ಸುಬ್ರಹ್ಮಣ್ಯ | ನಿಂತಿದ್ದ ಗೂಡ್ಸ್ ರೈಲಿನಲ್ಲಿ ಗ್ಯಾಸ್ ಸೋರಿಕೆ: ಲೋಕೊಪೈಲೆಟ್ ಸಮಯಪ್ರಜ್ಞೆಯಿಂದ ತಪ್ಪಿದ ದುರಂತ

ಸುಬ್ರಹ್ಮಣ್ಯ, ಜ.1: ನಿಲ್ದಾಣದಲ್ಲಿ ನಿಂತಿದ್ದ ಗೂಡ್ಸ್ ರೈಲಿನಲ್ಲಿ ಅನಿಲ ಸೋರಿಕೆ ಕಾಣಿಸಿಕೊಂಡಿದ್ದು, ಲೋಕೊಪೈಲಟ್ ಸಮಯಪ್ರಜ್ಞೆಯಿಂದಾಗಿ ಭಾರಿ ಅನಾಹುತ ತಪ್ಪಿದ ಘಟನೆ ಕುಕ್ಕೆ ಸುಬ್ರಮಣ್ಯ ರೋಡ್ (ನೆಟ್ಟಣ) ರೈಲು ನಿಲ್ದಾಣದಲ್ಲಿ ನಡೆದಿದೆ.
ಮಂಗಳೂರಿನಿಂದ ಮಹರಾಷ್ಟ್ರಕ್ಕೆ ಅನಿಲ ತುಂಬಿಕೊಂಡು ಹೋಗುತ್ತಿದ್ದ ಗೂಡ್ಸ್ ರೈಲನ್ನು ಸುಬ್ರಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ಶನಿವಾರ ಮುಂಜಾವ 2:30ರ ಸುಮಾರಿಗೆ ಕ್ರಾಸಿಂಗ್‌ಗಾಗಿ ನಿಲ್ಲಿಸಲಾಗಿತ್ತು. ಈ ವೇಳೆ ಲೋಕೊ ಪೈಲೆಟ್ ಕೆಳಗಿಳಿದಾಗ ಸುಮಾರು 43 ಗೂಡ್ಸ್ ಪ್ಯಾನೆಲ್‌ಗಳ ಪೈಕಿ ನಾಲ್ಕನೇ ಟ್ಯಾಂಕ್‌ನಿಂದ ಅನಿಲ ಸೋರಿಕೆಯಾಗುತ್ತಿರುವುದನ್ನು ಗಮನಿಸಿದ್ದಾರೆ. ತಕ್ಷಣ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಅದರಂತೆ ಕೂಡಲೇ ಕಾರ್ಯಪ್ರವೃತ್ತರಾದ ರೈಲು ಸಿಬ್ಬಂದಿ ಪುತ್ತೂರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪುತ್ತೂರು ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿದರು. ಸುಳ್ಯ, ಬೆಳ್ತಂಗಡಿ, ಹಾಗೂ ಮಂಗಳೂರಿನಿಂದಲೂ ಹೆಚ್ಚುವರಿ ಅಗ್ನಿ ಶಮನ ವಾಹನಗಳನ್ನು ತರಿಸಲಾಯಿತು.
ಮಂಗಳೂರು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಭರತ್ ಅವರ ನೇತೃತ್ವದಲ್ಲಿ ಪುತ್ತೂರು ಅಗ್ನಿಶಾಮಕ ದಳದ ಠಾಣಾಧಿಕಾರಿ ಪಿ.ಆನಂದ್, ಮುಖ್ಯ ಅಗ್ನಿಶಾಮಕ ರುಕ್ಮಯ್ಯ ಗೌಡ, ಚಾಲಕ ಯಾದವ್, ಸಿಬ್ಬಂದಿಯಾದ ಮಂಜುನಾಥ್, ಗೃಹ ರಕ್ಷಕ ದಳದ ಮಂಜುನಾಥ್ ಸಹಿತ ಸುಳ್ಯ, ಬೆಳ್ತಂಗಡಿಯ ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿದರು.