ಕೊಲ್ಲೂರು ಯಾತ್ರೆಗೆ ಬಂದ ವ್ಯಕ್ತಿ ಸಾವು
ಕೊಲ್ಲೂರು: ಕೊಲ್ಲೂರು ಯಾತ್ರೆಗೆ ಆಗಮಿಸಿ ಕೊಡಚಾದ್ರಿಗೆ ತೆರಳಿ ವಾಪಾಸ್ಸಾಗಿ ಹೋಟೆಲೊಂದರ ರೂಮಿನಲ್ಲಿ ತಂಗಿದ್ದ ಕೇರಳ ಮೂಲದ ಭಕ್ತರೊಬ್ಬರು ಅನಾರೋಗ್ಯ ಸಮಸ್ಯೆಯಿಂದ ಇಂದು ಮೃತಪಟ್ಟ ಘಟನೆ ವರದಿಯಾಗಿದೆ.
ಕೇರಳದ ಮಲ್ಲಪುರಂ ಜಿಲ್ಲೆಯ ನಿಲಂಬೂರು ನಿವಾಸಿ ಕೆ.ಪಿ.ವಲ್ಸನ್ (72) ಮೃತ ವ್ಯಕ್ತಿ. ಇವರು ಪತ್ನಿ ವಸಂತಿಕುಮಾರಿ ಹಾಗೂ ಪರಿಚಯಸ್ಥರಾದ ನಾರಾಯಣನ್ ಮತ್ತು ರಾಜನ್ ಎಂಬವರೊಂದಿಗೆ ಡಿ.31ರಂದು ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ಬಂದು ಇಲ್ಲಿನ ಹೋಟೆಲಿನಲ್ಲಿ ತಂಗಿದ್ದರು.
ದೇವರ ದರ್ಶನ ಹಾಗೂ ಕೊಡಚಾದ್ರಿ ಭೇಟಿ ಬಳಿಕ ಜ.1ರಂದು ಬೆಳಿಗ್ಗೆ ಕೆ.ಪಿ.ವಲ್ಸನ್ ಅವರಿಗೆ ಆರೋಗ್ಯದಲ್ಲಿ ಏರುಪೇರಾಗಿ ಅಸ್ವಸ್ಥಗೊಂಡು ಉಸಿರಾಟ ತೊಂದರೆ ಕಾಣಿಸಿಕೊಂಡಿತ್ತು. ಕೂಡಲೇ ಪತ್ನಿ, ಹೋಟೆಲ್ ಸಿಬ್ಬಂದಿ, ನಾರಾಯಣನ್ ಮತ್ತು ರಾಜನ್ ಅವರೊಂದಿಗೆ ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಫುರ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದು ವೈದ್ಯರು ಪರೀಕ್ಷಿಸಿ ದಾರಿಯಲ್ಲಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಮೃತ ಕೆ.ಪಿ.ವಲ್ಸನ್ ಅವರು ಹಲವು ವರ್ಷಗಳಿಂದ ವಯೋಸಹಜ ರಕ್ತದೊತ್ತಡ ಮತ್ತು ಸಕ್ಕರೆ ಖಾಯಲೆಯಿಂದ ಬಳಲುತಿದ್ದು, ಹೃದಯ ಸಂಬಂಧಿ ತೊಂದರೆಯಿಂದ ಮೃತಪಟ್ಟ ಬಗ್ಗೆ ಶಂಕಿಸಲಾಗಿದೆ.
ಮೃತರ ವೈದ್ಯಕೀಯ ಶವಪರೀಕ್ಷೆ ಕೂಡ ಮಾಡಲಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.