ಎಚ್.ಐ.ಎಫ್. ಇಂಡಿಯಾದಿಂದ ಪ್ರಾಜೆಕ್ಟ್ ಆಶಿಯಾನದಡಿ 27ನೇ ಮನೆ ಹಸ್ತಾಂತರ

ಮಂಗಳೂರು, ಜ.1: ಆರ್ಥಿಕವಾಗಿ ಹಿಂದುಳಿದವರಿಗೆ, ನಿರ್ಗತಿಕರಿಗೆ 'ಎಚ್.ಐ.ಎಫ್. ಇಂಡಿಯಾ ಪ್ರಾಜೆಕ್ಟ್ ಆಶಿಯಾನ'ದ ಅಡಿಯಲ್ಲಿ ಮನೆ ನಿರ್ಮಿಸಿ ಕೊಡುತ್ತಿದ್ದು, ಅದರಂತೆ ಕಡಬ ತಾಲೂಕಿನ ತುಂಬೆ ಮನೆ ರೆಂಜಲಾಡಿ ಗ್ರಾಮದ ಬಳಿ ನಿರ್ಮಿತ 27ನೇ ಮನೆಯನ್ನು ವಿಧವೆ ಫಲಾನುಭವಿಗೆ ಹಸ್ತಾಂತರಿಸಲಾಯಿತು.
ಶನಿವಾರ ನಡೆದ ಕಾರ್ಯಕ್ರಮದಲ್ಲಿ ಇಲ್ಲಿನ ಬದ್ರಿಯ ಜುಮಾ ಮಸೀದಿಯ ಖತೀಬ್ ರಫೀಕ್ ದಾರಿಮಿ ಹೊಸಮನೆಯ ಕೈಕೀಲಿ ಮತ್ತು ಒಂದು ತಿಂಗಳ ದಿನಸಿ ಕಿಟ್ ಅನ್ನು ಫಲಾನುಭವಿಗೆ ಹಸ್ತಾಂತರಿಸಿದರು.
ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಯೂಸುಫ್ ಪೇರಡ್ಕ ಪೊಸೋಲಿಗೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಇಮ್ಯಾನುಯೆಲ್ ಪಿ.ಜೆ. ಮಾತನಾಡಿ, ಮೂಲಭೂತ ಸೌಲಭ್ಯಗಳಿಂದ ವಂಚಿತ ಕುಟುಂಬಗಳಿಗೆ ಸುಸಜ್ಜಿತ ಮನೆ ನಿರ್ಮಿಸಿಕೊಡುವ ಎಚ್.ಐ.ಎಫ್ ಕಾರ್ಯ ಶ್ಲಾಘನೀಯ. ಸಂಸ್ಥೆಯಿಂದ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳು ನಡೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಚ್.ಐ.ಎಫ್. ಇಂಡಿಯಾ ಪ್ರಾಜೆಕ್ಟ್ ಆಶಿಯಾನದ ಸಂಚಾಲಕ ಔಸಾಫ್ ಹುಸೈನ್ ಮಾತನಾಡಿ, 28ನೇ ಮನೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಅತಿ ಶೀಘ್ರದಲ್ಲಿ ಫಲಾನುಭವಿಗೆ ಮನೆಯನ್ನು ಹಸ್ತಾಂತರಿಸಲಾಗುವುದು ಎಂದು ತಿಳಿಸಿದರು.
ಸೈಫ್ ಹನೀಫ್ ಕಿರಾಅತ್ ಪಠಿಸಿದರು. ಆದಿಲ್ ಫರ್ವೇಝ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.