ಸತ್ಯ ವಿರೂಪಗೊಳಿಸುತ್ತಿರುವ ಅಮೆರಿಕ: ಚೀನಾ ಆರೋಪ

ಬೀಜಿಂಗ್, ಜ.1: ಇತ್ತೀಚೆಗೆ ವಿವಾದಿತ ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಅಮೆರಿಕ ಮತ್ತು ಚೀನಾದ ವಿಮಾನಗಳ ಮುಖಾಮುಖಿ ಪ್ರಕರಣದಲ್ಲಿ ಅಮೆರಿಕ ಸತ್ಯವನ್ನು ವಿರೂಪಗೊಳಿಸುತ್ತಿದೆ. ಉದ್ದೇಶಪೂರ್ವಕವಾಗಿ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿದೆ ಎಂದು ಚೀನಾ ರಕ್ಷಣಾ ಇಲಾಖೆಯ ವಕ್ತಾರರು ಹೇಳಿದ್ದಾರೆ.
ಡಿಸೆಂಬರ್ 21ರಂದು ಚೀನಾ ನೌಕಾಪಡೆಯ ಜೆ-11 ಜೆಟ್ ಯುದ್ಧವಿಮಾನ ಮತ್ತು ಅಮೆರಿಕ ವಾಯುಪಡೆಯ ಆರ್ಸಿ-135 ಯುದ್ಧವಿಮಾನ ದಕ್ಷಿಣ ಚೀನಾ ಸಮುದ್ರದ ಪ್ಯಾರಾಸೆಲ್ ದ್ವೀಪದ ಬಳಿ ಆಗಸದಲ್ಲಿ ಮುಖಾಮುಖಿಯಾಗಿದ್ದವು. ಅಮೆರಿಕದ ವಿಮಾನದ ಮೂತಿಯ 10 ಅಡಿ ದೂರದಲ್ಲಿ ಜೆ-11 ಜೆಟ್ವಿಮಾನ ಎದುರಾದ ಸಂದರ್ಭ ಅಮೆರಿಕ ವಿಮಾನ ತಕ್ಷಣ ಪಥ ಬದಲಿಸಿದ್ದರಿಂದ ಸಂಭಾವ್ಯ ಭಾರೀ ದುರಂತ ತಪ್ಪಿದೆ. ಅಮೆರಿಕದ ಯುದ್ಧವಿಮಾನದಲ್ಲಿ ಸುಮಾರು 30 ಸಿಬಂದಿಗಳಿದ್ದರು ಎಂದು ಅಮೆರಿಕದ ರಕ್ಷಣಾ ಇಲಾಖೆ ಹೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಚೀನಾದ ಸದರ್ನ್ ಥಿಯೇಟರ್ ಕಮಾಂಡ್(ದಕ್ಷಿಣ ವಲಯದ ತುಕಡಿ)ಯ ವಕ್ತಾರ ಟಿಯಾನ್ ಜುನ್ಲಿ ‘ಅಮೆರಿಕವು ಅಂತರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದೆ ಮತ್ತು ಚೀನಾ ಪೈಲಟ್ಗಳ ಜೀವಕ್ಕೆ ಅಪಾಯ ಒಡ್ಡಿದೆ’ ಎಂದು ಆರೋಪಿಸಿದ್ದಾರೆ. ‘ವಿವಾದಿತ ದಕ್ಷಿಣ ಚೀನಾ ಸಮುದ್ರದ ಬಳಿ ಅಂತರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿ ಅಮೆರಿಕದ ವಿಮಾನ ಹಾರಾಟ ನಡೆಸಿದೆ. ಚೀನಾದ ನಿರಂತರ ಎಚ್ಚರಿಕೆಯನ್ನು ಕಡೆಗಣಿಸಿ ಅಪಾಯಕಾರಿ ರೀತಿಯಲ್ಲಿ ನಮ್ಮ ವಿಮಾನದತ್ತ ಮುನ್ನುಗ್ಗಿ ಬಂದಿದೆ’ ಎಂದವರು ಹೇಳಿದ್ದಾರೆ. ಅಮೆರಿಕವು ಮುಂಚೂಣಿ ನೌಕಾ ಮತ್ತು ವಾಯುಪಡೆಗಳ ಕ್ರಮಗಳನ್ನು ನಿರ್ಬಂಧಿಸಲು, ಸಂಬಂಧಿತ ಅಂತರಾಷ್ಟ್ರೀಯ ಕಾನೂನುಗಳು ಮತ್ತು ಒಪ್ಪಂದಗಳಿಗೆ ಕಟ್ಟುನಿಟ್ಟಾಗಿ ಬದ್ಧವಾಗಿರಲು, ಸಮುದ್ರ ಮತ್ತು ಆಕಾಶದಲ್ಲಿ ಅಪಘಾತ ತಡೆಯಲು ಕ್ರಮ ಕೈಗೊಳ್ಳಬೇಕು ಎಂದವರು ಆಗ್ರಹಿಸಿದ್ದಾರೆ.