ಮಂಗಳೂರು | ಸಾಮಾಜಿಕ ಕಳಕಳಿ ಅಭಿವೃದ್ಧಿಗೆ ಪೂರಕ: ಯು.ಟಿ.ಖಾದರ್

ಕೊಣಾಜೆ: ಯುವಜನತೆ ಸಾಮಾಜಿಕ ಕಳಕಳಿಯೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ಸಮಾಜದ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣವಾಗುವ ಸಾಧ್ಯತೆಯಿರುವುದರಿಂದ ಇಂತಹ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುವುದು ಅಗತ್ಯ ಎಂದು ಶಾಸಕ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.
ಬ್ರಿಕ್-ಬಿಡಿಎಮ್ ಆಸರೆ ಬ್ರಿಕ್ ಸ್ಟೋನ್ ಕಂಪೆನಿ ಸೌದಿ ಅರೇಬಿಯಾ ಪ್ರಾಯೋಜಕತ್ವದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಮೊಂಟೆಪದವಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಹಯೋಗದಲ್ಲಿ 'ಬ್ರಿಕ್-ಬಿಡಿಎಮ್ ಆಸರೆ' ವತಿಯಿಂದ ಮೊಂಟೆಪದವು ಪಬ್ಲಿಕ್ ಸ್ಕೂಲ್ ನಲ್ಲಿ ಶನಿವಾರ ನಡೆದ ಸಾಧಕರಿಗೆ ಸನ್ಮಾನ, ವೈದ್ಯಕೀಯ ಮತ್ತು ರಕ್ತದಾನ ಶಿಬಿರ, ದಿವ್ಯಾಂಗರಿಗೆ ವಿವಿಧ ಸವಲತ್ತು ವಿರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಯುವಜನರಲ್ಲಿ ಮಾನವೀಯತೆ ಮುಖ್ಯ. ಪ್ರಸ್ತುತ ದಿನಗಳಲ್ಲಿ ಸಾಕಷ್ಟು ಕಡೆಗಳಲ್ಲಿ ರಕ್ತದಾನ ಶಿಬಿರಗಳು ನಡೆಯುತ್ತಿದ್ದರೂ, ರಕ್ತದ ಕೊರತೆ ನಿವಾರಿಸಲು ಸಾಧ್ಯವಾಗಿಲ್ಲ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಹೊಲಿಗೆ ಯಂತ್ರ, ದಿವ್ಯಾಂಗರಿಗೆ ಗಾಲಿಕುರ್ಚಿ, ವಿವಿಧ ಪರಿಕರಗಳನ್ನು ವಿತರಿಸಲಾಯಿತು.
ಬ್ಲಡ್ ಡೋನರ್ಸ್ ಸ್ಥಾಪಕಾಧ್ಯಕ್ಷ ಸಿದ್ದೀಕ್ ಮಂಜೇಶ್ವರ ಅಧ್ಯಕ್ಷತೆ ವಹಿಸಿದ್ದರು.
ಹೃದ್ರೋಗ ತಜ್ಞ ಡಾ.ಮುಕುಂದ್ ಕುಂಬ್ಲೆ, ಉದ್ಯಮಿಗಳಾದ ಅಬೂಬಕ್ಕರ್, ಅರ್ಷದ್ ಇಸ್ಮಾಯಿಲ್, ಯೇನೆಪೊಯ ವಿವಿ ಎನ್ ಎಸ್ಎಸ್ ಸಂಯೋಜಕಿ ಡಾ. ಅಶ್ವಿನಿ ಶೆಟ್ಟಿ, ಚಿಂತಕ ಮುಬೀನ್ ಅಬ್ದುಲ್ ಗಫಾರ್, ಬ್ಲಡ್ ಡೋನರ್ಸ್ ಪದಾಧಿಕಾರಿ ನವಾಝ್ ಕಲ್ಲರಕೋಡಿ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ದುಲ್ ಜಲೀಲ್ ಮೋಂಟುಗೋಳಿ, ಪ್ರಾಚಾರ್ಯ ಸುರೇಶ್ ಎಂ.ಕೆ., ಉಪ ಪ್ರಾಂಶುಪಾಲ ಸಂತೋಷ್ ಕುಮಾರ್ ಟಿ.ಎಂ., ಮುಖ್ಯಶಿಕ್ಷಕಿ ಪ್ರಮೀಳಾ ಬಿ.ಸಿ., ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹನೀಫ್ ಚಂದಹಿತ್ಲು, ನರಿಂಗಾನ ಗ್ರಾಮ ಪಂಚಾಯಿತಿ ಸದಸ್ಯರಾದ ರಹ್ಮಾನ್ ಚಂದಹಿತ್ಲು, ಉದ್ಯಮಿ ಹನೀಫ್ ಶೈನ್ ಉಪಸ್ಥಿತರಿದ್ದರು.