ಮಂಗಳೂರು | ಬಿಜೆಪಿಯ ಮುಖ ಕಪ್ಪು ಹಣದಲ್ಲಿ ಮುಚ್ಚಿ ಹೋಗಿದೆ: ವೀರಪ್ಪ ಮೊಯ್ಲಿ

ಮಂಗಳೂರು: ದೇಶದಲ್ಲಿ ಭಾರತೀಯ ಜನತಾಪಕ್ಷಕ್ಕೆ ಮುಖವೇ ಇಲ್ಲ. ಅದರ ಮುಖ ಕಪ್ಪು ಹಣದಲ್ಲಿ ಹೋಗಿದೆ ಎಂದು ಮಾಜಿ ಮುಖ್ಯ ಮಂತ್ರಿ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಒಂದೇ ನಾಣ್ಯದ ಎರಡು ಮುಖ ವಿದ್ದಂತೆ ಎಂದು ಕೇಂದ್ರ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿ , ತಾನು ಕೇಂದ್ರದಲ್ಲಿ ಸಚಿವನಾಗಿದ್ದಾಗ ಆ ವ್ಯಕ್ತಿಯನ್ನು ಗಡಿಪಾರು ಮಾಡಲಾಗಿತ್ತು. ಇಂತಹ ವ್ಯಕ್ತಿ ಕಾಂಗ್ರೆಸ್‌ಗೆ ಹಿತವಚಿನ ನೀಡಬೇಕಾಗಿಲ್ಲ . ಅವರೊಬ್ಬ ಸಂವಿಧಾನವನ್ನು ಓದದ ವ್ಯಕ್ತಿ ಎಂದು ಕುಟುಕಿದರು.
ದೇಶದಲ್ಲಿ ಬಿಜೆಪಿ ಗೊಂದಲವನ್ನುಂಟು ಮಾಡಿ, ಕದಡಿದ ನೀರಲ್ಲಿ ಮೀನು ಹಿಡಿಯುವ ಪ್ರಯತ್ನ ಮಾಡುತ್ತಿದೆ. ಈ ಸಂದರ್ಭದಲ್ಲಿ ಜನರನ್ನು ಸರಿಯಾದ ದಾರಿಯಲ್ಲಿ ನಡೆಸಲು ಕಾಂಗ್ರೆಸ್ ಶ್ರಮಿಸುತ್ತಿದೆ ಎಂದು ಹೇಳಿದರು.
ಆರ್ಥಿಕ, ಸಾಮಾಜಿಕವಾಗಿ ದೇಶ ಸಂಕಷ್ಟದ ಸ್ಥಿತಿಯಲ್ಲಿದೆ. ದೇಶದ ಪರಿಸ್ಥಿತಿ ಬಿಗಡಾಯಿಸಿದೆ. ಮುಂದೆ ದೇಶ ಅಂತರಾಷ್ಟೀಯ ಅರ್ಥಿಕ ಬಿರುಗಾಳಿಯಲ್ಲಿ ಕೊಚ್ಚಿ ಹೋಗಬಾರದು. ನಾವು ಅದನ್ನು ಎದುರಿಸಲು ತಯಾರಿ ಮಾಡಬೇಕಾಗಿದೆ. ನಮ್ಮ ದೇಶದ ಸಂಸ್ಕೃತಿ ವಿಮುಖವಾಗಿ ಸಾಗುತ್ತಿದೆ. ಇದು ಯಾವ ರೀತಿಯಲ್ಲಿ ಹೋಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ರಾಜಕೀಯ, ಆರ್ಥಿಕ, ಸಾಮಾಜಿಕ ಸುಭದ್ರತೆ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಶಿಥಿಲವಾಗುತ್ತಿದೆ. ಇದರಿಂದಾಗಿ ಜನಸಾಮಾನ್ಯರ ಬದುಕು ಶಿಥಿಲವಾಗುತ್ತದೆ ಎಂದು ಹೇಳಿದರು.
ವಿಧಾನಸಭೆ, ಲೋಕಸಭೆಗೆ ಮುಂದೆ ನಡೆಯಲಿರುವ ಚುನಾವಣೆಯಲ್ಲಿ ಜನರ ಆಯ್ಕೆ ದೇಶದ ಕಡೆಗೆ ಗಮನ ಕೊಡಬೇಕು. ಕೇವಲ ರಾಜಕೀಯ ಗಮನವಿಟ್ಟು ಇರಬಾರದು. ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿ ರಾಷ್ಟ್ರದ ಹಿತದ ಬಗ್ಗೆ ಆಲೋಚನೆ ಮಾಡುತ್ತಿದೆ. ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ದೇಶವನ್ನು ಮತ್ತೆ ರಾಷ್ಟ್ರೀಯ ವಾಹಿನಿಗೆ ತರಲು ಶ್ರಮಿಸಬೇಕಾಗಿದೆ ಎಂದರು.
