15ನೇ ದಿನಕ್ಕೆ ಕಾಲಿಟ್ಟ ಸರಕಾರಿ ನೌಕರರ ಧರಣಿ: ಮನವೊಲಿಕೆಗೆ ಸಚಿವರ ಯತ್ನ

ಬೆಂಗಳೂರು, ಜ.1: ಹಳೆಯ ಪಿಂಚಣಿ ವ್ಯವಸ್ಥೆ (ಒಪಿಎಸ್) ಜಾರಿ ಮಾಡಿ ಎಂದು ಆಗ್ರಹಿಸಿ ಸರಕಾರಿ ನೌಕರರು ನಡೆಸುತ್ತಿರುವ ಧರಣಿ ಇಂದಿಗೆ(ಸೋಮವಾರ) 15ನೆ ದಿನಕ್ಕೆ ಕಾಲಿಟ್ಟಿದ್ದು, ಈ ನಡುವೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ನೌಕರರ ಮನವೊಲಿಕೆಗೆ ಯತ್ನಿಸಿದರು.
ರವಿವಾರ ಇಲ್ಲಿನ ಫ್ರೀಡಂಪಾರ್ಕಿನ ಮೈದಾನದಕ್ಕೆ ಆಗಮಿಸಿದ ಸಚಿವ ಡಾ.ಸುಧಾಕರ್, ಧರಣಿ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಿ. ಅಲ್ಲದೆ, ನೌಕರರು ಇಲ್ಲದಿದ್ದರೆ, ಯಾವುದೇ ಸರಕಾರ ಉತ್ತಮ ಆಡಳಿತ ನೀಡಲಾಗುವುದಿಲ್ಲ. ನಿರಂತರ ಹೋರಾಟಕ್ಕೆ ಮುಂದಾದರೆ ಆಡಳಿತ ವ್ಯವಸ್ಥೆಗೆ ಪೆಟ್ಟು ಬೀಳಲಿದೆ ಎಂದು ಹೇಳಿದರು.
ನೌಕರರ ಬೇಡಿಕೆಗಳ ಬಗ್ಗೆ ಮುಂದಿನ ಬಜೆಟ್ ಅಧಿವೇಶನದಲ್ಲಿ ಸರಕಾರ ಚರ್ಚೆ ಮಾಡಲಿದ್ದು, ಧರಣಿ ಕೈಬಿಡಿ. ಅಲ್ಲದೆ, ಎನ್‍ಪಿಎಸ್ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಮುಖ್ಯಮಂತ್ರಿಗಳು ಮಾತುಕತೆ ನಡೆಸಲು ವ್ಯವಸ್ಥೆ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು.
ಆನಂತರ ಎನ್‍ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತರಾಮ್ ಮಾತನಾಡಿ, ಎನ್‍ಪಿಎಸ್ ನೌಕರರ ಬೇಡಿಕೆ ಕುರಿತು ಸದನದಲ್ಲಿ ಚರ್ಚೆಯಾಗಬೇಕು. ಇನ್ನೂ, ಸಚಿವರು ಸಂಘದ ಪದಾಧಿಕಾರಿಗಳನ್ನು ಸಿಎಂ ಅವರೊಂದಿಗೆ ಭೇಟಿ ಮಾಡಿಸುವುದಾಗಿ ನೀಡಿರುವ ಭರವಸೆಯನ್ನು ಸಂವಿಧಾನಾತ್ಮಕವಾಗಿ ಸ್ವಾಗತಿಸುತ್ತಿದ್ದೇವೆ. ಆದರೆ ಸರಕಾರದ ನಡೆಯನ್ನು ಗಮನಿಸಿಯೇ ಸಂಘದ ತೀರ್ಮಾನಗಳಾಗುತ್ತವೆ ಎಂದರು.
ರೆಡ್ಡಿ ಭರವಸೆ: ಧರಣಿ ನಿರತರನ್ನು ಬೆಂಬಲಿಸಿ ಮಾತನಾಡಿದ ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ದ ಸಂಸ್ಥಾಪಕ ಜನಾರ್ದನ ರೆಡ್ಡಿ, ನನ್ನ ತಂದೆಯೂ ನಿವೃತ್ತ ಪೇದೆಯಾಗಿದ್ದರಿಂದ ಸರಕಾರಿ ನೌಕರರ ಸಮಸ್ಯೆಗಳ ಬಗ್ಗೆ ನನಗರಿವಿದೆ. 15 ದಿನದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತಿದ್ದು, ಅದರಲ್ಲಿ ನೌಕರರ ಪರವಾದ ಬೇಡಿಕೆಗಳನ್ನಿಟ್ಟುಕೊಂಡು ಚುನಾವಣೆಯಲ್ಲಿ ಹೋರಾಡುತ್ತೇನೆ ಎಂದರು.
ಅಲ್ಲದೆ, ಮುಂದೊಂದು ದಿನ ಅಧಿಕಾರಕ್ಕೆ ಬರುತ್ತೇವೆ. ಈ ರಾಜ್ಯದ ಜನರಿಗೆ, ನೌಕರರಿಗೆ ಒಳ್ಳೆಯದನ್ನು ಮಾಡಬೇಕು ಎಂದು ಪಣ ತೊಟ್ಟಿದ್ದೇನೆ. ನಿಮ್ಮ ಹೋರಾಟದಲ್ಲಿ ಜೊತೆಗಿರುತ್ತೇನೆ ಎಂದು ನುಡಿದರು.







