ಫೆಲಸ್ತೀನ್ ಕುರಿತ ವಿಶ್ವಸಂಸ್ಥೆ ಮತದಾನಕ್ಕೆ ಇಸ್ರೇಲ್ ಬದ್ಧವಿಲ್ಲ: ನೆತನ್ಯಾಹು

ರಮಲ್ಲಾ, ಜ.1: ಫೆಲೆಸ್ತೀನ್ಗೆ ಸಂಬಂಧಿಸಿದ ‘ತಿರಸ್ಕೃತ’ ವಿಶ್ವಸಂಸ್ಥೆಯ ಮತದಾನಕ್ಕೆ ಇಸ್ರೇಲ್ ಬದ್ಧವಾಗಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಯೆಹೂದಿ ಜನರು ತಮ್ಮ ಸ್ವಂತ ಭೂಮಿಯನ್ನು ವಶಪಡಿಸಿಕೊಳ್ಳುವವರಲ್ಲ ಅಥವಾ ನಮ್ಮ ಶಾಶ್ವತ ರಾಜಧಾನಿ ಜೆರುಸಲೇಂ ಅನ್ನು ವಶಪಡಿಸಿಕೊಳ್ಳುವವರಲ್ಲ ಮತ್ತು ಈ ಐತಿಹಾಸಿಕ ಸತ್ಯವನ್ನು ವಿಶ್ವಸಂಸ್ಥೆಯ ಯಾವುದೇ ನಿರ್ಣಯ ವಿರೂಪಗೊಳಿಸಲು ಸಾಧ್ಯವಿಲ್ಲ. ವಿಶ್ವಸಂಸ್ಥೆಯ ತಿರಸ್ಕೃತ ನಿರ್ಣಯಕ್ಕೆ ಇಸ್ರೇಲ್ ಬದ್ಧವಾಗಿರದು ಎಂದು ವೀಡಿಯೊ ಸಂದೇಶದಲ್ಲಿ ನೆತನ್ಯಾಹು ಹೇಳಿದ್ದಾರೆ.‘ಪೂರ್ವ ಜೆರುಸಲೇಂ ಸೇರಿದಂತೆ ಆಕ್ರಮಿತ ಫೆಲಸ್ತೀನ್ ಪ್ರಾಂತದಲ್ಲಿ ಫೆಲಸ್ತೀನ್ ಜನರ ಮಾನವ ಹಕ್ಕುಗಳ ಮೇಲೆ ಪರಿಣಾಮ ಬೀರುವ ಇಸ್ರೇಲ್ನ ಕಾರ್ಯವಿಧಾನ’ ಎಂಬ ಕರಡು ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಶುಕ್ರವಾರ ಅಂಗೀಕರಿಸಿದೆ.
ಶುಕ್ರವಾರ ವಿಶ್ವಸಂಸ್ಥೆ ಅಂಗೀಕರಿಸಿದ ನಿರ್ಣಯ, ಈ ವಾರ ಅಧಿಕಾರ ಸ್ವೀಕರಿಸಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಸವಾಲಾಗಿ ಪರಿಣಮಿಸಿದೆ. ನೆತನ್ಯಾಹು ನೇತೃತ್ವ ವಹಿಸಿರುವ ಮೈತ್ರಿಸರಕಾರ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ನಾಗರಿಕರನ್ನು ನೆಲೆಗೊಳಿಸುವುದು ಮತ್ತು ವಸಾಹತು ವಿಸ್ತರಣೆಗೆ ಪ್ರಮುಖ ಆದ್ಯತೆ ನೀಡುವುದಾಗಿ ಘೋಷಿಸಿದೆ.