ಉಡುಪಿ: 31ನೇ ಮದ್ಯ ವ್ಯಸನ ವಿಮುಕ್ತಿ ಮತ್ತು ವಸತಿ ಶಿಬಿರ ಉದ್ಘಾಟನೆ

ಉಡುಪಿ: ಸಂತೋಷ ಹಾಗೂ ದುಃಖದ ವಿಚಾರದಲ್ಲಿ ಮದ್ಯ ಹಾಗೂ ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವ ಯುವಕರ ಸಹಿತ ಜನರು ಭವಿಷ್ಯ ಕಳೆದುಕೊಳ್ಳುತ್ತಿದ್ದು, ಸೂಕ್ತ ಸಲಹೆ ಹಾಗೂ ಚಿಕಿತ್ಸೆ ಮೂಲಕ ದುಶ್ಚಟಗಳನ್ನು ತೊರೆದು ಸ್ವಸ್ಥ ಸಮಾಜ ಕಟ್ಟುವಲ್ಲಿ ಜೊತೆಗೂಡಬೇಕು. ಈ ನಿಟ್ಟಿನಲ್ಲಿ ಹೊಸವರ್ಷ ಸಂದರ್ಭದ ಮದ್ಯಪಾನ, ದೂಮಪಾನ, ಮಾದಕ ವ್ಯಸನಗಳನ್ನು ದೂರ ಮಾಡಲು ಇಂತಹ ಶಿಬಿರ ಸಹಕಾರಿ ಎಂದು ಉಡುಪಿ ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣಪ್ರಸಾದ್ ತಿಳಿಸಿದ್ದಾರೆ.
ಉಡುಪಿಯ ಡಾ. ಎ.ವಿ ಬಾಳಿಗ ಸ್ಮಾರಕ ಆಸ್ಪತ್ರೆ, ಕಮಲ್ ಎ. ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬಯಿ, ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ, ಹಾಜಿ ಅಬ್ದುಲ್ಲ ಚಾರಿಟೇಬಲ್ ಟ್ರಸ್ಟ್ ಉಡುಪಿ, ಇವರ ಸಂಯುಕ್ತ ಆಶ್ರಯದಲ್ಲಿ ಜ.1ರಂದು ದೊಡ್ಡಣಗುಡ್ಡೆಯ ಡಾ. ಎ.ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ಕಮಲ್ ಎ. ಬಾಳಿಗ ಸಭಾಂಗಣದಲ್ಲಿ ನಡೆದ 31ನೇ ಮದ್ಯ ವ್ಯಸನ ವಿಮುಕ್ತಿ ಮತ್ತು ವಸತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಡಾ.ಎ.ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ಮನೋವೈದ್ಯ ಡಾ. ಮಾನಸ್ ಇ.ಆರ್. ಪ್ರಸ್ತಾವಿಕವಾಗಿ ಮಾತನಾಡಿ, 31ನೇ ಮದ್ಯವ್ಯಸನ ವಿಮುಕ್ತಿ ಶಿಬಿರ ಜ.1ರಿಂದ 10ರವರೆಗೆ ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ನಡೆಯಲಿದ್ದು, ಇಲ್ಲಿ ದಾಖಲಾಗುವ ಶಿಬಿರಾರ್ಥಿಗಳಿಂದ 500ರೂ. ಶುಲ್ಕ ಪಡೆಯುತ್ತಿದಾರೆ. ಅವರಿಗೆ 10 ದಿನಗಳ ಕಾಲ ಕಮಲ್ ಎ.ಬಾಳಿಗಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಊಟ, ವಸತಿ,ಚಿಕಿತ್ಸೆಯ ವೆಚ್ಚವನ್ನು ಭರಿಸಲಾಗುತ್ತದೆ. ಪ್ರತಿದಿನ ಶಿಬಿರಾರ್ಥಿಗಳಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದರು.
ಮಣಿಪಾಲ ಕೆ.ಎಂ.ಸಿ ಆಸ್ಪತ್ರೆ ಸಮುದಾಯ ವೈದ್ಯಕೀಯ ವಿಭಾಗದ ಸಹ ಪ್ರಾಧ್ಯಾಪಕ ಡಾ. ಮುರಳಿಧರ್ ಎಂ. ಕುಲಕರ್ಣಿ, ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿಯ ಕಾರ್ಯದರ್ಶಿ ಡಾ. ಕೇಶವ ನಾಯಕ್, ದೊಡ್ಡಣಗುಡ್ಡೆ ಡಾ. ಎ.ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನಾಲ್ವರು ಮದ್ಯ ವಿಮುಕ್ತರನ್ನು ಸನ್ಮಾನಿಸಲಾಯಿತು. ಡಾ.ಎ.ವಿ ಬಾಳಿಗ ಆಸ್ಪತ್ರೆಯ ಆಪ್ತ ಸಮಾಲೋಚಕರಾದ ಭಾಗ್ಯಶ್ರೀ ಎನ್. ಕಾರ್ಯಕ್ರಮ ನಿರೂಪಿಸಿ, ಮನೋವೈದ್ಯ ಡಾ.ದೀಪಕ್ ಮಲ್ಯ ವಂದಿಸಿದರು.
ಡಾ.ಬಾಳಿಗಾ ಆಸ್ಪತ್ರೆಯ ನಿರ್ದೇಶಕ ಹಾಗೂ ಮನೋರೋಗ ತಜ್ಞ ಡಾ. ಪಿ.ವಿ.ಭಂಡಾರಿ ನೇತೃತ್ವದಲ್ಲಿ ಆಸ್ಪತ್ರೆಯ ವತಿಯಿಂದ ಕಳೆದ 20 ವರ್ಷಗಳಲ್ಲಿ ಉಡುಪಿ ಜಿಲ್ಲೆಯಾದ್ಯಂತ ಮದ್ಯವ್ಯಸನದಿಂದಾಗುವ ದುಷ್ಪರಿಣಾಮಗಳ ಕುರಿತು ಸಮುದಾಯದಲ್ಲಿ ಅರಿವು ಮೂಡಿಸುವ ಹಾಗೂ ಮದ್ಯವ್ಯಸನಕ್ಕೆ ಚಿಕಿತ್ಸೆ ನೀಡುತ್ತಾ ಬಂದಿದ್ದು, ಈವರೆಗೆ 30 ಮದ್ಯವ್ಯಸನ ವಿಮುಕ್ತಿ ಶಿಬಿರಗಳನ್ನು ಆಯೋಜಿಸಲಾಗಿದೆ. ಆಸ್ಪತ್ರೆಯಲ್ಲಿ ನಡೆದ ಈ ಶಿಬಿರದಲ್ಲಿ 1950ಕ್ಕೂ ಅಧಿಕ ಮದ್ಯವ್ಯಸನಿಗಳಿಗೆ ಚಿಕಿತ್ಸೆ ನೀಡಲಾಗಿದ್ದು ಸಾಕಷ್ಟು ಮಂದಿ ಶಿಬಿರಾರ್ಥಿಗಳು ವ್ಯಸನ ಮುಕ್ತರಾಗಿದ್ದಾರೆ.
- ಡಾ. ವಿರೂಪಾಕ್ಷ ದೇವರಮನೆ, ಡಾ. ಬಾಳಿಗಾ ಆಸ್ಪತ್ರೆ ಮನೋವೈದ್ಯ