ಅತ್ಯಾಚಾರ ಪ್ರಕರಣ ನಡೆದರೂ, ಬೃಹತ್ ಪ್ರತಿಭಟನೆ ನಡೆಯುತ್ತಿಲ್ಲ: ಮೀನಾಕ್ಷಿ ಬಾಳಿ

ಬೆಂಗಳೂರು, ಜ.1: ನಿರ್ಭಯ ಪ್ರಕರಣ ಬೆಳಕಿಗೆ ಬಂದಾಗ ದೇಶದೆಲ್ಲೆಡೆ ಪ್ರತಿಭಟನೆಗಳು, ಪ್ರತಿರೋಧಗಳು ನಡೆದವು. ಆದರೆ, ಆ ಘಟನೆಯ ಬಳಿಕ ದೇಶದಲ್ಲಿ ಸಾಲು ಸಾಲು ಅತ್ಯಾಚಾರ ಪ್ರಕರಣಗಳು ನಡೆದರೂ ಏಕೆ ದೊಡ್ಡಮಟ್ಟದ ಪ್ರತಿಭಟನೆಗಳು ಈ ದೇಶದಲ್ಲಿ ನಡೆಯಲಿಲ್ಲ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಡಾ.ಮೀನಾಕ್ಷಿ ಬಾಳಿ ಪ್ರಶ್ನಿಸಿದ್ದಾರೆ.
ರವಿವಾರ ನಗರದಲ್ಲಿ ವಿವಿಧ ಸಂಘಟನೆಗಳು ಆಯೋಜಿಸಿದ್ದ ‘ಸಮಕಾಲೀನ ಸಂಘರ್ಷ ಸಮಾನತೆಯತ್ತ ನಡಿಗೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ದೇಶದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಭ್ರಷ್ಟಾಚಾರವನ್ನು ಖಂಡಿಸಿ ಅಣ್ಣ ಹಜಾರೆ ಹಾಗೂ ಅರವಿಂದ್ ಕೇಜ್ರಿವಾಲ್ ದೊಡ್ಡ ಪ್ರತಿಭಟನೆಗಳನ್ನು ನಡೆಸಿದ್ದರು. ಆದರೆ ಈಗಲೂ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೇಳಿದರು.
ಸಮಾಜಿಕ ಕಾರ್ಯಕರ್ತೆ ಮೈತ್ರಿಯಿ ಕೃಷ್ಣನ್ ಮಾತನಾಡಿ, ಸರಕಾರ ಎಪ್ಪತೈದನೆಯ ಸ್ವಾತಂತ್ರ್ಯ ದಿನಾಚರಣೆಯಲ್ಲಿದ್ದೇವೆ ಎಂದು ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಚಾರವನ್ನು ಮಾಡುತ್ತಿದೆ. ಆದರೆ ದೇಶದ ಮಹಿಳೆಯರು ಯಾವ ಪರಿಸ್ಥಿತಿಯಲ್ಲಿದ್ದಾರೆ ಎಂದು ತಿಳಿದುಕೊಳ್ಳಬೇಕಾಗಿದೆ. ಇಂದು ದೇಶದಲ್ಲಿ ಶೇ.95 ಮಹಿಳಾ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ನೀಡುತ್ತಿಲ್ಲ. ಕಾನೂನಿನ ಅಡಿಯಲ್ಲಿ ರಕ್ಷಣೆಯನ್ನೂ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಅಮಾನವೀಯವಾದ ಮರ್ಯಾದೆ ಹತ್ಯೆಗಳು ನಡೆಯುತ್ತಿವೆ. ಯಾರೊಂದಿಗೆ ವಿವಾಹ ಆಗಬೇಕು ಎಂದು ನಿರ್ಧರಿಸುವ ಸ್ವತಂತ್ರ್ಯವೂ ಸಿಗುತ್ತಿಲ್ಲ ಎಂದ ಅವರು, ವಿದ್ಯಾರ್ಥಿಗಳನ್ನು ಧರ್ಮದ ಹೆಸರಿನಲ್ಲಿ ವಿಭಜಿಸಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಈ ವರ್ಷ ಏನಾಗಿದೆ ಎಂದು ಎಲ್ಲರಿಗೂ ತಿಳಿದಿದೆ. ಇಷ್ಟೂ ವರ್ಷ ಮಕ್ಕಳಿಗೆ ಶಿಕ್ಷಣವನ್ನು ಕೊಡಬೇಕು ಎಂದು ಹೋರಾಟಗಳು ನಡೆದಿವೆ. ಆದರೆ ಈ ವರ್ಷ ವಿದ್ಯಾರ್ಥಿಗಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡುವ ಹುನ್ನಾರಗಳು ನಡೆದಿವೆ. ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಶಿಕ್ಷಣ ನೀಡಬಾರದು ಎಂದು ಹೇಳುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಕವಯತ್ರಿ ಕೆ.ಶರೀಫಾ ಮಾತನಾಡಿ, 1981ರಲ್ಲಿ ಬಿಜಾಪುರದಲ್ಲಿ ಒಂದು ಘಟನೆ ನಡೆದಿದೆ. ಮುಸ್ಲಿಮ್ ಮಹಿಳೆಯರಿಗೆ ಸಿನೆಮಾಗಳನ್ನು ನಿರಾಕರಣೆ ಮಾಡಲಾಗಿತ್ತು. ಹಣ್ಣು ಮಕ್ಕಳು ಅಂತರ್ಜಾತಿ ವಿವಾಹ ಆಗುತ್ತಿದ್ದ ಕಾಲಘಟ್ಟ ಅದಾಗಿತ್ತು. ಹಾಗಾಗಿ ಸಿನೆಮಾ ನೋಡಿದರೆ ಹೆಣ್ಣು ಮಕ್ಕಳು ಹಾಳಾಗುತ್ತಾರೆ ಎಂದು ಸಿನೆಮಾ ನಿಷೇಧಿಸಿದ್ದರು ಎಂದರು.
ಸಿನೆಮಾ ನೋಡಿದ ಹೆಂಗಸನ್ನು ಕೆಲವು ಹುಡುಗರು ದಾರಿಯಲ್ಲಿ ಅಡ್ಡಗಟ್ಟಿ ತಲ್ವಾರುಗಳನ್ನು ಹಿಡಿದು ಪೊಲೀಸ್ ಠಾಣೆಯವರೆಗೆ ಓಡಿಸಿದರು. ಅವಳಿಗೆ ರಕ್ಷಣೆಯನ್ನು ನೀಡಿದರೆ ಠಾಣೆಗೆ ಬೆಂಕಿಯನ್ನು ಇಡುತ್ತೇವೆಂದು ಅವರು ಪೊಲೀಸರಿಗೆ ದಮ್ಕಿ ಹಾಕಿದ್ದರು. ಆದರೆ ಪೋಲೀಸರು ರಕ್ಷಣೆ ನೀಡಿದರು. ಅಂದು ಸಿನೆಮಾಗಾಗಿ ಹೋರಾಡಿದವಳು, ಇಂದು ‘ಹಿಜಾಬ್‍ಗಾಗಿ ಹೋರಾಡುತ್ತಿದ್ದಾಳೆ ಎಂದರು.
ಹೀಗೆ ನಾವು ಒಂದೊಂದೆ ಹೆಜ್ಜೆಯನ್ನು ಮುಂದಕ್ಕೆ ಇಟ್ಟರೆ, ಇವರು ಎರಡು ಹೆಜ್ಜೆ ಹಿಂದಕ್ಕೆ ಎಳೆಯುತ್ತಿದ್ದಾರೆ. ಹಾಗಾಗಿ ನಾವು ಬೀದಿಗೆ ಇಳಿದು ಹೋರಾಟ ನಡೆಸಬೇಕಾಗಿದೆ. ಆದರೆ ಬೀದಿಗೆ ಇಳಿದವರನ್ನು ಅತ್ಯಚಾರ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ಕಾರ್ಯಕ್ರಮದಲ್ಲಿ ವಿಮಲಾ ಕೆ.ಎಸ್., ಪತ್ರಕರ್ತೆ ಸಿ.ಜಿ.ಮಂಜುಳಾ, ರೂಥ್ ಮನೋರಮಾ, ಅಖಿಲಾ ವಿದ್ಯಾಸಂದ್ರ, ರಕ್ಷಿತಾ ಬಿ.ವಿ., ಕೀರ್ತನಾ, ಬಿಂದು ರಕ್ಷಿದಿ, ಶಫಿಯಾ ಶಿರೀನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







