಸಿದ್ದಾರೆ.
6 ಗಂಟೆ ಕೆಲಸಕ್ಕೆ 83 ರೂ. ದಿನಗೂಲಿ!
ಸರಕಾರದ ಮಹತ್ತರ ಯೋಜನೆಯಾಗಿರುವ ಸಂಜೀವಿನಿ ಒಕ್ಕೂಟದ ಸಿಬ್ಬಂದಿ ಪೈಕಿ ತೀರಾ ಬಡತನದಲ್ಲಿರುವ ಮಹಿಳೆಯರಿದ್ದಾರೆ. ಎಸೆಸೆಲ್ಸ್ಸಿ, ಪಿಯುಸಿ, ಪದವಿ ಪಡೆದವರೂ ಕೂಡ ಬೆಳಗ್ಗೆಯಿಂದ ಸಂಜೆ ತನಕ ದುಡಿದರೂ ಕೇವಲ 83 ರೂ. ದಿನಗೂಲಿ ಪಡೆಯುತ್ತಿದ್ದಾರೆ. ಇಲಾಖೆ ಸಂಬಂಧಿಸಿದ ಖರ್ಚು ಬಿಟ್ಟು ಕೇವಲ 1,200 ರೂ. ಉಳಿಕೆಯಾಗುತ್ತದೆ ಎಂದು ಸಂಜೀವಿನಿ ಒಕ್ಕೂಟದ ಸಿಬ್ಬಂದಿ ಶೃತಿ ತಿಳಿಸಿದ್ದಾರೆ.
ಸಂಜೀವಿನಿ ನೌಕರರಿಗೆ ಡಿಸೆಂಬರ್ ತಿಂಗಳಲ್ಲಿ 123 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಜಿಲ್ಲಾವಾರು ವೇತನ ಸಿಗದ ನೌಕರರ ಮಾಹಿತಿಯನ್ನು ಆಯಾ ಜಿಪಂ ಸಿಇಒಗಳಿಂದ ಪಡೆದುಕೊಳ್ಳಲಾಗಿದೆ. ಶೀಘ್ರದಲ್ಲೇ ಎಲ್ಲ ನೌಕರರ ಖಾತೆಗೆ ನೇರವಾಗಿ ವೇತನ ಜಮೆಯಾಗಲಿದೆ.
- ಡಾ. ರಾಗಪ್ರಿಯಾ ಆರ್.,
ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಸಂಸ್ಥೆ ಜೀವನೋಪಾಯ ಅಭಿಯಾನ ನಿರ್ದೇಶಕಿ
ಸಂಜೀವಿನಿ ಒಕ್ಕೂಟದ ಸಿಬ್ಬಂದಿಗೆ ಆಯಾ ಟಾಸ್ಕ್ಗಳಿಗೆ ತಕ್ಕಂತೆ ಗೌರವ ವೇತನ ನೀಡುತ್ತಿದ್ದೇವೆ. ತಾಪಂ, ಜಿಪಂಗಳ ಇತರ ಕೆಲಸ ನೀಡಿದರೆ ಅದಕ್ಕೆ ಬೇರೆಯೇ ಗೌರವ ವೇತನ ನೀಡಬೇಕು ಎಂದು ನಿರ್ದೇಶನ ಮಾಡಲಾಗುವುದು.
- ಎಂ.ಕೆ.ಅಲಿ,
ಸಂಜೀವಿನಿ ರಾಜ್ಯ ಕಾರ್ಯಕ್ರಮದ ವ್ಯವಸ್ಥಾಪಕ (ಕೆ.ಎಸ್.ಆರ್.ಎಲ್.ಪಿ.ಎಸ್)