ಕ್ರಿಯೆಗೆ ತಕ್ಕ ಪ್ರಕ್ರಿಯೆ ಸುಳಿಯಲ್ಲಿ ಕಾಂಗ್ರೆಸ್ ನಾಯಕರು ಇದ್ದಾರೆ. ಇದು ಕಾಂಗ್ರೆಸ್‌ನ ಸಂಸ್ಕೃತಿ ಅಲ್ಲ. ಕಾಂಗ್ರೆಸ್‌ನ ಯೋಚನೆ ಏನಿದ್ದರೂ ರಚನಾತ್ಮಕವಾಗಿದೆ ಎಂದರು.
ರಾಜ್ಯದಲ್ಲಿ ದೊಡ್ಡ ಅಣೆಕಟ್ಟುಗಳು, ನೀರಾವರಿ ಯೋಜನೆಗಳು , ಎಂಆರ್‌ಪಿಎಲ್, ಸ್ಟೀಲ್ ಪ್ಲಾಂಟ್ ಎಲ್ಲವೂ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಆಗಿದೆ ಎಂದರು.
ಐದು ವರ್ಷಕ್ಕೊಮ್ಮೆ ಸಾಮಾಜಿಕ ಆರ್ಥಿಕ ಸಮೀಕ್ಷೆ ನಡೆಸಿ ಅದರ ಆಧಾರದಲ್ಲಿ ಮೀಸಲಾತಿ ಪರಾಮರ್ಶೆ ಮಾಡಬೇಕು ಎಂದು ತಾನು ಮುಖ್ಯಂತ್ರಿಯಾಗಿದ್ದಾಗ ಕಾಯ್ದೆ ತರಲಾಗಿತ್ತು. ಸುಪ್ರೀಂ ಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಶಾಸ್ತ್ರೀಯವಾಗಿ ಮೀಸಲಾತಿಗೆ ಕೊಡಬೇಕಾಗಿದೆ. ಸಚಿವ ಸಂಪುಟದಲ್ಲಿ ಮೀಸಲಾತಿ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ . ಇದರಿಂದ ಯಾರಿಗೂ ನ್ಯಾಯ ಸಿಗುವುದಿಲ್ಲ ಎಂದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೈಗೊಂಡಿರುವ ಭಾರತ್ ಜೋಡೊ ಯಾತ್ರೆಯಿಂದ ಪಕ್ಷಕ್ಕಿಂತ ದೇಶಕ್ಕೆ ಲಾಭ ಇದೆ. ಭಾರತದ ರಕ್ಷಣೆಗಾಗಿ ಅವರು ಯಾತ್ರೆ ಕೈಗೊಂಡಿದ್ದಾರೆ. ಇದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು.
ನಂದಿನಿ ಅಮುಲ್‌ನೊಂದಿಗೆ ವಿಲೀನ ಸಲ್ಲದು
ಗುಜರಾತ್‌ನ ಅಮುಲ್‌ನೊಂದಿಗೆ ನಂದಿನಿಯನ್ನು ವಿಲೀನಗೊಳಿಸುವ ಕೇಂದ್ರ ಸಚಿವ ಅಮಿತ್ ಶಾ ಅವರ ಚಿಂತನೆ ಮತ್ತು ಹೇಳಿಕೆ ಅವಿವೇಕಿತನದಿಂದ ಕೂಡಿದ್ದಾಗಿದೆ. ಅವರ ಕೇಂದ್ರೀಕರಣವು ಸಂವಿಧಾನದ ಆಶಯಕ್ಕೆ ವಿರೋಧವಾಗಿದೆ. ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಸಹಕಾರಿ ಕ್ಷೇತ್ರದ ವಿಕೇಂದ್ರ್ರಿಕರಣಕ್ಕೆ ಭದ್ರವಾದ ಬುನಾದಿ ಹಾಕಿ ಕೊಟ್ಟಿದ್ದರು ಎಂದು ಮೊಯ್ಲಿ ಅಭಿಪ್ರಾಯಪಟ್ಟರು.
ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಮತ್ತೆ ವೀರಪ್ಪ ಮೊಯ್ಲಿ ಮುಂದಿನ ಚುನಾವಣೆಯಲ್ಲಿ ಕಣಕ್ಕಿಳಿಯುತ್ತಾರೆ ಎನ್ನುವ ವದಂತಿಯ ಬಗ್ಗೆ ಸುದ್ದಿಗಾರರೊಬ್ಬರು ಗಮನ ಸೆಳೆದಾಗ ತಾನು ಕಾರ್ಕಳ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಮತ್ತು ಮಕ್ಕಳೂ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ವಿಪ ಸದಸ್ಯ ಐವನ್ ಡಿ ಸೋಜ, ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ , ಮಾಜಿ ಮೇಯರ್ ಶಶಿಧರ ಹೆಗ್ಡೆ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ , ಕಾರ್ಪೊರೇಟರ್ ಅಬ್ದುಲ್ ಸಲೀಮ್ , ಭಾಸ್ಕರ ಕೆ , ಪಕ್ಷದ ಮುಖಂಡರಾದ ಭರತ್ ಮುಂಡೋಡಿ, ನೀರಜ್‌ಪಾಲ್, ಶುಭೋದಯ ಆಳ್ಳ ಉಪಸ್ಥಿತರಿದ್ದರು.