ಉಡುಪಿ: ಭೀಮಾ ಕೋರೆಗಾಂವ್ ದಲಿತರ ಸ್ವಾಭಿಮಾನ, ಹೋರಾಟದ ಸಂಕೇತ 205ನೇ ವಿಜಯೋತ್ಸವ ದಿನಾಚರಣೆಯಲ್ಲಿ ಪ್ರೊ.ಫಣಿರಾಜ್

ಉಡುಪಿ: ಭೀಮಾ ಕೋರೆಗಾಂವ್ ದಿನವು ದಲಿತರ ಸ್ವಾಭಿಮಾನ ಮತ್ತು ಹೋರಾಟದ ಸಂಕೇತವಾಗಿದೆ. ಇದು ಎಲ್ಲಾ ಶೋಷಿತರು, ನೊಂದ ರೈತರು, ಕಾರ್ಮಿಕರು ನೆನಸಿಕೊಳ್ಳಬೇಕಾದ ದಿನ. ಇಂದೂ ಸಹ ಎಲ್ಲಾ ದಮನಿತರು ಒಂದಾಗಿ ಬ್ರಾಹ್ಮಣಶಾಹಿಗಳ ವಿರುದ್ಧ ಹೋರಾಟ ನಡೆಸಬೇಕಿದೆ ಎಂದು ಜನಪರ ಹೋರಾಟಗಾರ ಹಾಗೂ ಪ್ರಗತಿಪರ ಚಿಂತಕ ಪ್ರೊ. ಕೆ. ಫಣಿರಾಜ್ ಹೇಳಿದ್ದಾರೆ.
ಜಿಲ್ಲೆಯ ದಲಿತ ಸಂಘಟನೆಗಳ ಐಕ್ಯತಾ ಹೋರಾಟ ಸಮಿತಿಯ ನೇತೃತ್ವದಲ್ಲಿ ಭೀಮಾ ಕೋರೆಗಾಂವ್ ಶೌರ್ಯ ದಿನದ ಪ್ರಯುಕ್ತ ಉಡುಪಿಯ ಹುತಾತ್ಮರ ಸ್ಮಾರಕದಿಂದ ಸರ್ವಿಸ್ ಬಸ್ ನಿಲ್ದಾಣದ (ಬೋರ್ಡ್ ಹೈಸ್ಕೂಲ್) ವರೆಗೆ ರವಿವಾರ ನಡೆದ 205ನೇ ವಿಜಯೋತ್ಸವ ಜಾಥಾ ಹಾಗೂ ಬಳಿಕ ನಡೆದ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಪ್ರಸ್ತುತ ಈ ಸಮಾಜದಲ್ಲಿರುವ ಹೊಸ ಪೇಶ್ವೆಗಳನ್ನು ದಲಿತ ಜಗತ್ತು ಎದುರಿಸಬೇಕಾಗಿದೆ. ಬ್ರಾಹ್ಮಣಶಾಹಿ ದಮನದ ಸಂಕೇತವಾಗಿ ನಮಗೆ ಭೀಮಾ ಕೋರೆಗಾಂವ್ ಇತಿಹಾಸವಿದೆ ಎಂದವರು ವಿವರಿಸಿದರು.
ದಲಿತ ಚಿಂತಕ ಜಯನ್ ಮಲ್ಪೆ ಮಾತನಾಡಿ, ಇತಿಹಾಸದಲ್ಲಿ ಧರ್ಮಕ್ಕಾಗಿ, ರಾಜ್ಯಕ್ಕಾಗಿ, ಸಿಂಹಾಸನಕ್ಕಾಗಿ ಯುದ್ಧಗಳು ನಡೆದರೆ, ಭೀಮಾ ಕೋರೆಗಾಂವ್ ಯುದ್ಧ ನಡೆದಿರುವುದು, ದಲಿತರ ಘನತೆಗಾಗಿ, ಆತ್ಮಗೌರವಕ್ಕಾಗಿ ಹಾಗೂ ಜಾತೀಯತೆ ವಿರುದ್ಧದ ಯುದ್ಧವಾಗಿತ್ತು ಎಂದರು.
ಮನುವಾದಿಗಳು ಇಂದಿಗೂ ದಲಿತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ದಲಿತ ಚಳುವಳಿಯನ್ನು ಒಟ್ಟಾಗಿ ಬೆಳೆಸುವಲ್ಲಿ ಒಗ್ಗಟ್ಟಿನ ಹೋರಾಟ ನಡೆಸಬೇಕಿದೆ. ಸ್ವಾಭಿಮಾನದ ಸಂಕೇತವಾಗಿ ಸಮಾಜಕ್ಕೆ ತೋರಿಸಲು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಯುವ ಸಮುದಾಯ ಭೀಮಾ ಕೋರೆಗಾಂವ್ ಘಟನೆಯಿಂದ ದಲಿತ ಶಕ್ತಿಯ ಬಗ್ಗೆ ಸ್ಪೂರ್ತಿ ಪಡೆದು ಶೋಷಿತರ ಚಳುವಳಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಜಿಲ್ಲಾ ದಲಿತ ಸಂಘಟನೆಗಳ ಐಕ್ಯತಾ ಸಮಿತಿ ಅಧ್ಯಕ್ಷ ಮಂಜುನಾಥ ಗಿಳಿಯಾರು, ಸುಂದರ ಮಾಸ್ತರ್ ಹಾಗೂ ಹೋರಾಟಗಾರ ಶ್ರೀರಾಮ ದಿವಾಣ ಮಾತನಾಡಿದರು.
ಕಾರ್ಯಕ್ರಮದಲ್ಲಿ ದಲಿತ ಸಂಘಟನೆಗಳ ಪ್ರಮುಖರಾದ ಶ್ಯಾಮರಾಜ್ ಬಿರ್ತಿ, ಶ್ಯಾಮಸುಂದರ ತೆಕ್ಕಟ್ಟೆ, ವಾಸುದೇವ ಮುದೂರು, ರಾಜು ಬೆಟ್ಟಿನಮನೆ, ಹರೀಶ್ ಮಲ್ಪೆ, ಸಂಜೀವ ಬಳ್ಕೂರು, ಗಣೇಶ ನೆರ್ಗಿ, ಹರೀಶ್ ಸಾಲ್ಯಾನ್, ಲೋಕೇಶ್ ಪಡುಬಿದ್ರೆ, ಸಂತೋಷ್ ಕಪ್ಪೆಟ್ಟು ಮುಂತಾದವರು ಉಪಸ್ಥಿತರಿದ್ದರು.
ಶ್ಯಾಮರಾಜ್ ಬಿರ್ತಿ ಸ್ವಾಗತಿಸಿ, ಲೋಕೇಶ ಕಂಚಿನಡ್ಕ ವಂದಿಸಿದರು.
ದಲಿತರ ಮೇಲಾದ ಅನ್ಯಾಯ, ಶಿಕ್ಷಣದ ಹಕ್ಕು ಪಡೆಯಲು ಪೇಶ್ವೆಗಳ ವಿರುದ್ಧ ಹೋರಾಟ ಮಾಡಿದ ಇತಿಹಾಸ ಭೀಮಾ ಕೋರೇಗಾಂವ್ ಆಗಿದೆ. ಇದು ವಿಜಯದ ಸಂಕೇತ. ಸ್ವಾಭಿಮಾನದ ಸಂಕೇತವಾಗಿ ಗೌರವ ಸೂಚಿಸುವ ದಿನವಿದು.
ಸುಂದರ ಮಾಸ್ತರ್, ದಲಿತ ಮುಖಂಡ.
